Advertisement

ಪರಿಸರವೇ ನಿನಗಿದೋ ನಮ್ಮ ಅಳಿಲಸೇವೆ : ಪರಿಸರ ದಿನದ ವಿಶೇಷ

02:12 AM Jun 05, 2022 | Team Udayavani |

“ಕಾಡು ಬೆಳೆಸಿ, ನಾಡು ಉಳಿಸಿ’, “ಮನೆಗೊಂದು ಮರ, ಊರಿಗೊಂದು ವನ’ ಈ ಎಲ್ಲ ಘೋಷಣೆಗಳು ಕೇಳುವುದಕ್ಕೆ ಚಂದ. ಈ ಸಾಲುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ರಕ್ಷಣೆ ಮಾಡುವವರು ಎಲ್ಲೋ ಕೆಲವರು ಮಾತ್ರ. ಕಾಂಕ್ರೀಟ್‌ ಕಾಡಿನಿಂದಲೇ ತುಂಬಿರುವ ಈ ಸಮಾಜದಲ್ಲಿ ಪರಿಸರಕ್ಕಾಗಿ ಹೋರಾಡಿದವರು, ಹೋರಾಡುತ್ತಲಿರುವವರು ಹಲವರಿದ್ದಾರೆ. ಹಾಗೆ ಪರಿಸರಕ್ಕಾಗಿ ತಮ್ಮ ಅಳಿಲ ಸೇವೆಯನ್ನು ಮಾಡುತ್ತಿರುವ ಕೆಲವು ಸಾಧಕರ ಪರಿಚಯ ಇಲ್ಲಿದೆ.

Advertisement

ಬಾಟಲ್‌ಗ‌ಳಲ್ಲೇ ಶೌಚಾಲಯ
ನಮ್ಮ ದೇಶದಲ್ಲಿ ಬಳಸಿ ಬಿಸಾಡುವ ಪ್ಲಾಸ್ಟಿಕ್‌ ಬಾಟಲ್‌ಗ‌ಳ ಬಳಕೆ ಹೆಚ್ಚೇ ಇದೆ. ಇದನ್ನು ಅರಿತಿದ್ದ ದಿಲ್ಲಿಯ ಅಶ್ವನಿ ಅಗರ್ವಾಲ್‌, ಅದೇ ಪ್ಲಾಸ್ಟಿಕ್‌ ಬಳಸಿಕೊಂಡೇ ವಿಶೇಷ ಶೌಚಾಲಯ­ಗಳನ್ನು ನಿರ್ಮಿಸಿದರು. 2014ರಲ್ಲಿ “ಬೇಸಿಕ್‌ಶಿಟ್‌’ ಹೆಸರಿನ ಸ್ಟಾರ್ಟ್‌ಅಪ್‌ ಆರಂಭಿಸಿದ ಅವರು, ದೊಡ್ಡ ದೊಡ್ಡ ನೀರಿನ ಕ್ಯಾನ್‌ಗಳನ್ನು ತಂದು, ಅವುಗಳಲ್ಲೇ ಶೌಚಾಲಯ ಮಾಡಿದರು. ಅನಂತರ ಈ ಸ್ಟಾರ್ಟ್‌ ಅಪ್‌ನ್ನೇ ಮುಂದಿನ ಹಂತಕ್ಕೆ ತೆಗೆದು­ಕೊಂಡು ಹೋದ ಅವರು “ಪೀಪೀ’ ಹೆಸರಿನ ಹೊಸ ಯೋಜನೆ ಹಾಕಿ­ಕೊಂಡರು. 9,000 ಪ್ಲಾಸ್ಟಿಕ್‌ ಬಾಟಲ್‌­ಗಳನ್ನು ಬಳಸಿಕೊಂಡು ಶೌಚಗೃಹ ನಿರ್ಮಿಸಲಾ­ಯಿತು. ಅದರಲ್ಲಿ ಪ್ರತೀ ದಿನ ಸಂಗ್ರಹವಾಗುವ ಮೂತ್ರ­ವನ್ನು ಆಕ್ಟಿವೇಟೆಡ್‌ ಕಾರ್ಬನ್‌ ಮೂಲಕ ಶುದ್ಧೀಕರಿಸಲಾಗುತ್ತದೆ. ಶುದ್ಧೀ­ಕರಣವಾಗಿರುವ ಮೂತ್ರದಿಂದ ಯೂರಿಯಾ ತಯಾರಿಸಿ ಅದನ್ನು ಕೃಷಿಗೆ ಬಳಕೆ ಮಾಡಲಾಗುತ್ತಿದೆ. ಕೇವಲ 12 ಸಾವಿರ ರೂ. ಖರ್ಚಿನಲ್ಲಿ ತಯಾರಾಗುವ ಈ ಶೌಚಾ­ಲಯವನ್ನು ಯಾವುದೇ ಸ್ಥಳದಲ್ಲಿ 2 ಗಂಟೆಗಳಲ್ಲಿ ಸಿದ್ಧಪಡಿಸಬಹುದು ಎನ್ನುತ್ತಾರೆ ಅಶ್ವಿ‌ನ್‌.

