Advertisement

Environment Day ಈ ವಾಯು ವಿಹಾರಿಗಳು ಪರಿಸರ ಪ್ರೇಮಿಗಳು 

10:40 PM Jun 04, 2023 | Team Udayavani |
ರಬಕವಿ-ಬನಹಟ್ಟಿ: ಸ್ಥಳೀಯ ಎಸ್‌ಆರ್‌ಎ ಮಹಾವಿದ್ಯಾಲಯದ ಮೈದಾನದಲ್ಲಿರುವ ವಾಯು ವಿಹಾರಿಗಳು ಪರಿಸರ ಪ್ರೇಮಿಗಳು. ಇವರು ತಮ್ಮ ವಾಯು ವಿಹಾರಿಗಳ ಬಳಗದಲ್ಲಿ ಯಾವುದೆ ವ್ಯಕ್ತಿಯ ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವ ಹಾಗೂ ಇನ್ನಿತರ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ ಸಸಿ ನೆಟ್ಟು ಸಂಭ್ರಮಿಸುತ್ತಾರೆ.
ಇದರಿಂದಾಗಿ ಈ ಕಾಲೇಜು ಆವರಣ ಹಸಿರಿನಿಂದ ಕಂಗೊಳಿಸುತ್ತಿದೆ, ಜತೆಗೆ ನೂರಾರು ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಜೊತೆಗೆ ಆವರಣವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುತ್ತಾರೆ.
ಈ ಮೊದಲು ಇಲ್ಲಿಯ ಮಕ್ಕಳ ಸಾಹಿತಿ ಪ್ರೊ.ಜಯವಂತ ಕಾಡದೇವರ ಸಸಿಗಳಿಗೆ ಬೇಸಿಗೆಯ ಸಂದರ್ಭದಲ್ಲಿ ಹತ್ತಾರು ಗಡಿಗಳಿಗೆ ಡಬ್ಬಿಗಳ ಮೂಲಕ ನೀರು ಹಾಕುತ್ತಿದ್ದರು. ಅದನ್ನು ಗಮನಿಸಿದ ವಾಯು ವಿಹಾರಿಗಳು ಅವರ ಜೊತೆಗೂಡಿದರು. ನಂತರ ಹುಟ್ಟು ಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾಡುವ ಖರ್ಚನ್ನು ಸಲಕರಣೆಗಳ ಖರೀದಿಗಾಗಿ ಬಳಸಿಕೊಂಡರು. ಜೊತೆಗೆ ಸಸಿಗಳ ರಕ್ಷಣೆಗಾಗಿ ಟ್ರಿ ಗಾರ್ಡ್ಗಳನ್ನು ಖರೀದಿಸಿದರು.
ಸ್ಥಳೀಯ ಕಾಡಸಿದ್ಧೇಶ್ವರ ಸಹಕಾರಿ ಸಂಘದ ವ್ಯವಸ್ಥಾಪಕ ಮಹಾಲಿಂಗ ಬಾಗಲಕೋಟ ಹಾಗೂ ಸುಭಾಸ ಮುರಗೋಡ ಪ್ರತಿ ಬುಧವಾರ ಹಾಗೂ ಭಾನುವಾರ ಎಲ್ಲ ಗಿಡಗಳಿಗೆ ನೀರು ಹಾಕುತ್ತಾರೆ. ಅದಕ್ಕಾಗಿ ಇವರು ಸಾಕಷ್ಟು ಪೈಪ್ಗಳನ್ನು ಖರೀದಿ ಮಾಡಿದ್ದಾರೆ. ಬೆಟ್ಟ ಪ್ರದೇಶದಲ್ಲಿ ನೆಟ್ಟ ಸಸಿಗಳಿಗೆ ಬಾಟಲ್‌ಗಳ ಮೂಲಕ ತೆಗೆದುಕೊಂಡು ಹೋಗಿ ನೀರು ಹಾಕಿ ಬರುತ್ತಾರೆ.
ಇವರಿಗೆ ವಾಯು ವಿಹಾರಿ ಬಳಗದ ಸದಸ್ಯರಾದ ಸುರೇಶ ಕೋಪರ್ಡೆ, ಷಣ್ಮುಖ, ಜಾಡಗೌಡ, ಅರುಣ ಕುಲಕರ್ಣಿ, ಶ್ರೀಶೈಲ ಗೊಂಬಿ, ಸಂಜು ಶಿವಪೂಜಿ, ರಾಜು ಪಿಟಗಿ, ಬಸವರಾಜ ಆದಗೊಂಡ, ದಾನಪ್ಪ ಮಂಡಿ, ಶ್ಯಾಮ ಪಾಂಚಾರಿಯಾ ಸಹಕಾರ ನೀಡುತ್ತಿದ್ದಾರೆ.
ಇವರೆಲ್ಲರ ಪ್ರಯತ್ನದಿಂದಾಗಿ ಇಂದು ಎಸ್‌ಆರ್‌ಎ ಕಾಲೇಜು ಆವರಣ ಹಸುರಿನಿಂದ ಕಂಗೊಳಿಸುವಂತಾಗಿದೆ.
– ಕಿರಣ ಶ್ರೀಶೈಲ ಆಳಗಿ
Advertisement

Udayavani is now on Telegram. Click here to join our channel and stay updated with the latest news.

Next