Advertisement

ಪರಿಸರ ಸಮತೋಲನ ಸವಾಲಿನ ಕೆಲಸ

01:17 AM Jun 06, 2019 | Lakshmi GovindaRaj |

ಬೆಂಗಳೂರು: ಅಭಿವೃದ್ಧಿ ಹೆಸರಿನಲ್ಲಿ ಯೋಜನೆಗಳ ಭರಾಟೆಯಿಂದ ಪರಿಸರದ ಮೇಲೆ ತೀವ್ರ ಸ್ವರೂಪದ ಪರಿಣಾಮ ಬೀರುತ್ತದೆ ಎಂದು ಪರಿಸರ ತಜ್ಞ ಅ.ನ.ಯಲ್ಲಪ್ಪರೆಡ್ಡಿ ಹೇಳಿದರು.

Advertisement

ಬೆಂಗಳೂರು ಎನ್ವಿರಾನ್ಮೆಂಟ್‌ ಟ್ರಸ್ಟ್‌ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಮಾಯಾಸ್‌ ಫಿಲ್ಮ್ ಸಂಸ್ಥೆಯ ವಾರ್ತಾ ಭವನದಲ್ಲಿ ಬುಧವಾರ ಆಯೋಜಿಸಿದ್ದ “ಕೃಷ್ಣಾ ನದಿ ಮತ್ತು ಜೀವ ವೈವಿಧ್ಯಗಳ ಸರಪಳಿ’ ಸಾಕ್ಷ್ಯಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಭಿವೃದ್ಧಿ ಮತ್ತು ಪರಿಸರ ಸಮತೋಲನ ಸವಾಲಿನ ಕೆಲಸ ಎಂದರು.

ಕೃಷ್ಣಾ ನದಿಯ ಸುತ್ತಲೂ ಒಂದು ಜೀವ ಸರಪಳಿಯೇ ಬೆಸೆದುಕೊಂಡಿತ್ತು. ಜಲಾಶಯ ನಿರ್ಮಾಣವಾದ ಸಂದರ್ಭದಲ್ಲಿ ಈ ಸರಪಳಿ ಮುರಿದಿತ್ತು. ಸರಿಯಾದ ಸಮಯದಲ್ಲಿ ಎಚ್ಚೆತ್ತು ಕೊಂಡಿದ್ದರಿಂದ ಜೀವಸಂಕುಲವನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು.

ಜಲಾಶಯದ ಸುತ್ತಲಿನ ಪ್ರದೇಶಗಳಲ್ಲಿ ವೈವಿಧ್ಯಮಯ ಸಸಿಗಳನ್ನು ನೆಡಲಾಯಿತು. ಹೀಗಾಗಿ, ಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಹಜ ಪರಿಸರ ನಿರ್ಮಾಣವಾಗಿದೆ. ಇಲ್ಲಿಯವರೆಗೆ ಅಂದಾಜು 32ಲಕ್ಷಕ್ಕೂ ಹೆಚ್ಚು ಸಸಿಗಳನ್ನು ಇಲ್ಲಿ ನೆಡಲಾಗಿದೆ. ಇದಕ್ಕೆ ಅಲ್ಲಿನ ಜನರ ಸಹಕಾರವೇ ಕಾರಣ ಎಂದರು.

ಪರಿಸರದ ಮೇಲೆ ಎಷ್ಟೇ ದಾಳಿಗಳು ನಡೆದರೂ ಮತ್ತೆ ಪುಟಿದೇಳುವ ಶಕ್ತಿ ಪರಿಸರಕ್ಕಿದೆ. ಅದಕ್ಕೆ ನಾವು ಅನುವು ಮಾಡಿಕೊಡಬೇಕು. ಕಾಲಕ್ರಮೇಣ ಅದು ಸರಿಯಾಗುತ್ತದೆ. ಅದಕ್ಕೆ ಆಲಮಟ್ಟಿ ಜಲಾಶಯವೇ ನಿದರ್ಶನ. ಈ ಜಲಾಶಯದ ಸುತ್ತಲಿನ ಪ್ರದೇಶದಲ್ಲಿ ಇಂದು ವಲಸೆ ಪಕ್ಷಿಗಳು ಬಂದು ತಮ್ಮ ಮರಿಗಳಿಗೆ ಜನ್ಮ ನೀಡುತ್ತಿವೆ ಎಂದು ಸಂತಸ ಹಂಚಿಕೊಂಡರು.

Advertisement

ಮಾಜಿ ಸಚಿವ ಎಚ್‌.ಕೆ ಪಾಟೀಲ್‌ ಮಾತನಾಡಿ, ಆಲಮಟ್ಟಿ ಜಲಾಶಯದಿಂದ ಇಂದು ಸಾವಿರಾರು ಜನರ ಬದುಕು ಹಸನಾಗಿದೆ. ಈ ಅಣೆಕಟ್ಟು ನಿರ್ಮಾಣಕ್ಕೆ ಸಾವಿರಾರು ಜನ ತಮ್ಮ ನೆಲೆ ಕಳೆದುಕೊಂಡಿದ್ದಾರೆ. ಹೀಗಾಗಿ, ಅದರ ಯಶಸ್ಸು ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ಸಲ್ಲಬೇಕು ಎಂದು ಹೇಳಿದರು.

ಯಲ್ಲಪ್ಪರೆಡ್ಡಿ ಅವರ ಸಲಹೆಯಿಂದ ಆಲಮಟ್ಟಿ ಜಲಾಶಯದ ಸುತ್ತಲಿನ ಪ್ರದೇಶದಲ್ಲಿ ಮಾಗಲಗಾರ್ಡ್‌, ಕೃಷ್ಣ ಗಾರ್ಡ್‌ ನಿರ್ಮಾಣ ಮಾಡಿದೆವು. ಆ ಸ್ಥಳವು ಇಂದು ಪ್ರವಾಸೋದ್ಯಮ ಕೊಂಡಿಯಾಗಿಯೂ ಬದಲಾವಣೆಯಾಗಿದೆ ಎಂದು ವಿವರಿಸಿದರು. ಸಾಕ್ಷ್ಯಚಿತ್ರ ನಿರ್ದೇಶಕಿ ಮಾಯಾ ಚಂದ್ರ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next