Advertisement
ಪಾಕಿಸ್ತಾನದ ಜೈಷ್- ಎ- ಮೊಹಮದ್ ಸಂಘಟನೆಯ ಆರು ಶಂಕಿತ ಉಗ್ರರು ದೇಶದೊಳಗೆ ನುಸುಳಿದ್ದಾರೆ ಎಂಬ ಕೇಂದ್ರ ಗುಪ್ತಚರ ಮಾಹಿತಿ ಬೆನ್ನಲ್ಲೇ ರಾಜ್ಯದೊಳಗೆ ಉಗ್ರ ಸಂಘಟನೆಯ ಸದಸ್ಯರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Related Articles
Advertisement
ಉಗ್ರ ಸಂಘಟನೆಯ ಚಟುವಟಿಕೆಗಳು ಹಾಗೂ ಸದಸ್ಯರು ರಾಜ್ಯದಲ್ಲಿರುವ ಬಗ್ಗೆ ಎಟಿಎಸ್ ತಂಡ ಮಾಹಿತಿ ಕೇಳಿದ್ದಾರೆ. ಆದರೆ, ಯಾವ ಸಂಘಟನೆಗೆ ಉಗ್ರರು ಸೇರಿದವರು ಎಂಬ ಮಾಹಿತಿಯನ್ನು ಮೂಲಗಳು ಹಂಚಿಕೊಂಡಿಲ್ಲ.
2013ರಲ್ಲಿ ಹೈದರಾಬಾದ್‌ನ ದಿಲ್‌ಸುಖ್ ನಗರದಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಜತೆಗೆ, ಚುನಾವಣಾ ಹಿನ್ನೆಲೆಯಲ್ಲಿ ಕೆಲವು ಉಗ್ರ ಚಟುವಟಿಕೆಗಳು ನಡೆಯುವ ಬಗ್ಗೆ ಎಟಿಎಸ್‌ಗೆ ಮಾಹಿತಿ ಲಭ್ಯವಾಗಿದ್ದು, ಹೀಗಾಗಿ ರಾಜ್ಯಕ್ಕೆ ಆಗಮಿಸಿತ್ತು ಎಂದು ತಿಳಿದು ಬಂದಿದೆ.
ರಾಯಭಾರಿ ಕಚೇರಿಗಳಲ್ಲಿ ಭದ್ರತೆ ತಪಾಸಣೆ!ಶಂಕಿತ ಉಗ್ರರು ಸಕ್ರಿಯರಾಗಿದ್ದಾರೆ ಎಂಬ ಮಾಹಿತಿ ಬೆನ್ನಲ್ಲೇ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮವಾಗಿ ರಾಜಧಾನಿಯಲ್ಲಿರುವ ವಿದೇಶಿ ರಾಯಭಾರ ಕಚೇರಿಗಳಲ್ಲಿ ಭದ್ರತಾ ತಪಾಸಣೆಯ ಪರಿಶೀಲನೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ರಾಯಭಾರ ಕಚೇರಿಗಳಿಗೂ ಮಾಹಿತಿ ನೀಡಿದ್ದು, ಅಲ್ಲಿನ ಭದ್ರತೆ ವ್ಯವಸ್ಥಿತವಾಗಿದೆಯೇ? ಮತ್ತಷ್ಟು ಅಗತ್ಯವಿದೆಯೇ ಎಂಬುದರ ಬಗ್ಗೆ ಹಲವು ದಿನಗಳಿಂದ ಒಂದು ತಂಡ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಕೆಲವು ದೇಶಗಳ ರಾಯಭಾರಿ ಕಚೇರಿಗಳ ಭದ್ರತೆ ತಪಾಸಣೆ ಪೂರ್ಣಗೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಹಿಂದೆ ಭಾರತೀಯ ಉಪಖಂಡದ ಅಲ್‌ಖೈದಾ (ಎಕ್ಯೂಐಎಸ್) ಸಂಘಟನೆಯು ಬೆಂಗಳೂರಿನಲ್ಲಿರುವ ಇಸ್ರೇಲ್ ಕಾನ್ಸುಲೇಟ್ (ರಾಯಭಾರಿ ಕಚೇರಿ) ಮತ್ತಿತರ ರಾಯಭಾರಿ ಕಚೇರಿಗಳಿಗೆ ಬೆದರಿಕೆ ಒಡ್ಡಿತ್ತು. ಈಗ ಅಂತಹ ಬೆದರಿಕೆ ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಜತೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳ ಭದ್ರತೆ ಕುರಿತಂತೆ ಹೆಚ್ಚಿನ ನಿಗಾವಹಿಸಲು ಜಿಲ್ಲಾ ಎಸ್‌ಪಿಗಳಿಗೂ ಸಂದೇಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ದೂರವಾಣಿ ಕರೆ ವಿನಿಮಯ ಶಂಕೆ?
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಉಗ್ರರು ಪಾಕ್ ಸೇರಿದಂತೆ ದೇಶದ ಹೊರಗಡೆ ಇರುವ ಉಗ್ರ ಸಂಘಟನೆ ಸದಸ್ಯರ ಜೊತೆ ಸಂಪರ್ಕದಲ್ಲಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ, ಆ ಆಯಾಮದಲ್ಲಿಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ. 2006ರಲ್ಲಿ ಮೈಸೂರಿನಲ್ಲಿ ಬಂಧಿತನಾಗಿದ್ದ ಪಾಕ್ ಮೂಲದ ಆಲ್-ಬದರ್ ಉಗ್ರ ಸಂಘಟನೆಯ ಮೊಹಮದ್ ಫಯಾದ್ ಕೊಯಾ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಬ್ಯಾರಕ್‌ನಿಂದ ಪಾಕ್ ಉಗ್ರ ಮೊಹಮದ್ ಅಲಿ ಹುಸೇನ್ ಜತೆ ಸಂಪರ್ಕವಿಟ್ಟುಕೊಂಡು ದೂರವಾಣಿ ಮೂಲಕ ಮಾತನಾಡುತ್ತಿದ್ದ ಎಂಬ ಬಗ್ಗೆ ಗುಪ್ತಚರ ದಳ ವರದಿ ನೀಡಿತ್ತು. ಇದಕ್ಕೆ ಸಾಕ್ಷ್ಯ ಎಂಬಂತೆ 2016ರಲ್ಲಿ ಆತನ ಬ್ಯಾರಕ್ ಮುಂದೆ ಸಿಮ್ ಕಾರ್ಡ್ ದೊರೆತಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಗುಲ್ಬರ್ಗ ಜೈಲಿಗೆ ವರ್ಗಾಯಿಸಲಾಗಿತ್ತು. – ಮಂಜುನಾಥ್ ಲಘುಮೇನಹಳ್ಳಿ