Advertisement

ಪ್ಲಾಸ್ಟಿಕ್‌ ಆಯುವ ಇಸ್ಮಾಯಿಲ್‌ರಿಂದ ಮನೆ ಮನೆಗೆ ಹೋಗಿ ಪರಿಸರ ಜಾಗೃತಿ

12:04 AM Jun 16, 2024 | Team Udayavani |

ಮಂಗಳೂರು: ಓದಿದ್ದು ಒಂದನೇ ತರಗತಿ. ವೃತ್ತಿ ಗುಜರಿ ವ್ಯಾಪಾರ. ಆದರೆ ಸಮಾಜ ಸೇವೆ, ಪರಿಸರ ಸಂರಕ್ಷಣೆಯೇ ಇವರ ಗುರಿ.ಶಿಕ್ಷಣ, ಸ್ವತ್ಛತೆ, ಮಾದರಿ ಗ್ರಾಮ ಕಲ್ಪನೆಯೊಂದಿಗೆ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ ಮುಡಿಪು ಸಮೀಪದ ಬಾಳೆಪುಣಿ ನವಗ್ರಾಮದ ನಿವಾಸಿ ಇಸ್ಮಾಯಿಲ್‌ ಕಣಂತೂರು.

Advertisement

ಮುಡಿಪು ಪರಿಸರದಲ್ಲಿ ಯಾವುದೇ ಸಮಸ್ಯೆ, ಅವಘಡ ಸಂಭವಿಸಿದರೂ ಸಕಾಲದಲ್ಲಿ ನೆರವಿಗೆ ಧಾವಿಸಿ “ಆಪತ್ಭಾಂದವ’ ಎನಿಸಿಕೊಂಡವರು ಅವರು. ಅವರಿಗೆ ಹೂಹಾಕುವ ಕಲ್ಲು ಪೇಟೆಯಲ್ಲಿ ಗುಜರಿ ಅಂಗಡಿ ಇದೆ. ಆದರೆ ಅಂಗಡಿಯಲ್ಲಿ ಇರುವುದಕ್ಕಿಂತ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇ ಹೆಚ್ಚು!

ಒಂದಲ್ಲ-ಎರಡಲ್ಲ;
ನೂರಾರು ಕಥೆಗಳು!
-ರಸ್ತೆ ಬದಿ ಬೀಳುವ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಹೆಕ್ಕುವುದು, ತ್ಯಾಜ್ಯ ರಾಶಿಯನ್ನು ತೆರವು ಮಾಡುವುದರ ಜತೆಗೆ ಪ್ಲಾಸ್ಟಿಕ್‌ನ ದುಷ್ಪರಿಣಾಮದ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಒಣಕಸ ಸಂಗ್ರಹಕ್ಕೂ ಮನಸ್ಸು ಮಾಡಿದ್ದಾರೆ.
– ನೂರಾರು ಕಡೆ ಗಿಡ ನೆಟ್ಟಿದ್ದಾರೆ. ಹಲವು ಕಡೆ ಇಂಗುಗುಂಡಿ ನಿರ್ಮಿಸಿದ್ದಾರೆ.
– ಹೂಹಾಕುವಕಲ್ಲು ಶಾಲೆಯಲ್ಲಿ ಬಿಸಿಯೂಟಕ್ಕೆ ತರಕಾರಿ ಸಮಸ್ಯೆ ಎದುರಾದಾಗ ಶಾಲೆಯ ಕೈ ತೋಟದಲ್ಲಿ ತಾವೇ ತರಕಾರಿ ಬೆಳೆದುಕೊಟ್ಟಿದ್ದಾರೆ.
-ಮನೆ ಪರಿಸರದ ನಿವಾಸಿಗಳಿಗೆ ನಳ್ಳಿ ನೀರು ಬಾರದೆ ಸಮಸ್ಯೆಯಾದಾಗ ಸ್ಥಳೀಯರ ನೆರವಿನಿಂದ ಬಾವಿ ತೋಡಿದ್ದಾರೆ.
– ವಿದ್ಯುತ್‌ ಇಲ್ಲದ ಮನೆಗೆ ಸೆಲ್ಕೋ ಫೌಂಡೇಶನ್‌/ಜನಶಿಕ್ಷಣ ಟ್ರಸ್ಟ್‌ ನೆರವಿನಿಂದ ಸೋಲಾರ್‌ ದೀಪ ಒದಗಿಸಿದ್ದಾರೆ.
– ವಿದ್ಯಾರ್ಥಿಗಳ ಕಲಿಕೆಗೆ ನೆರವು, ಬಡ ಹೆಣ್ಣುಮಕ್ಕಳ ಮದುವೆಗೆ ಧನ ಸಂಗ್ರಹಿಸಿ ನೀಡಿದ್ದಾರೆ.
– ಅಶಕ್ತ ರೋಗಿಗಳ ಚಿಕಿತ್ಸೆಗೆ ದಾನಿಗಳ ಮೂಲಕ ಸಹಾಯ …. ಇತ್ಯಾದಿ ಇಸ್ಮಾಯಿಲ್‌ ಅವರ ಸಮಾಜ ಸೇವೆಯ ತುಣುಕುಗಳು.