ಖಾಕಿ ಮನದಲ್ಲಿ ಪರಿಸರ ಕಾಳಜಿ
ಕಲಬುರಗಿ ಜಿಲ್ಲೆಯ ಅಫ‌ಜಲಪುರ ತಾಲೂಕಿನ ಹಸರಗುಂಡಗಿಯ ರೈತ ಹಣಮಂತಪ್ಪ ಬೆಳಗುಂಪಿ ಹಾಗೂ ದೇವಲ ಗಾಣಗಾಪುರದ ಪಿಎಸ್‌ಐ ರಾಜಶೇಖರ ರಾಠೊಡ ಅವರ ಪರಿಸರ ಕಾಳಜಿ ಮಾದರಿ ಎನಿಸುವಂತದ್ದು. ಹಣಮಂತಪ್ಪ ಬೆಳಗುಂಪಿ ಆದರ್ಶ ಕೃಷಿಕರಾಗಿ ದ್ದು ತಾಲೂಕಿನ ಹಸರ­ಗುಂಡಗಿ­­ಯಲ್ಲಿ ತಮ್ಮದೇ ಕೃಷಿ ಜಮೀನಿನಲ್ಲಿ ಪಾರಂಪರಿಕ ಕೃಷಿ, ಅರಣ್ಯ ಕೃಷಿ, ಸಾವಯವ ಕೃಷಿ, ಆಧುನಿಕ ಕೃಷಿಗಳ ಜತೆಗೆ ಪರಿಸರ ಬೆಳೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಪಿಎಸ್‌ಐ ರಾಜ ಶೇ ಖರ ರಾಠೊಡ ಅವರ ಪರಿಸರ ಪ್ರೀತಿಗೆ ಠಾಣೆಯ ಮೈದಾನವೆಲ್ಲ ಈಗ ಪರಿಸರಮಯವಾಗಿದೆ. ದೇವಲ ಗಾಣಗಾಪುರ ಠಾಣೆ ಮೈದಾನದಲ್ಲಿ ವಿವಿಧ ಬಗೆಯ ಗಿಡಮರಗಳನ್ನು ನೆಟ್ಟಿರುವ ಪಿಎಸ್‌ಐ ರಾಜಶೇಖರ ರಾಠೊಡ ಪರಿಸರ ಕಾಳಜಿಯಿಂದ ಇದನ್ನೆಲ್ಲ ಮಾಡಿದ್ದಾಗಿ ಹೇಳುತ್ತಾರೆ.

ಬಾದಾಮಿಯಲ್ಲಿ ಹೊಂಗಿರಣ ಚಿತ್ತಾರ!
ಹಸುರಾಗಿಡಿ, ಹಸನಾಗಿಡಿ, ಸುಂದರವಾಗಿಡಿ… ನಿವೃತ್ತ ಪ್ರಾಧ್ಯಾ­ಪಕರು, ಸಮಾನಮನಸ್ಕ ಸ್ನೇಹಿತರು ಕೂಡಿಕೊಂಡು ರಚಿಸಿದ ನಿಸರ್ಗ ಬಳಗದ ಧ್ಯೇಯವಾಕ್ಯ­ವಿದು. ಬಾದಾ­ಮಿಯ ವೀರಪುಲಿಕೇಶಿ ಪಿಯು ಕಾಲೇ ಜಿನ ನಿವೃತ್ತ ಪ್ರಾಧ್ಯಾಪಕ ಎಸ್‌.ಎಚ್‌. ವಾಸಣದ ಹಾಗೂ ಸುಮಾರು 50ಕ್ಕೂ ಹೆಚ್ಚು ಜನ ಸಮಾನಮನಸ್ಕ ಸ್ನೇಹಿತರು ಇದನ್ನು ರಚಿ ಸಿ ಕೊಂಡಿ ದ್ದಾರೆ. ಕಳೆದ 2017ರಿಂದ ಆರಂಭಗೊಂಡ ಈ ನಿಸರ್ಗ ಬಳಗದ ಪರಿಸರ ಕಾಳಜಿ, ಸಂರಕ್ಷಣೆ ಹಾಗೂ ಪೋಷಣೆಯಿಂದ ಇಡೀ ಬಾದಾಮಿ­­ಯಲ್ಲಿ ಒಟ್ಟು 11 ಸಾವಿರಕ್ಕೂ ಹೆಚ್ಚು ಸಸಿಗಳನ್ನು ಬೆಳೆಸಲಾ­ಗಿದೆ. ಇವರೆಲ್ಲ ಪ್ರತೀ ರವಿವಾರ ಬಾದಾಮಿಯಲ್ಲಿ ನಿಸರ್ಗ ಬಳಗದಿಂದ ನೆಡಲಾದ ಸಸಿಗಳ ಪಾಲನೆ ಮಾಡುತ್ತಾರೆ. ಜತೆಗೆ ಹೊಸ ಸಸಿಗಳನ್ನು ನೆಟ್ಟು ಪರಿಸರ ಬೆಳೆಸುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ.

ಪರಿಸರ ಕಾಳಜಿಗೆ ಪೂಜಾರಿ ಪ್ರತೀಕ
ರಾಯ ಚೂರು ಜಿಲ್ಲೆಯ ಸಿರವಾರ ಪಟ್ಟ ಣದ ಬಸವರಾಜ ನಾಯಕ ಬುದ್ದಿನ್ನಿ ದಿನನಿತ್ಯ ಕೆಲಸದ ನಡುವೆಯೂ ಪರಿಸರದ ಬಗ್ಗೆ ಕಾಳಜಿ ಮಾಡುತ್ತ ಅದನ್ನು ದೈನಂದಿನ ಕೆಲಸದ ಭಾಗವನ್ನಾಗಿಸಿ­ಕೊಂಡಿದ್ದಾರೆ. ಪಟ್ಟಣದ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುವ ಬಸವರಾಜ ಕಳೆದ 20 ವರ್ಷಗಳಿಂದ ಪತ್ರಿಕೆ ವಿತರಕರಾಗಿ ಹಾಗೂ 17 ವರ್ಷಗಳಿಂದ ಖಾಸಗಿ ಶಾಲೆಯಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ದಿನನಿತ್ಯ ಶಾಲೆ ಕೆಲಸ ಮುಗಿದ ಅನಂತರ ತಮ್ಮ ಮಗ ಮಾರುತಿ ನಾಯಕನೊಂದಿಗೆ ಪಟ್ಟಣದ ವಿವಿಧೆಡೆ ತಾವು ನೆಟ್ಟ ಸಸಿಗಳನ್ನು ಪರೀಕ್ಷಿಸಿ ಅವುಗಳ ಬೆಳವಣಿಗೆಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸು­ತ್ತಾರೆ. ಪ್ರತೀ ವರ್ಷ ಅರಣ್ಯ ಇಲಾಖೆಯಿಂದ ಬರುವ ಸಸಿಗಳನ್ನು ಮನೆ-ಮನೆಗಳಿಗೆ ತೆರಳಿ ವಿತರಿಸುವುದಲ್ಲದೆ ಗುಂಡಿ ತೋಡಿ ಅವುಗಳನ್ನು ನೆಟ್ಟು ವಾರಕ್ಕೊಮ್ಮೆ ಭೇಟಿ ನೀಡಿ ವೀಕ್ಷಿಸಿ ಪೋಷಿಸುತ್ತಾರೆ.

