ಬಾಗಲಕೋಟೆ: ಆ ಊರಾಗ್ ಕೊಲೆ ಆಗಿದೆ, ಈ ಊರಾಗ್ ಕಳ್ಳತನ ಆಗಿದೆ, ನಾಳೆ ಸಿಎಂ ಬರಲಿದ್ದಾರೆ-ಅಲ್ಲಿಗೆ ಬಂದೋಬಸ್ತ್‌ಗೆ ಹೋಗಿ, ಚುನಾವಣೆ ಬರಲಿದೆ. ಅದಕ್ಕಾಗಿ ಜಿಲ್ಲೆಯ ಬಾರ್ಡರ್‌ನಲ್ಲಿ ಕಾವಲು ಹಾಕಬೇಕು..
ಹೌದು. ಜಿಲ್ಲೆಯ ಬಹುತೇಕ ಪೊಲೀಸ್ ಠಾಣೆ ಅಥವಾ ಎಸ್ಪಿ ಕಚೇರಿಗೆ ಹೋದರೆ ಇಂತಹದ್ದೇ ಮಾತುಗಳು ಕೇಳಿ ಬರುತ್ತವೆ. ಆದರೆ ಬಾಗಲಕೋಟೆಯ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಗುಂಪು ಗುಂಪು ನಿಂತು ಚರ್ಚಿಸುತ್ತಿದ್ದರೆ, ಅಲ್ಲಿ ಬಾಗಲಕೋಟೆ ಸಶಸ್ತ್ರ ಮೀಸಲು ಪಡೆ ಕಚೇರಿ ಆವರಣದ ಅರಣ್ಯ ಸಂರಕ್ಷಣೆ ಕುರಿತೇ ಚರ್ಚೆ ನಡೆದಿರುತ್ತದೆ. ನಮ್ಮ ಸಾಹೇಬ್ರು ಬಂದ್ ಮೇಲೆ, ಡಿಎಆರ್ ಆಫೀಸ್ ಭಾರಿ ಆಗೈತ್ರಿ ಎಂದು ಬಹುತೇಕ ಪೊಲೀಸರು ಚರ್ಚೆಯಲ್ಲಿ ತೊಡಗಿರುತ್ತಾರೆ.
ಕಲ್ಲರಳಿ ಹೂವಾಗಿ: ಇದು ಪಕ್ಕಾ ಕಲ್ಲರಳಿ ಹೂವಾಗಿ ಎಂಬ ನಾಣ್ನುಡಿಗೆ ಹೋಲಿಸಬಹುದು. ಬಾಗಲಕೋಟೆಯ ನವನಗರದ ಡಿಆರ್ ಪೊಲೀಸ್ ಆವರಣ, ಈಗ ಮೂರು ವರ್ಷಗಳ ಹಿಂದೆ ಗುಡ್ಡ-ಬರಡು-ಕಲ್ಲಿನಿಂದ ಕೂಡಿತ್ತು. ಸ್ವತಃ ಪೊಲೀಸರೇ ಇಲ್ಲಿಗೆ ಹೋಗುತ್ತಿರಲಿಲ್ಲ. ಕೊನೆ ಪಕ್ಷ ಇಲ್ಲಿ ಬೆಳಗ್ಗೆ ವಾಕಿಂಗ್ ಮಾಡಲೂಬಾರದ ಪರಿಸ್ಥಿತಿ ಇತ್ತು.
ಡಿಆರ್ ಕಚೇರಿ ಬಿಟ್ಟರೆ, ಉಳಿದ ಗುಡ್ಡದ ಪ್ರದೇಶ, ಒಂದು ರೀತಿ ನಿರ್ಜನವಾಗಿತ್ತು. ಮುಚಖಂಡಿ ಕೆರೆಯಿಂದ ಕಂಠಿ ರೇಸಾರ್ಟ್‌ವರೆಗೂ ಸಾಲು ಬೆಟ್ಟಗಳಿದ್ದು, ಆ ಬೆಟ್ಟದ ಜಾಗದಲ್ಲೇ ಡಿಆರ್ ಪೊಲೀಸ್ ವಿಭಾಗಕ್ಕೆ ಸುಮಾರು ಏಳು ಎಕರೆಗೂ ಅಧಿಕ ಜಾಗ ನೀಡಲಾಗಿದೆ. ಸುಮಾರು ಒಂದು ಎಕರೆಯಷ್ಟು ಪ್ರದೇಶದಲ್ಲಿ ಕಚೇರಿ, ಕ್ರೀಡಾ ಚಟುವಟಿಕೆಗೆ ಬಳಸುವ ಆವರಣವಿದೆ. ಉಳಿದ ಭೂಮಿ ಸಂಪೂರ್ಣ ಬರಡು. ಯುವ ಐಪಿಎಸ್ ಅಧಿಕಾರಿ ಲೋಕೇಶ ಜಗಲಾಸರ ಅವರು ಜಿಲ್ಲೆಗೆ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಡಿಎಆರ್ ಕಚೇರಿ ಆವರಣದಲ್ಲಿ ಪೊಲೀಸ್ ಧ್ವಜ ದಿನಾಚರಣೆ, ಪೊಲೀಸ್ ಕ್ರೀಡಾಕೂಟ ಆಯೋಜಿಸಿದ್ದ ವೇಳೆ, ಒಂದು ಸುತ್ತು ಈ ನಿರ್ಜನ ಪ್ರದೇಶದಲ್ಲಿ ಸುತ್ತು ಹಾಕಿ ಬಂದಿದ್ದರು. ಮೊದಲೇ ಅರಣ್ಯವೆಂದರೆ ಅತೀವ ಕಾಳಜಿ-ಪ್ರೀತಿ ಹೊಂದಿರುವ ಎಸ್ಪಿ ಲೋಕೇಶ ಅವರು, ಇದೊಂದು ಸುಂದರ ಅರಣ್ಯ ಪ್ರದೇಶ ಮಾಡಬೇಕೆಂಬ ಆಶಯ-ಗುರಿ ಹಾಕಿ ಕೊಂಡರು. ಅದೇ ಮಾರ್ಗ ದಲ್ಲಿ ಇಡೀ ಡಿಆರ್ ಪೊಲೀಸ್ ಪಡೆ, ಪಕ್ಕದಲ್ಲೇ ಇರುವ ಪೊಲೀಸ್ ವಸತಿ ಗೃಹದಲ್ಲಿರುವ ಎಲ್ಲ ಕುಟುಂಬದವರೊಂದಿಗೆ ಚರ್ಚಿಸಿ, ತಮ್ಮ ಯೋಜನೆ ಹಂಚಿಕೊಂಡರು. ಇದಕ್ಕೆ ಪ್ರತಿಯೊಬ್ಬರೂ ಸಾಥ್ ನೀಡಿದ್ದು, ಇದೀಗ ಅದು ಸಾಕಾರಗೊಂಡಿದೆ.
ಎಲ್ಲವೂ ಶ್ರಮದಾನ: ಪೊಲೀಸ್ ಅಧಿಕಾರಿ-ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಪರಿಸರ ಕಾಳಜಿ ತೋರಿದರೆ ಹೇಗೆಲ್ಲ ಅರಣ್ಯ ಸಂರಕ್ಷಣೆ ಮಾಡಬಹುದು ಎಂಬುದಕ್ಕೆ ಬಾಗಲಕೋಟೆಯ ಪೊಲೀಸರು ಅತ್ಯುತ್ತಮ ಉದಾಹರಣೆ. ಕಳೆದ 2020ರಲ್ಲಿ ಡಿಆರ್ ಮತ್ತು ಸಿವಿಲ್ ಪೊಲೀಸ್ ಸಿಬ್ಬಂದಿ, ಪ್ರತಿದಿನ ಒಂದು ಗಂಟೆ ಶ್ರಮದಾನ ಮೂಲಕ ಡಿಎಆರ್ ಪೊಲೀಸ್ ಆವರಣದ 3 ಎಕರೆ ಪ್ರದೇಶದಲ್ಲಿ ಒಟ್ಟು 15 ಸಾವಿರ ಸಸಿಗಳನ್ನು ನೆಟ್ಟರು. ಇದಕ್ಕೂ ಮೊದಲು ಗುಟ್ಟದ ಪ್ರದೇಶವನ್ನು ಒಂದಷ್ಟು ಸ್ವತ್ಛಗೊಳಿಸಿ, ಗುಂಡಿ ತೋಡಿ, 100 ಜಾತಿಯ ಕಾಡು ಮರ ಬೆಳೆಸಿದರು. ಅವು ಒಂದು ವರ್ಷದಷ್ಟು ಬೆಳೆದ ಬಳಿಕ ಸುಮಾರು 35 ಜಾತಿಯ ವಿವಿಧ ಹಣ್ಣಿನ ಸಸಿಗಳು ನೆಟ್ಟಿದ್ದಾರೆ. ಬೆಳಗಾವಿ ವಿಭಾಗದ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಪ್ರವೀಣ ಸೂದ್ ಅವರು ಇಲ್ಲಿಗೆ ಬಂದಾಗ ಅತ್ಯಂತ ಖುಷಿಪಟ್ಟು, ತಮ್ಮ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹಿರಿಯ ಅಧಿಕಾರಿ ಬೆಟ್ಟು ತಟ್ಟಿ ಹುರುದುಂಬಿಸಿದ ಫಲವೇ, ಇನ್ನಷ್ಟು ಅತ್ಯುತ್ತಮ ಕೆಲಸಕ್ಕೆ ಪ್ರೇರಣೆ ಕೂಡ ಆಯಿತು.