ಮನೆಯಲ್ಲಿ ಮಳೆ ಕೊಯ್ಲು
ಸೋಲಾರ್‌, ಕಾಂಪೋಸ್ಟ್‌!
ಇಸ್ಮಾಯಿಲ್‌ ಅವರ ಮನೆಯಲ್ಲಿ ಮಳೆ ನೀರು ಇಂಗಿಸುವ ವ್ಯವಸ್ಥೆಯಿದೆ. ಸೋಲಾರ್‌ ದೀಪ ಇದೆ. ಹಸಿ/ಒಣಕಸವನ್ನು ಕಾಂಪೋಸ್ಟ್‌ ಮಾಡುವ ಸರಳ ವಿಧಾನವೂ ಇದೆ. 20ರಷ್ಟು ಹಣ್ಣುಹಂಪಲು ಹಾಗೂ ಹಲವು ಹೂಗಿಡಗಳಿವೆ. ಇದೆಲ್ಲದಕ್ಕೆ ಮುಖ್ಯ ಬಲ ಅವರ ಗುಜರಿ ಅಂಗಡಿ. ಅಲ್ಲಿದ್ದ ಹಳೆಯ ಫ್ರಿಜ್‌, ವಾಶಿಂಗ್‌ ಮೆಶಿನ್‌, ಪೈಪ್‌ ತುಂಡುಗಳು, ಟೇಬಲ್‌ ಲ್ಯಾಂಪ್‌, ವಾಹನದ ಬಿಡಿಭಾಗಗಳನ್ನೇ ಇದಕ್ಕಾಗಿ ಬಳಸಿದ್ದಾರೆ.

ಸತ್ತೇ ಹೋಗಿದ್ದ “ಮೋಹನ’ನಿಗೆ ಮರುಜನ್ಮ !
ಇಸ್ಮಾಯಿಲ್‌ ಒಂದು ದಿನ ತನ್ನ ಅಂಗಡಿಯಲ್ಲಿದ್ದಾಗ ಗಡ್ಡಧಾರಿಯೊಬ್ಬ ನಗ್ನನಾಗಿ ಲೋಕದ ಪರಿವೆಯೇ ಇಲ್ಲಂತೆ ಅಡ್ಡಾಡುತ್ತಿದ್ದ. ಯಾವ ಪ್ರಶ್ನೆಗೂ ಉತ್ತರಿಸದ ಅವನಿಗೆ ಚಾ ನೀಡಿ ಸಂತೈಸಿದರು. ತುಂಬ ಹೊತ್ತಿನ ಬಳಿಕ ಆತ “ಹೆಸರು ಮೋಹನ್‌. ಊರು ಇಡುಕ್ಕಿ’ ಎಂದಷ್ಟೇ ಹೇಳಿದ. ಬಳಿಕ ಆತನಿಗೆ ಸ್ನಾನ ಮಾಡಿಸಿ, ಗಡ್ಡ ತೆಗೆಸಿ, ವಸ್ತ್ರ ಉಡಿಸಿದರು. ಬಳಿಕ ಇಡುಕ್ಕಿಯ ಪೊಲೀಸ್‌ ಠಾಣೆಗೆ ಕರೆ ಮಾಡಿ ವಿಚಾರಿಸಿದಾಗ ಮೋಹನ್‌ ಅದೇ ಠಾಣೆಯ ಸಮೀಪದ ಮನೆಯ ನಿವಾಸಿ ಎಂದು ತಿಳಿದುಬಂದಿತು. ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಆತನನ್ನು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸಂಬಂಧಿಕರ ಕಣ್ಣುತಪ್ಪಿಸಿ ಪರಾರಿಯಾಗಿದ್ದ. ಮನೆಮಂದಿ ಬಹಳಷ್ಟು ಕಡೆ ಹುಡುಕಿದ್ದಲ್ಲದೆ ಎಷ್ಟು ದಿನ ಕಳೆದರೂ ಆತ ಪತ್ತೆಯಾಗದಿದ್ದಾಗ ಮೃತಪಟ್ಟಿರಬಹುದೆಂದು ಭಾವಿಸಿ ಅಂತ್ಯಕ್ರಿಯೆ ನಡೆಸಿದ್ದರು. 2 ವರ್ಷ ಎಲ್ಲೆಲ್ಲೋ ಅಲೆದಾಡಿದ ಮೋಹನ್‌ ಕೊನೆಗೆ ಇಸ್ಮಾಯಿಲ್‌ ಅವರ ಕೈಗೆ ಸಿಕ್ಕಿದ ಕಾರಣ ಮನೆಯವರ ಜತೆ ಸೇರಿಕೊಳ್ಳುವಂತಾಗಿತ್ತು.

