Advertisement

ಪರಿಸರ ಸ್ವಚ್ಛತೆ ಎಲ್ಲರ ಆದ್ಯ ಕರ್ತವ್ಯ

07:20 AM Feb 03, 2019 | Team Udayavani |

ಚನ್ನಪಟ್ಟಣ: ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಸುಂದರ ಪರಿಸರ ಹಾಳು ಮಾಡುವ ಫ್ಲೆಕ್ಸ್‌, ಬ್ಯಾನರ್‌ಗಳನ್ನು ಹಾಕದಂತೆ ನಾಯಕರು ತಮ್ಮ ಬೆಂಬಲಿಗರಿಗೆ ಅರಿವು ಮೂಡಿಸಬೇಕು ಎಂದು ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣಸ್ವಾಮಿ ಸಲಹೆ ನೀಡಿದರು.

Advertisement

ಪಟ್ಟಣದ ಮಂಗಳವಾರಪೇಟೆಯಲ್ಲಿ ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ, ಅನಗತ್ಯ ಅಂದಗೆಡಿಸುವ ಯಾವುದೇ ಬ್ಯಾನರ್‌ಗಳನ್ನು ಬಳಸಬಾರದು. ಬೆಂಗಳೂರಿನಲ್ಲಿ ಫ್ಲೆಕ್ಸ್‌, ಬ್ಯಾನರ್‌ ನಿಷೇಧವಾಗಿದೆ. ಇಲ್ಲಿಯೂ ಆ ತೀರ್ಮಾನವನ್ನು ಕೈಗೊಳ್ಳಬೇಕಾಗಿದೆ.

ನಮ್ಮನ್ನು ಕಾಪಾಡುವ ಪರಿಸರವನ್ನು ನಾವು ಕಾಪಾಡಬೇಕು ಎಂಬ ಮನೋಭಾವವಿರಬೇಕು. ಬಲವಂತದಿಂದ ಯಾವುದೇ ಕೆಲಸ ಆಗುವುದಿಲ್ಲ. ಸ್ವಚ್ಛತೆ ಕಾಪಾಡುವುದು ನಮ್ಮ ಸಂಸ್ಕೃತಿಯಾಗಬೇಕು. ಪರಿಸರಕ್ಕೆ ಉಪಯೋಗವಾಗುವ ಗಿಡ-ಮರಗಳನ್ನು ಬೆಳೆಸಬೇಕು. ಸಾರ್ವಜನಿಕ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ನ್ಯಾಯಾಲಯ ದೇವಾಲಯವಿದ್ದಂತೆ: ನ್ಯಾಯಾಲಯ ಒಂದು ದೇವಾಲಯವಿದ್ದಂತೆ. ನ್ಯಾಯಾಲಯದ ಆವರಣದ ಪಕ್ಕದಲ್ಲಿರುವ ವ್ಯಾಜ್ಯವನ್ನು ತೀರ್ಮಾನ ಮಾಡಲು ನ್ಯಾಯಾಲಯ ಇದೆ. ಆದೇಶ ಬರುವವರೆಗೂ ಕಾಯಬೇಕು. ಯಾರಿಗಾದರೂ ಸ್ವಂತಕ್ಕೆ ಸೇರಿದ್ದರೂ ನ್ಯಾಯಾಲಯಕ್ಕೆ ಒಮ್ಮತದಿಂದ ಬಿಟ್ಟುಕೊಡಬೇಕು. ನ್ಯಾಯಾಲಯ ಹತ್ತಾರು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರಿಗೇ ಇದರಿಂದ ಅನುಕೂಲವಲ್ಲದೇ ಬೇರೆ ಯಾರಿಗೂ ಅಲ್ಲ ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು.

ಎಲ್ಲರಿಗೂ ನ್ಯಾಯ ಸಿಗಲಿ: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮಾತನಾಡಿ, ನ್ಯಾಯಾಲಯ ಕಟ್ಟಡ ಸುಂದರವಾಗಿರುವಂತೆಯೇ ಅಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳೂ ಸಹ ಸುಂದರವಾಗಿ, ಸುಗಮವಾಗಬೇಕು. ತ್ವರಿತವಾಗಿ ಎಲ್ಲರಿಗೂ ನ್ಯಾಯ ಸಿಗಬೇಕು. ಸಂವಿಧಾನದ ಉದ್ದೇಶ ಸರ್ವರಿಗೂ ನ್ಯಾಯ ಸಿಗಬೇಕು ಎಂಬುದೇ ಆಗಿದೆ.

