ಕಾರ್ಕಳ/ಉಡುಪಿ: ಕಾರ್ಕಳ ತಾಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಉತ್ತಮ ಮಳೆಯಾಗಿದೆ. ಏಕಾಏಕಿ ರಭಸವಾಗಿ ಸುರಿದ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.
ಸಾಣೂರು-ಬಿಕರ್ನಕಟ್ಟೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಬೈಪಾಸ್ ಬಳಿ ಮಳೆಯಿಂದಾಗಿ ದಾರಿ ತಿಳಿಯದೆ ಪ್ರವಾಸಿಗರ ವಾಹನಗಳು ಕೆಲವು ಸಮಯ ರಸ್ತೆ ಬದಿಯೇ ನಿಲ್ಲುವಂತಾಯಿತು.
ಕಾರ್ಕಳ ಬೈಪಾಸ್, ಸಾಣೂರು, ಬಜಗೋಳಿ, ಮಿಯ್ನಾರು ಪರಿಸರದಲ್ಲಿ ಉತ್ತಮ ಮಳೆಯಾಗಿದೆ. ಬೆಳುವಾಯಿ, ಕೆಸರುಗದ್ದೆ ಪರಿಸರದಲ್ಲಿ ಸಾಧಾರಣ ಮಳೆಯಾಗಿದೆ. ಉಡುಪಿ ತಾಲೂಕಿನ ಕಟಪಾಡಿ, ಪಡುಬಿದ್ರಿ ಪರಿಸರದಲ್ಲಿ ಮತ್ತು ದ.ಕ. ಜಿಲ್ಲೆಯ ಸುಳ್ಯ ತಾಲೂಕಿನ ವಿವಿಧೆಡೆ ರಾತ್ರಿ ತುಂತುರು ಮಳೆಯಾಗಿದೆ.
ದ.ಕ.: ಚಳಿ ತೀವ್ರತೆ ಕಡಿಮೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಸಾಮಾನ್ಯ ಚಳಿ ಹಗಲು ವೇಳೆಯಲ್ಲಿ ಉರಿ ಬಿಸಿಲ ವಾತಾವರಣವಿತ್ತು.ಚಳಿಯ ತೀವ್ರತೆ ಕಡಿಮೆಯಾಗಿದೆ.
ಗ್ರಾಮೀಣ ಭಾಗದಲ್ಲಿ ಮಂಜು ಕವಿದ ವಾತಾವರಣವಿತ್ತು. ಮಳೆಯ ಯಾವುದೇ ಅಲರ್ಟ್ ಇಲ್ಲ. ಆದರೆ ದ.ಕ. ಉಡುಪಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಗುರ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 34.3 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.