ಉಡುಪಿ: ಒಂದು ಚಿತ್ರ ಸಾವಿರ ಪದಗಳು ಹೇಳುವ ಕಥೆ ಹೇಳುತ್ತದೆ ಎನ್ನುವ ಮಾತೊಂದಿದೆ. ಶನಿವಾರ ಒಳಕಾಡುವಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆ ಈ ಮಾತನ್ನು ಅಕ್ಷರಶಃ ನಿಜವಾಗಿಸಿತ್ತು. ಶಾಲೆಯ ನಳಂದಾ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿದ ಚಿತ್ತಾರಗಳು ಪರಿಸರ ಕಾಳಜಿಯ ಸಂದೇಶ ಎತ್ತಿ ಸಾರುತ್ತಿತ್ತು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಾಯು ಮಾಲಿನ್ಯ ಜಾಗೃತಿ ಮೂಡಿಸುವ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ 150 ವಿದ್ಯಾರ್ಥಿಗಳು, “ಮಾಲಿನ್ಯ ತಡೆಯಿರಿ ದೇಶ ರಕ್ಷಿಸಿ, ಗೋ ಗ್ರೀನ್, ವಾಯು ಮಾಲಿನ್ಯ ತಡೆದು ಶುದ್ದ ಗಾಳಿ ಪಡೆಯಿರಿ’ ಎಂಬ ಸಂದೇಶದ ಜತೆಗೆ “ವಾಯುಮಾಲಿನ್ಯ ತಡೆಗೆ ಗಿಡಗಳನ್ನು ನೆಟ್ಟು ಪೋಷಿಸಿ, ತಾವೂ ಗಿಡ ನೆಟ್ಟು ಇತರರಿಗೂ ಗಿಡ ನೆಡಲು ಪ್ರೋತ್ಸಾಯಿಸಿ’ ಎಂಬ ಪರಿಸರ ಕಾಳಜಿಯನ್ನು ತಾವು ಬರೆದ ಬಣ್ಣ ಬಣ್ಣದ ಚಿತ್ತಾರದ ಮೂಲಕ ಸಾರುತ್ತಿದ್ದರು.
ಚಿತ್ರಕಲಾ ಸ್ಪರ್ಧೆಯು 3 ವಿಭಾಗಗಳಲ್ಲಿ ನಡೆದಿದ್ದು, ಪ್ರಾಥಮಿಕ ವಿಭಾಗದಲ್ಲಿ 1 ರಿಂದ 4 , ಮಾಧ್ಯಮಿಕ ವಿಭಾಗದಲ್ಲಿ 5 ರಿಂದ 7 ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ 8 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜೂ. 5 ರಂದು ಜಿಲ್ಲಾಡಳಿತ ವತಿಯಿಂದ ಪಡುಬಿದ್ರಿಯ ಬಂಟರ ಭವನದಲ್ಲಿ ನಡೆಯುವ ವಿಶ್ವ ಪರಿಸರ ದಿನಾಚರಣೆಯಂದು ಈ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ.
ಸ್ಪರ್ಧೆಯ ಬಗ್ಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಪರಿಸರ ಅಧಿಕಾರಿ ಡಾ|ಎಚ್. ಲಕ್ಷಿ¾àಕಾಂತ್, ಚಿತ್ರಕಲೆ ಮೂಲಕ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸುವ ಉದ್ದೇಶದಿಂದ ವಾಯುಮಾಲಿನ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮ ಯಶಸ್ವಿಯಾಗಿದೆ. ಜಿಲ್ಲೆಯ ಎಲ್ಲ ಮಕ್ಕಳಿಗೂ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಕಾರ್ಕಳ, ಹೆಬ್ರಿಗಳಲ್ಲಿ ಈ ರೀತಿ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿದೆ. ಜೂ. 5 ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಯಂದು ಸ್ವತ್ಛತೆ ಹಾಗೂ ಇತರ ಪರಿಸರಕ್ಕೆ ಪೂರಕವಾದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವ್ಯಕ್ತಿಯನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ, ಉಡುಪಿ, ಕುಂದಾಪುರ, ಕಾರ್ಕಳ ತಾಲೂಕಿನ 3 ಗ್ರಾ.ಪಂ.ಗಳಲ್ಲಿರುವ ಪರಿಸರ ಕಾಳಜಿ ಹೊಂದಿರುವ ವ್ಯಕ್ತಿಗಳನ್ನು ಹಾಗೂ ಪರಿಸರ ಕಾಳಜಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಶಾಲೆಗಳನ್ನು ಗೌರವಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.