Advertisement

ರಾಜ್ಯದಲ್ಲಿ ಸುಮಾರು 1307 ನ್ಯಾಯಾಲಯಗಳಿದ್ದು, ಶೇ.60ರಷ್ಟು ಕಟ್ಟಡಗಳು ದುರಸ್ತಿಯಾಗಬೇಕಿದೆ. ಪ್ರಸ್ತುತ 43 ಕೋರ್ಟ್‌ಗಳನ್ನು ಮಂಜೂರು ಮಾಡಲಾಗಿದ್ದು, 13 ಕೋರ್ಟ್‌ಗಳು ಕೌಟುಂಬಕ ನ್ಯಾಯಾಲಯಗಳನ್ನಾಗಿ, ಮಹಿಳೆ ಮತ್ತು ಮಕ್ಕಳಿಗೆ ವಿಶೇಷ ಕೋರ್ಟ್‌ ಹಾಗೂ 3 ಕಮರ್ಷಿಯಲ್‌ ಕೋರ್ಟ್‌ಗಳನ್ನು ಮಂಜೂರು ಮಾಡಿದ್ದೇವೆ. ಜನಸಮುದಾಯಕ್ಕೆ ಶೀಘ್ರ ನ್ಯಾಯ ದೊರಕಿಸಿಕೊಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.

ನ್ಯಾಯಾಂಗದಿಂದ ಪ್ರಜಾಪ್ರಭುತ್ವ ಉಳಿವು: ಪ್ರಜಾಪ್ರಭುತ್ವ ಉಳಿಯಲು ನ್ಯಾಯಾಂಗದಿಂದ ಮಾತ್ರ ಸಾಧ್ಯ. ಈ ದಾರಿಯಲ್ಲಿ ಹಲವು ಸಮಸ್ಯೆಗಳು, ಸವಾಲುಗಳಿವೆ. ಜಾತಿ, ಧರ್ಮ ಸಂಕಟದಿಂದ ನಾವು ಇಂದಿಗೂ ತಪ್ಪಿಸಿಕೊಳ್ಳಲಾಗಿಲ್ಲ. ಅದು ಬದಲಾವಣೆಯಾಗಬೇಕು. ಕಾನೂನು ಕ್ಷೇತ್ರಕ್ಕೆ ಬರುವವರಿಗೆ ಪ್ರೋತ್ಸಾಹ ನೀಡಲು ಮಾಸಿಕ ಭತ್ಯೆಯನ್ನು 2 ಸಾವಿರ ರೂ.ಗಳಿಗೆ 24 ತಿಂಗಳವರೆಗೆ ನೀಡುತ್ತಿದ್ದೇವೆ. ಅದನ್ನು 5 ಸಾವಿರಕ್ಕೆ ಹೆಚ್ಚಿಸಲು ಪ್ರಸ್ತಾವನೆ ಬಂದಿದೆ, ಸರ್ಕಾರದ ಗಮನ ಸೆಳೆದು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ರಾಜಿ ಸಂಧಾನಕ್ಕೆ ಆದ್ಯತೆ ನೀಡಿ: ಮಧ್ಯಪ್ರದೇಶ ಹೈಕೋರ್ಟ್‌ ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್‌ ಮಾತನಾಡಿ, ನ್ಯಾಯಾಲಯಗಳತ್ತ ಬರುವ ಮೊದಲು ತಮ್ಮಲ್ಲೇ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬೇಕು. ರಾಜಿ ಸಂಧಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ನ್ಯಾಯಾಲಯಕ್ಕೆ ಬರುವುದರಿಂದ ನಮಗೇ ನಷ್ಟವೇ ಹೊರತು ಯಾವ ಪ್ರಯೋಜನವಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ಬರುವ ಮುನ್ನ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು.

