ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಿಓಪಿ ಗೌರಿ-ಗಣೇಶ ಮೂರ್ತಿಗಳ ನಿಷೇಧ ಹಿನ್ನೆಲೆಯಲ್ಲಿ ಮಣ್ಣಿನ ಮೂರ್ತಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸದಲ್ಲಿ ಸಂಘ-ಸಂಸ್ಥೆಗಳು ಒಂದಾಗಿವೆ. ಜಾಗೃತಿ ಮೂಡಿಸುವ ಜತೆಗೆ ಉಚಿತವಾಗಿ ಮಣ್ಣಿನ ಗಣೇಶ ಮೂರ್ತಿಗಳ ವಿತರಣೆಯನ್ನೂ ಮಾಡುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆ ಅರಿವು ಮೂಡಿಸಲು ಮುಂದಾಗಿವೆ.
ಬನಶಂಕರಿ ಎರಡನೇ ಹಂತದಲ್ಲಿರುವ ವೃಕ್ಷ ಸ್ಕೂಲ್ ಆಫ್ ಫೈನ್‌ಆರ್ಟ್‌ಸಂಸ್ಥೆ ಬುಧವಾರದಿಂದ ಸಾರ್ವಜನಿಕರಿಗೆ ಮಣ್ಣನ್ನು ಒದಗಿಸಿ, ಅವರ ಕೈಯಿಂದಲೇ ಗಣಪತಿ ಮಾಡಿಸಿ ಉಚಿತವಾಗಿ ವಿತರಿಸಲಿದೆ. ಮೀರಾಅರುಣ್ ಅಧ್ಯಕ್ಷತೆಯ ವೃಕ್ಷ ಸ್ಕೂಲ್ ಆಫ್ ಫೈನ್‌ಆರ್ಟ್ ಸಂಸ್ಥೆ, ಗಣೇಶ ಮೂರ್ತಿಗಳ ತಯಾರಿಕೆಗೆ ಬೇಕಾದ ಮಣ್ಣು ಒದಗಿಸುವುದರ ಜತೆಗೆ ಮೂರ್ತಿ ಬೇಕೆಂದು ಬರುವವರ ಕೈಯಲ್ಲೇ ಗಣಪತಿ ಮಾಡಿಸುತ್ತಿರುವುದು ವಿಶೇಷ.
ವೃಕ್ಷ ಸ್ಕೂಲ್ ಆಫ್ ಪೈನ್ ಆರ್ಟ್‌ನಿಂದ ರಸ್ತೆ ಸಮೀಪವೇ ಒಂದು ಪೆಂಡಾಲ್ ಹಾಕಲಾಗಿದ್ದು, ಅಲ್ಲಿ ಪರಿಸರ ಸ್ನೇಹಿ ಗಣಪತಿಯ ಮಾಹಿತಿಯ ಜತೆಗೆ ನಿಮ್ಮ ಮನೆಗೆ ಬೇಕಾದ ಗಣಪತಿಯನ್ನು ನೀವೇ ಸಿದ್ಧಮಾಡಿ ಕೊಂಡೊಯ್ಯಬಹುದು. ಗಣಪತಿ ಮಾಡಲು ಗೊತ್ತಿಲ್ಲ, ಸೊಂಡಿಲು ಇಡಲು ಬರುತ್ತಿಲ್ಲ ಎಂಬಲ್ಲ ಚಿಂತೆ ಬಿಡಿ, ಆಕರ್ಷಕ ಗಣಪತಿಯ ಮಾಡುವುದನ್ನು ಸ್ಥಳದಲ್ಲೇ ಸಂಸ್ಥೆಯ ಸಿಬ್ಬಂದಿ ಹೇಳಿಕೊಡುತ್ತಾರೆ.
ಜಲಮೂಲವನ್ನು ಉಳಿಸೋಣ, ಮಣ್ಣಿನ ಗಣಪನನ್ನು ಪೂಜಿಸೋಣ ಎಂಬ ಧ್ಯೇಯವಾಕ್ಯದೊಂದಿಗೆ ವೀರಾಅರುಣ್ ಅವರು ಆ.23ರಿಂದ ಮಣ್ಣಿನ ಗಣಪತಿ ವಿತರಣೆ ಮಾಡಲಿದ್ದಾರೆ. ಆಸಕ್ತರು, 26ನೇ ಕ್ರಾಸ್, 9ನೇ ಮುಖ್ಯರಸ್ತೆ ಬನಶಂಕರಿ 2ನೇ ಹಂತದಲ್ಲಿರುವ ವೃಕ್ಷ ಸ್ಕೂಲ್ ಆಫ್ ಫೈನ್‌ಆರ್ಟ್ ಸಂಪರ್ಕಿಸಬಹುದು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸಾರ್ವಜನಿಕರ ಕೈಯಿಂದಲೇ ಗಣೇಶನ ಮೂರ್ತಿ ಮಾಡಿಸಿ ಅವರಿಗೆ ನೀಡಲಾಗುತ್ತದೆ. ಇದು ಸಂಪೂರ್ಣ ಉಚಿತವಾಗಿರುತ್ತದೆ. ಬೆಳಗ್ಗೆ 6 ಗಂಟೆಯಿಂದ 9 ಗಂಟೆಯ ತನಕ ಮತ್ತು ಸಂಜೆ 4 ಗಂಟೆಯಿಂದ ವಿತರಣೆ ಇರುತ್ತದೆ.
-ಮೀರಾಅರುಣ್, ಅಧ್ಯಕ್ಷೆ, ವೃಕ್ಷ ಸ್ಕೂಲ್ ಆಫ್ ಫೈನ್‌ಆರ್ಟ್
(ಮೊಬೈಲ್ ಸಂಖ್ಯೆ-9591712002)