ಜಮಖಂಡಿ: ಹಸಿರು ಹೆಚ್ಚಿಸುವ ಹಿನ್ನೆಲೆಯಲ್ಲಿ ನಗರದ ಹೋಟೆಲ್ ಮಾಲೀಕರೊಬ್ಬರು ತಾಲೂಕಿನ ಜನರಿಗೆ ಸಸಿ ನೆಡುವ ಸ್ಪರ್ಧೆ ಹಮ್ಮಿಕೊಂಡಿದ್ದಾರೆ.
ನಗರದ ಅನ್ನಪೂರ್ಣೇಶ್ವರಿ ಗ್ರೂಫ್ ಆಫ್ ಹೋಟೆಲ್ ಹಮ್ಮಿಕೊಂಡಿರುವ ಏಪ್ರಿಲ್ ಪೂಲ್ ಬೇಡ ಏಪ್ರಿಲ್ ಕೂಲ್ ಬೇಕು ವಿಶಿಷ್ಟ ಕಾರ್ಯಕ್ರಮದಲ್ಲಿ ಸಸಿ ಬೆಳೆಸಿರಿ, ಬಹುಮಾನ ಪಡೆಯಿರಿ ಸ್ಪರ್ಧೆ ಆಯೋಜಿಸಿದ್ದಾರೆ. ಕಳೆದ ವರ್ಷ ಅತೀ ಹೆಚ್ಚು ಸಸಿ ನೆಟ್ಟಿರುವ ವಿಜೇತರಿಗೆ ಸಾಹಿತಿ ಪುಸ್ತಕ ಬಹುಮಾನ ರೂಪದಲ್ಲಿ ನೀಡುವ ಮೂಲಕ ಪರಿಸರ ರಕ್ಷಣೆಗೆ ಆದ್ಯತೆ ನೀಡಿದ್ದರು.
ಈ ವರ್ಷದ ಪರಿಸರ ರಕ್ಷಣೆ ಸ್ಪರ್ಧೆಯಲ್ಲಿ ಚಿಕ್ಕಮಕ್ಕಳು, ಯುವಕರು, ಮಹಿಳೆಯರು, ಸಂಘ-ಸಂಸ್ಥೆಗಳ ಸಹಿತ ಪ್ರತಿಯೊಬ್ಬರಿಗೂ ಮುಕ್ತ ಪ್ರವೇಶವಿದ್ದ ಕಾರಣ ಸ್ಪರ್ಧಾಳುಗಳು ತಾವು ಸ್ವಂತ ನೆಡುವ ಸಸಿಗಳ ವಿಡಿಯೋ ಮಾಡಿ 9535674882 ವಾಟ್ಸಾಪ್ ನಂಬರ್‌ಗೆ ಕಳುಹಿಸಬೇಕು. ಮಾರ್ಚ್ 30ರವರೆಗೆ ಯೋಜನೆ ಚಾಲನೆಯಲ್ಲಿದೆ. ಅನ್ನಪೂರ್ಣೇಶ್ವರಿ ಗ್ರೂಫ್ ಆಫ್ ಹೋಟೆಲ್ ವತಿಯಿಂದ ಪ್ರತಿವರ್ಷ ಹಮ್ಮಿಕೊಳ್ಳಲು ಮುಂದಾಗಲು ಪ್ರಮುಖ ಕಾರಣ ಜಾಗತಿಕ ತಾಪಮಾನ. ಪ್ರತಿವರ್ಷ ಮರಗಳ ಸಂಖ್ಯೆ ಕಡಿಮೆಯಾಗುವ ಮೂಲಕ ಬಿಸಿಲು ಹೆಚ್ಚಾಗುತ್ತಿದೆ. ಪ್ರಸಕ್ತ ನೆಡುವ ಸಸಿಗಳು ಕನಿಷ್ಠ 5-6 ವರ್ಷಗಳಲ್ಲಿ ಬೆಳದು ತಾಪಮಾನ ಇಳಿಕೆಗೆ ಸಹಕಾರಿಯಾಗಬಹುದು. ಮನೆ ಮುಂದೆ, ದೇವಸ್ಥಾನ, ಜಮೀನುಗಳಲ್ಲಿ ಸಸಿ ನೆಡುವುದರಿಂದ ಜನರಲ್ಲಿ ಅರಿವು ಮೂಡಿಸಲು ಜಾಗತಿಕ ತಾಪಮಾನ ಏರಿಕೆ ಜಾಗೃತಿ ಸಂದೇಶ ನೀಡುವುದೇ ಯೋಜನೆ ಮುಖ್ಯ ಗುರಿಯಾಗಿದೆ.