Advertisement

ಪರಿಸರ ರಕ್ಷಣೆಗಾಗಿ ಸದ್ದಿಲ್ಲದ ಕಾರ್ಯ
ಸಸಿ ನೆಟ್ಟು ಗಿಡಗಳನ್ನು ಬೆಳೆಸುವುದೇ ನಮ್ಮ ಆದಾಯ ಎಂದುಕೊಂಡು ಪರಿಸರ ಪ್ರೇಮ ಮೆರೆಯುತ್ತಿರುವ ಬೆಳಗಾವಿಯ ಗ್ರೀನ್‌ ಸೇವಿಯರ್ ಎಂಬ ಸಂಸ್ಥೆ ಆರು ವರ್ಷಗಳಿಂದ ಸದ್ದಿಲ್ಲದೇ ಕಾರ್ಯ ಮಾಡುತ್ತಿದೆ. ಕೆಎಲ್‌ಇ ಸಂಸ್ಥೆಯಲ್ಲಿ ತರಬೇತುದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಮೀರ್‌ ಮಜಲಿ 2016ರಲ್ಲಿ ಸ್ಥಾಪಿಸಿದ ಈ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಜನ ಸ್ವಯಂ ಸೇವಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಇರುವವರು ಪ್ರತಿಯೊಬ್ಬರೂ ಉನ್ನತ ಹುದ್ದೆಯಲ್ಲಿ ಇದ್ದುಕೊಂಡು ಪರಿಸರ ಕಾಳಜಿ ಮೆರೆ ಯುತ್ತಿದ್ದಾರೆ. ಈವರೆಗೆ 50 ಸಾವಿರಕ್ಕೂ ಹೆಚ್ಚು ಸಸಿ ನೆಟ್ಟು ಪೋಷಿಸುವ ಕಾರ್ಯ ಮಾಡುತ್ತಿದ್ದಾರೆ.