ನ್ಯಾಯದಾನ ಆಶ್ವಾಸನೆ ನೀಡಿ: ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಮಾತನಾಡಿ, ಕಾಲಮಿತಿಯಲ್ಲಿ ನ್ಯಾಯ ಸಿಗದ ಕಾರಣ ನ್ಯಾಯಾಲಯಗಳತ್ತ ಬರಲು ಸಾಮಾನ್ಯರಿಗೆ ಭಯಪಡುತ್ತಿದ್ದಾರೆ. ವಕೀಲರು, ನ್ಯಾಯಾಧೀಶರು ನ್ಯಾಯಾಲಯಕ್ಕೆ ಬರುವವರಿಗೆ ಶೀಘ್ರ ನ್ಯಾಯದಾನ ಮಾಡುವ ಆಶ್ವಾಸನೆ ನೀಡಬೇಕು. ಲೋಕ ಅದಾಲತ್‌ ನಂತಹ ಪರ್ಯಾಯ ವ್ಯವಸ್ಥೆಗಳನ್ನೂ ಸಹ ಬಳಕೆ ಮಾಡಿಕೊಳ್ಳುವಂತೆ ಆರಿವು ಮೂಡಿಸಬೇಕು ಎಂದು ಹೇಳಿದರು.

ಸಂಸದ ಡಿ.ಕೆ.ಸುರೇಶ್‌ ಅವರು ತಮ್ಮ ಅನುದಾನದಿಂದ ಗ್ರಂಥಾಲಯಕ್ಕೆ 10 ಲಕ್ಷ ರೂ. ನೀಡುವುದಾಗಿ ಪ್ರಕಟಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು, ದಾನಿಗಳನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು.

ಹೈಕೋರ್ಟ್‌ ಮಹಾ ವಿಲೇಖನಾಕಾರಿ ವಿ.ಶ್ರೀಶಾನಂದ, ಮುಖ್ಯ ಅಭಿಯಂತರ ರವೀಂದ್ರಬಾಬು, ಜಿಲ್ಲಾಕಾರಿ ಡಾ.ಕೆ.ರಾಜೇಂದ್ರ, ವಕೀಲರ ಸಂಘದ ಅಧ್ಯಕ್ಷ ಕೆ.ಟಿ.ತಿಮ್ಮೇಗೌಡ ಉಪಸ್ಥಿತರಿದ್ದರು. ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಎಂ.ಜಿ.ಉಮಾ ಅವರು ಸ್ವಾಗತಿಸಿದರು.

ನಮ್ಮ ಬದುಕನ್ನು ಸಮತೋಲನವಾಗಿ ತೆಗೆದುಕೊಂಡು ಹೋಗಲು ನ್ಯಾಯಾಂಗ ವ್ಯವಸ್ಥೆಯೇ ಕಾರಣ. ಅದನ್ನು ಗೌರವಿಸುವ ಕೆಲಸವಾಗಬೇಕು. ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ನ್ಯಾಯಮೂರ್ತಿ ಹುಲುವಾಡಿ ರಮೇಶ್‌ ಶ್ರಮಿಸಿದ್ದಾರೆ. ತಾಲೂಕಿನಲ್ಲಿ ಕೆರೆಗಳು ತುಂಬಿವೆ ಎಂದರೆ ಅದು ಅವರ ಪರಿಶ್ರಮದ ಫ‌ಲವಾಗಿದೆ. ಅಲ್ಲದೆ, ಹೈಕೋರ್ಟ್‌ ಮಾದರಿಯಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ರಮೇಶ್‌ ಕಾರಣರಾಗಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ನ್ಯಾಯಾಂಗ ವ್ಯವಸ್ಥೆಯಿಂದ ಬದುಕು ಸಮತೋಲನ: ನಮ್ಮ ಬದುಕನ್ನು ಸಮತೋಲನವಾಗಿ ತೆಗೆದುಕೊಂಡು ಹೋಗಲು ನ್ಯಾಯಾಂಗ ವ್ಯವಸ್ಥೆಯೇ ಕಾರಣ. ಅದನ್ನು ಗೌರವಿಸುವ ಕೆಲಸವಾಗಬೇಕು. ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ನ್ಯಾಯಮೂರ್ತಿ ಹುಲುವಾಡಿ ರಮೇಶ್‌ ಶ್ರಮಿಸಿದ್ದಾರೆ. ತಾಲೂಕಿನಲ್ಲಿ ಕೆರೆಗಳು ತುಂಬಿವೆ ಎಂದರೆ ಅದು ಅವರ ಪರಿಶ್ರಮದ ಫ‌ಲವಾಗಿದೆ. ಅಲ್ಲದೆ, ಹೈಕೋರ್ಟ್‌ ಮಾದರಿಯಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ರಮೇಶ್‌ ಕಾರಣರಾಗಿದ್ದಾರೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next