ತಾಲೂಕಿನಲ್ಲಿ 100ಕ್ಕೂ ಅಧಿಕ ಸ್ಪರ್ಧಾಳುಗಳು ಸಸಿ ನೆಟ್ಟಿರುವ ವಿಡಿಯೋ ಕಳಿಸಿದ್ದು, 300ಕ್ಕೂ ಹೆಚ್ಚು ಜನರು ಭಾಗವಹಿಸುವ ಮೂಲಕ 1000ಕ್ಕೂ ಅಧಿಕ ಸಸಿ ನೆಡುವ ಗುರಿ ಹೊಂದಿದೆ. ಸಾಮಾಜಿಕ ಸೇವೆ ಮೂಲಕ ಅನ್ನಪೂರ್ಣೆಶ್ವರಿ ಹೋಟೆಲ್ ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ 2 ಕೆ.ಜಿ ಪ್ಲಾಸ್ಟಿಕ್ ವಸ್ತುಗಳನ್ನು ನೀಡಿದರೇ ತಮ್ಮ ಹೋಟೆಲ್ ನಲ್ಲಿ ಉಚಿತ ಊಟ ಯೋಜನೆ ಮಾಡಲಾಗಿತು. ಸೈನಿಕರಿಗೆ ಉಚಿತ ಊಟ, ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ರಿಯಾಯತಿ ದರದಲ್ಲಿ ಊಟದ ವ್ಯವಸ್ಥೆ ಇಂದಿಗೂ ಚಾಲನೆಯಲ್ಲಿದೆ.
ಪರಿಸರ ರಕ್ಷಣೆ ಅಗತ್ಯವಾಗಿದ್ದು, ಜಾಗತಿಕ ತಾಪಮಾನ ದಿನದಿಂದ ದಿನಕ್ಕೆ ಏರುತ್ತಿದೆ. ಇಂದಿನ ದಿನಗಳಲ್ಲಿ ಸಸಿ ನೆಡುವುದು ಅವಶ್ಯವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ನೆಡುವ ಸ್ಪರ್ಧಾಳುಗಳಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಪ್ರಥಮ 5001 ರೂ., ದ್ವಿತೀಯ 3001 ರೂ., ತೃತೀಯ ಬಹುಮಾನ 2001 ರೂ. ನಗದು ನೀಡಲಾಗುತ್ತಿದೆ. ಉಳಿದ ಸ್ಪರ್ಧಾಳುಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು.
-ಈರಯ್ಯ ಕಲ್ಯಾಣಿ, ಅನ್ನಪೂರ್ಣೇಶ್ವರಿ ಗ್ರೂಫ್ ಆಫ್ ಹೋಟೆಲ್, ಜಮಖಂಡಿ
ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಪರಿಸರ ರಕ್ಷಿಸಿದರೇ ಅದು ನಮ್ಮನ್ನು ರಕ್ಷಿಸುತ್ತದೆ. ಕಳೆದ 5 ವರ್ಷಗಳಲ್ಲಿ ಅರಣ್ಯ ಇಲಾಖೆ ಮತ್ತು ಸಾರ್ವಜನಿಕರ ಶ್ರಮದಾನದಲ್ಲಿ ಅರಣ್ಯ ಪ್ರದೇಶದಲ್ಲಿ 25 ಸಾವಿರಕ್ಕೂ ಹೆಚ್ಚು ನೆಟ್ಟಿರುವ ಸಸಿಗಳು ಮರವಾಗಿ ಬೆಳೆಯುತ್ತಿವೆ. ನಗರದ ಅನ್ನಪೂರ್ಣೇಶ್ವರಿ ಗ್ರೂಫ್ ಆಫ್ ಹೋಟೆಲ್ ಹಮ್ಮಿಕೊಂಡಿರುವ ಏಪ್ರಿಲ್ ಪೂಲ್ ಬೇಡ ಏಪ್ರಿಲ್ ಕೂಲ್ ಬೇಕು ಯೋಜನೆ ಉತ್ತಮವಾಗಿದೆ. ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಜಮಖಂಡಿ ತಾಲೂಕನ್ನು ಹಸಿರು ನಾಡು ಮಾಡಬೇಕು.
-ಆರ್.ಡಿ.ಬಬಲಾದಿ, ಅರಣ್ಯಾಧಿಕಾರಿಗಳು ಜಮಖಂಡಿ
-ಮಲ್ಲೇಶ ಆಳಗಿ