ಸಸಿ ಕೊಡುವ ಡಾಕ್ಟರ್‌
ಕುಷ್ಟಗಿ ತಾಲೂಕು ಸರಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ| ಕೆ.ಎಸ್‌.ರಡ್ಡಿ ಅವರಿಗೆ ವೈದ್ಯಕೀಯ ಸೇವೆಯ ಜತೆಗೆ ಪರಿಸರ ಸಂರಕ್ಷಣೆಯೂ ಜೀವನದ ಭಾಗವಾಗಿದೆ. ಸ್ವತಃ ಬೀಜ ಖರೀದಿಸಿ ನರ್ಸರಿಯಲ್ಲಿ ಆರೈಕೆ ಮಾಡಿದ ಸಸಿಗಳನ್ನು ಉಚಿತವಾಗಿ ಹಂಚುತ್ತಿ­ರುವ ಅವರು, ಶಾಲಾ-ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಪಾಠ ಮಾಡುತ್ತಾರೆ. ಬರುವ ರೋಗಿಗಳಿಗೂ ಹಣ್ಣುಗಳನ್ನು ತಿಂದು ಬೀಜ ಎಲ್ಲೆಂದರಲ್ಲಿ ಎಸೆದು, ಬೀಜಗಳ ಸಂಖ್ಯೆ ಕಡಿಮೆ ಮಾಡದಿರಿ. ಆ ಬೀಜಗಳನ್ನು ನಮಗೆ ಕೊಡಿ, ನಿಮಗೆ ಸಸಿ ಮಾಡಿ ಕೊಡುವುದಾಗಿ ಸಲಹೆ ನೀಡುವುದನ್ನು ಮರೆಯುವುದಿಲ್ಲ. ಪರಿಸರ ದಿನ, ಯೋಗ ದಿನ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಸಸಿಗಳನ್ನು ಉಚಿತವಾಗಿ ನೀಡುವ ಮೂಲಕ ಗಮನ ಸೆಳೆದಿರುವ ಅವರು ವಸತಿ ಗೃಹದ ಸುತ್ತಲೂ ವೈವಿಧ್ಯ ಸಸಿಗಳನ್ನು ಬೆಳೆಸಿದ್ದಾರೆ. ಗುಳಿಗೆ ಕೊಡುವ ಡಾಕ್ಟರ್‌ ಸಸಿ ಕೊಡುತ್ತಿದ್ದಾರೆ.

ಸಾಲುಮರದ ವೀರಾಚಾರ್‌
ಗ್ರಾಮ ಪಂಚಾಯತ್‌ ಅಧಿಕಾರಿ ಯೊಬ್ಬರು ಸಸಿ ನೀಡಲು ನಿರಾಕರಿಸಿ ದ್ದನ್ನೇ ಸವಾಲಾಗಿ ಸ್ವೀಕರಿಸಿ, ಸಸಿ ಬೆಳೆಸುವ ಮತ್ತು ಪೋಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ದಾವಣಗೆರೆ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಸಾಲುಮರದ ವೀರಾಚಾರ್‌ ಪರಿಸರ ಸಂರಕ್ಷಣೆ ಯಲ್ಲಿ ಎಲ್ಲರೂ ನಿಬ್ಬೆರಗಾಗುವ ಸಾಧನೆ ಮಾಡಿದ್ದಾರೆ. ಸಾಲುಮರದ ತಿಮ್ಮಕ್ಕನಂತೆ ವೀರಾಚಾರ್‌ ಮಿಟ್ಲಕಟ್ಟೆ ಇತರೆಡೆ ಸಾಲುಮರಗಳ ಸಾಕಿ, ಸಲುಹುತ್ತಿರುವ ಕಾರಣಕ್ಕೆ ದಾವಣಗೆರೆ ಭಾಗದಲ್ಲಿ ಸಾಲುಮರದ ವೀರಾಚಾರ್‌ ಎಂದೇ ಖ್ಯಾತಿ ಹೊಂದಿದ್ದಾರೆ. ಸಣ್ಣ ವಯಸ್ಸಿನಿಂದಲೇ ಗಿಡ-ಮರ- ಪರಿಸರದ ಬಗ್ಗೆ ಅಪಾರ ಪ್ರೀತಿ ಹೊಂದಿರುವ ವೀರಾಚಾರ್‌ 2,500ಕ್ಕೂ ಹೆಚ್ಚು ಸಸಿ ನೆಟ್ಟು ಬೆಳೆದು ನಿಂತಿರುವ ಮರಗಳನ್ನು ಈ ಕ್ಷಣಕ್ಕೂ ಸ್ವಂತ ಮಕ್ಕಳಿಗೂ ಹೆಚ್ಚಾಗಿ ಹಾರೈಕೆ ಮಾಡುತ್ತಾರೆ.