ಇದಾದ ಬಳಿಕ ಕಳೆದ 6 ತಿಂಗಳ ಹಿಂದೆ ಮತ್ತೆ 2 ಎಕರೆ ಪ್ರದೇಶದಲ್ಲಿ ಸುಮಾರು 5 ಸಾವಿರ ಸಸಿ ನೆಡಲಾಗಿದೆ. ಈಗ ಒಟ್ಟು 20 ಸಾವಿರ ವಿವಿಧ ಜಾತಿಯ ಕಾಡು ಮರ, 35 ಜಾತಿಯ ಹಣ್ಣಿನ ಸಸಿಗಳು, ಬೆಳೆದು ನಿಂತಿವೆ. ಇದರ ಪ್ರತಿಫಲವಾಗಿ ಮುಧೋಳದ ಸಿಪಿಐ ಕಚೇರಿ ಸುತ್ತಲಿನ ಇಲಾಖೆಯ ಜಾಗೆಯಲ್ಲೂ ಸುಮಾರು 20 ಸಾವಿರ ವಿವಿಧ ಜಾತಿಯ ಸಸ್ಯ ಸಂಕುಲ ಬೆಳೆದು ನಿಂತಿದೆ.
2ನೇ ಜನರೇಶನ್: ಒಟ್ಟು ಐದು ಎಕರೆ ಪ್ರದೇಶದಲ್ಲಿ 20 ಸಾವಿರ ಅರಣ್ಯ ಬೆಳೆದು ನಿಂತಿದ್ದು, ಇಲ್ಲಿ ಸಾವಿರಾರು ಪಕ್ಷಿಗಳು ಬಂದು ನೆಲೆಸಿವೆ. ಆ ಪಕ್ಷಿಗಳಿಗಾಗಿ ಅಲ್ಲಿನ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಹಣ್ಣುಗಳು, ಪಕ್ಷಿಗಳಿಗೆ ನಿತ್ಯದ ಆಹಾರ ಕೂಡಾ ಆಗಿವೆ. ಹೀಗಾಗಿ ಇಲ್ಲಿಗೆ ಬಂದ ಪಕ್ಷಿ ಸಂಕುಲ, ಇಲ್ಲಿಯೇ ಮನೆ ಮಾಡಿ, ಸ್ವಚ್ಚಂದವಾಗಿ ಹಾರಾಡಿಕೊಂಡಿವೆ.
2020ರಲ್ಲಿ ನೆಟ್ಟ ಕಾಡು ಮರ, ಹಣ್ಣಿನ ಸಸಿಗಳು ಇಂದು ಬೆಳೆದು ನಿಂತಿದ್ದು, ಪಕ್ಷಿಗಳು ಹಣ್ಣು ತಿಂದು, ಹಿಕ್ಕಿ ಹಾಕಿದ ಸ್ಥಳದಲ್ಲಿ 2ನೇ ಜನರೇಶನ್‌ನ ಚಿಕ್ಕ ಚಿಕ್ಕ ಸಸಿಗಳು ತಾನಾಗಿಯೇ ಬೆಳೆದು ನಿಂತಿವೆ. ಅವೂ ಕೂಡ ಈಗ 2ರಿಂದ 3 ಅಡಿ ಬೆಳೆದಿದ್ದು, ನೋಡಲು ತುಂಬಾ ಖುಷಿಯಾಗುತ್ತದೆ ಎಂದು ಡಿಎಆರ್ ಪೊಲೀಸ್ ಠಾಣೆಯ ಡಿವೈಎಸ್ಪಿ ಭರತ ತಳವಾರ “ಉದಯವಾಣಿ’ ಜತೆ ಖುಷಿ ಹಂಚಿಕೊಂಡರು.
5 ಎಕರೆ ಪ್ರದೇಶದಲ್ಲಿ 20 ಸಾವಿರಕ್ಕೂ ಹೆಚ್ಚು ಸಸಿ ನೆಟ್ಟಿದ್ದು, ಅವು ಮರವಾಗಿ ಬೆಳೆದಿವೆ. ಪ್ರತಿಯೊಂದು ಗಿಡಕ್ಕೂ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದು, ಇದಕ್ಕೆ ಸ್ವತಃ ಎಸ್ಪಿ ಸಾಹೇಬರೇ ತಮ್ಮ ಸ್ವಂತದ ಹಣ ಖರ್ಚು ಮಾಡಿದ್ದಾರೆ. ಇಷ್ಟೊಂದು ಅರಣ್ಯ ಬೆಳೆಸಲು ಇಲಾಖೆ ಅನುದಾನ ಬಳಸಿಲ್ಲ. ಅರಣ್ಯ ಇಲಾಖೆ ಸಸಿ ನೀಡಿದ್ದು, ಪ್ರತಿಯೊಬ್ಬ ಅಧಿಕಾರಿ-ಸಿಬ್ಬಂದಿ ಶ್ರಮದಾನದಿಂದಲೇ ಈ ಕಾರ್ಯ ಮಾಡಿದ್ದೇವೆ ಎಂದು ಭರತ ಹೇಳಿದರು.
ಶ್ರೀಶೈಲ ಕೆ. ಬಿರಾದಾರ