Advertisement

“ಪರಿಸರ ಸಂರಕ್ಷಣೆ ಜೀವನ ಧ್ಯೇಯವಾಗಬೇಕು’

01:05 AM Feb 22, 2019 | |

ಮಂಗಳೂರು: ಪರಿಸರವನ್ನು ಅಭಿವೃದ್ಧಿ, ಅನುಕೂಲಗಳ ಹೆಸರಿನಲ್ಲಿ ನಾಶ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಪ್ರಜ್ಞೆಯನ್ನು ಬೆಳೆಸುವ ಕಾರ್ಯ ಅಗತ್ಯ ಮತ್ತು ಇದು ಜೀವನ ಧ್ಯೇಯವಾಗಬೇಕು ಎಂದು ಮಂಗಳೂರಿನ 3ನೇ ಹೆಚ್ಚುವರಿ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಮುರಲೀಧರ್‌ ಪೈ ಬಿ. ಹೇಳಿದರು.

Advertisement

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಜಿಲ್ಲಾಡಳಿತ, ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಸಹಯೋಗದಲ್ಲಿ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಪ್ರಶಸ್ತಿ ಮೂಲಕ ಶಾಲೆಗಳಲ್ಲಿ ಪರಿಸರ ಸಂರಕ್ಷಣೆಗೆ ಪ್ರೋತ್ಸಾಹ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು. 

ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು ಮಾತನಾಡಿ, ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸುವುದು ಅಗತ್ಯ. ಪರಿಸರ ಮಿತ್ರ ಶಾಲೆ ಪ್ರಶಸ್ತಿ ಈ ನಿಟ್ಟಿನಲ್ಲಿ ಪ್ರೋತ್ಸಾಹದಾಯಕವಾಗಿದೆ ಎಂದು ಹೇಳಿ ಪ್ರಶಸ್ತಿ ವಿಜೇತ ಶಾಲೆಗಳನ್ನು ಅಭಿನಂದಿಸಿದರು. 

ಮೀನುಗಾರಿಕೆ ಕಾಲೇಜಿನ ಪ್ರಾಧ್ಯಾಪಕ ಡಾ| ಎಸ್‌.ಎಂ. ಶಿವಪ್ರಕಾಶ್‌ ಉಪನ್ಯಾಸ ನೀಡಿದರು. 

ಸುರಿಬೈಲು ದ.ಕ. ಜಿ.ಪಂ. ಉನ್ನತೀಕರಿಸಿದ ಹಿ.ಪ್ರಾ. ಶಾಲೆಗೆ ಜಿಲ್ಲಾ ಪರಿಸರ ಮಿತ್ರ ಶಾಲಾ ಪ್ರಶಸ್ತಿ ವಿತರಿಸಲಾಯಿತು. ಜಿಲ್ಲೆಯ 10 ಶಾಲೆಗೆ ಹಸಿರು ಶಾಲೆ, 10 ಶಾಲೆಗಳಿಗೆ ಹಳದಿ ಶಾಲೆ ಪ್ರಶಸ್ತಿ ವಿತರಿಸಲಾಯಿತು. ಲೋಕೇಶ್‌ ಅವರು ಉತ್ತಮ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಸ್ತಿ ವಿಜೇತರಾದರು. 

Advertisement

ನ್ಯಾ| ಗಂಗಾಧರ್‌, ಮೇಯರ್‌ ಭಾಸ್ಕರ್‌, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಶ್‌ ಎಲ್‌. ರಾಡ್ರಿಗಸ್‌, ಡಿಡಿಪಿಐ ಶಿವರಾಮಯ್ಯ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ದೇಶಕ ಡಾ| ಕೆ.ವಿ. ರಾವ್‌, ವಿಜ್ಞಾನ ಪರಿಷತ್‌ ಜಿಲ್ಲಾ ಅಧ್ಯಕ್ಷ ಡಾ| ಹಾಜಿ ಅಬೂಬಕ್ಕರ್‌ ಉಪಸ್ಥಿತರಿದ್ದರು. ರಾಜಶೇಖರ ಬಿ. ಪುರಾಣಿಕ್‌ ಸ್ವಾಗತಿಸಿದರು. ಜಯಪ್ರಕಾಶ್‌ ಬಿ. ಪುರಾಣಿಕ್‌ ಪ್ರಸ್ತಾವನೆಗೈದರು. ಕರುಣಾಕರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next