2 ಲಕ್ಷ ಗಿಡ ನೆಟ್ಟ ಪಿಗ್ಮಿ ಕಲೆಕ್ಟರ್‌!
ಮಂಗಳೂರಿನ ಮಾಧವ ಉಳ್ಳಾಲ ಅವರು ಸುಮಾರು 37 ವರ್ಷಗಳಿಂದ ಗಿಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇಲ್ಲಿಯವರೆಗೆ ಸುಮಾರು 2 ಲಕ್ಷ ಗಿಡ ಬೆಳೆಸಿದ್ದಾರೆ. ಮಾಧವ ಉಳ್ಳಾಲ ಪಿಗ್ಮಿ ಕಲೆಕ್ಟರ್‌ ಆಗಿ ಮಂಗಳೂರಿನ ವಿವಿಧ ಭಾಗಗಳಲ್ಲಿ ಠೇವಣಿ ಸಂಗ್ರಹಿಸುತ್ತಿದ್ದರು. ಪಿಗ್ಮಿಗೆ ನಡೆದುಕೊಂಡೇ ಹೋಗುತ್ತಿದ್ದ ಅವರು ರಸ್ತೆ ಬದಿ ನೆರಳಿಲ್ಲದ ಪರಿಸ್ಥಿತಿ ಕಂಡು ಮರುಗಿದರು. ಪ್ರಾಣಿ ಪಕ್ಷಿಗಳಿಗೆ ಆಹಾರ ಸಿಗುತ್ತಿಲ್ಲ ಎಂಬುದನ್ನು ಅರಿತರು. ಆರಂಭದಲ್ಲಿ ನಗರದ ಹಂಪನಕಟ್ಟೆಯಿಂದ ಜ್ಯೋತಿ, ಬಲ್ಮಠ ರಸ್ತೆ ಬದಿಗಳಲ್ಲಿ ಗಿಡ ನೆಟ್ಟ ಮಾಧವ ಉಳ್ಳಾಲ ಅವರು ಬಳಿಕ ಗಿಡಗಳ ಜತೆಗೆ ಜೀವನ ನಡೆಸುವಂತಾಯಿತು. ಅಂದು ಅವರು ನೆಟ್ಟ ಗಿಡಗಳು ಇಂದು ನಗರದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿವೆ. ಹಂತ ಹಂತವಾಗಿ ನಗರದ ವಿವಿಧ ಭಾಗಗಳಲ್ಲಿ ಮತ್ತು ದಕ್ಷಿಣ ಕನ್ನಡ, ಉಡುಪಿ ಸಹಿತ ವಿವಿಧ ಜಿಲ್ಲೆಗಳಲ್ಲಿ ಗಿಡ ನೆಟ್ಟರು. ಗಿಡ ನೆಡುವುದರಲ್ಲಿಯೇ ತನ್ನನ್ನು ತಾನು ತೊಡಗಿಸಿಕೊಂಡರು. ಇವರಿಗೆ ಸಂಘ ಸಂಸ್ಥೆಗಳು ಬೆಂಬಲವಾಗಿ ನಿಂತವು.