Advertisement

ಗುಜರಿಯಲ್ಲಿ “ಗ್ರಂಥ’ ಆಲಯ!
ವಯಸ್ಸಿನಲ್ಲಿ ಅರ್ಧ ಶತಕ ಬಾರಿಸಿರುವ ಇಸ್ಮಾಯಿಲ್‌ ಗಾಂಧಿ ತಣ್ತೀ ಪಾಲಕರು. ಗುಜರಿಗೆ ಬಂದ ಪುಸ್ತಕಗಳಲ್ಲಿ ಉತ್ತಮವಾದುದನ್ನು ಎತ್ತಿಟ್ಟು ಸ್ಥಳೀಯ ಮಕ್ಕಳಿಗೆ ಓದಲು ಕೊಡುತ್ತಾರೆ. ಗುಜರಿ ಸೇರುವ ಪುಸ್ತಕಗಳನ್ನು ತಿಜೋರಿಗೆ ಸೇರಿಸುತ್ತಿದ್ದಾರೆ. ಇಂತಹ 2 ಸಾವಿರಕ್ಕೂ ಅಧಿಕ ಪುಸ್ತಕಗಳು ಇವೆ.

ಸಮಾಜ ಹಿತವೇ ಬದುಕು
1ನೇ ತರಗತಿ ಕಲಿತ ಬಳಿಕ ತಾಯಿಯೊಂದಿಗೆ ಗದ್ದೆ ಬೇಸಾಯಕ್ಕೆ ಹೋದೆ.ಆಗಲಿಲ್ಲ. ಬೆಂಗಳೂರಿನಲ್ಲಿ ಕಂಪೆನಿಗೆ ಸೇರಿದೆ. ಕೊನೆಗೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದೆ. ಮುಡಿಪು ಶಾಲೆಯ ಪ್ರಾಚಾರ್ಯರಾಗಿದ್ದ ಬಸವರಾಜ ಪಲ್ಲಕ್ಕಿ ಸಲಹೆಯ ಪ್ರಕಾರ ಗುಜರಿ ಅಂಗಡಿ ತೆರೆದೆ. ಶಾಲಾಭಿವೃದ್ಧಿ ಸಮಿತಿ ಸಹಿತ ಊರಿನ ಹಲವು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮಕ್ಕಳನ್ನು ಪದವೀಧರರಾಗಿಸಿದ್ದೇನೆ. ಜನಶಿಕ್ಷಣ ಟ್ರಸ್ಟ್‌ ನಿರ್ದೇಶಕರಾದ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಅವರ ಮಾರ್ಗದರ್ಶನವೇ ನನಗೆ ಸ್ಫೂರ್ತಿ. ಸಮಾಜದ ಹಿತವೇ ನನ್ನ ಬದುಕು.
– ಇಸ್ಮಾಯಿಲ್‌ ಕಣಂತೂರು

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next