ಎಲ್‌ಐಸಿ ಏಜೆಂಟನ ಪರಿಸರ ಪ್ರೀತಿ
ವೃತ್ತಿಯಿಂದ ಎಲ್‌ಐಸಿ ಏಜೆಂಟ್‌ ಆಗಿರುವ 34 ವರ್ಷದ ಯುವಕ ಗಿರೀಶ್‌ ಅವರಿಗೆ ಗಿಡಗಳನ್ನು ನೆಡುವುದು ಪ್ರವೃತ್ತಿ. ಭೂತಾಯಿಯ ಒಡಲನ್ನು ತಂಪು ಮಾಡಬೇಕು ಎಂಬ ಸದಾಶಯದಿಂದ ಅವರು ಒಂದು ದೊಡ್ಡ ತಂಡ ಕಟ್ಟಿಕೊಂಡು ಗಿಡ ನೆಡುವ ಕಾಯಕದಲ್ಲಿ ತೊಡಗಿಸಿ­ಕೊಂಡಿದ್ದಾರೆ. ಹಾಸನ ಜಿಲ್ಲೆ ರಾಮದೇವಪುರದ ಗಿರೀಶ್‌ ಅವರಿಗೆ ಪರಿಸರ ಪ್ರೇಮ ಬೆಳೆಯಲು ತಾತ ಲಂಕೇಗೌಡರು ಕಾರಣ. ಸಮಯ ಸಿಕ್ಕಾಗಲೆಲ್ಲ ಗಿಡ ನೆಡುತ್ತಿದ್ದ ತಾತನನ್ನು ನೋಡುತ್ತಲೇ ಬೆಳೆದ ಗಿರೀಶ್‌, ಶಾಲಾ ದಿನಗಳಿಂದಲೇ ಸಸಿ ನೆಡಲು ಆರಂಭಿಸಿದರು. 45 ಮಂದಿ ಸದಸ್ಯರೊಂದಿಗೆ ಆರಂಭವಾದ ಅವರ ಏಕ ಲವ್ಯ ಮುಕ್ತ ದಳ ದಲ್ಲಿ 400ಕ್ಕೂ ಹೆಚ್ಚು ಸ್ವಯಂ ಸೇವಕರಿದ್ದಾರೆ. ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದಾರೆ. ತಮ್ಮ ಕಾರ್ಯಕ್ಷೇತ್ರವನ್ನು ಹಾಸನ ಜಿಲ್ಲೆಗೆ ಮಾತ್ರ ಸೀಮಿತ ಮಾಡಿಕೊಳ್ಳದೆ ಉಡುಪಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ವಿಸ್ತರಿಸಿಕೊಂಡಿದ್ದಾರೆ. ಗಿಡ ನೆಡುವ ಕೆಲಸದ ಜತೆಗೆ ಕೆರೆ, ಕಲ್ಯಾಣಿಗಳ ಪುನಶ್ಚೇತನ ಕಾರ್ಯವನ್ನೂ ಗಿರೀಶ್‌ ಅವರ ಏಕಲವ್ಯ ಮುಕ್ತ ದಳವು ಮಾಡುತ್ತಿದೆ.

ಪರಿಸರಕ್ಕಾಗಿ ಲಕ್ಷ ರೂ. ವೆಚ್ಚ ಮಾಡಿದ ಪರಿ ಸರ ಪ್ರೇಮಿ
ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ, ಒಂಬತ್ತನೇ ವಯಸ್ಸಿನಲ್ಲೇ ಪರಿಸರ ಪ್ರೀತಿಯನ್ನು ಮೈಗೂಡಿಸಿಕೊಂಡಿರುವ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಭೂಹಳ್ಳಿ ಗ್ರಾಮದ ಪುಟ್ಟಸ್ವಾಮಿ ಪರಿಸರ ಕಾಳಜಿಗಾಗಿ ಪಿಂಚಣಿ ಹಣವನ್ನೇ ವೆಚ್ಚ ಮಾಡುತ್ತಿದ್ದಾರೆ. ಬರೋಬ್ಬರಿ 12ಕ್ಕೂ ಹೆಚ್ಚು ಉದ್ಯಾನಗಳಲ್ಲಿ ವಿವಿಧ ಜಾತಿಯ ಸಾವಿರಾರು ಗಿಡ ನೆಟ್ಟು ಪರಿಸರ ಕಾಳಜಿ ಮೆರೆಯುತ್ತಿದ್ದಾರೆ. ಭೂ ಹಳ್ಳಿಯಲ್ಲಿ ಬರಡು ಭೂಮಿಯಾಗಿದ್ದ ಮೂರು ಎಕ್ರೆ ಪ್ರದೇಶದಲ್ಲಿ ಇವರು ಕವಿವನ ನಿರ್ಮಿಸಿದ್ದಾರೆ. ನೂರಾರು ಬಗೆಯ ಗಿಡಮರಗಳು ಬೆಳೆದು ಬರಡಾಗಿದ್ದ ಪ್ರದೇಶ ಇಂದು ಅರಣ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next