Advertisement

ಕಲಾವಿದ ರವಿಭಟ್‌ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ

09:38 AM Aug 02, 2019 | Lakshmi GovindaRaj |

ಕನ್ನಡ ಚಿತ್ರರಂಗದ ಹಿರಿಯ ನಟಿ ವಿನಯಾ ಪ್ರಸಾದ್‌ ಅವರದ್ದು ಮೊದಲಿನಿಂದಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಕುಟುಂಬ. ಈಗಾಗಲೇ ವಿನಯಾ ಪ್ರಸಾದ್‌ ಸೋದರ ರವಿಭಟ್‌, ಪುತ್ರಿ ಪ್ರಥಮಾ ಪ್ರಸಾದ್‌ ಕೂಡ ಕನ್ನಡದ ಕಿರಿತೆರೆ ಮತ್ತು ಹಿರಿತೆರೆ ಎರಡರಲ್ಲೂ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಈಗ ಇದೇ ಕುಟುಂಬದಿಂದ ಮತ್ತೂಂದು ಹೊಸ ಪ್ರತಿಭೆ ಚಿತ್ರರಂಗಕ್ಕೆ ಪರಿಚಯವಾಗುತ್ತಿದೆ. ಅವರೇ ಕೃಷ್ಣಾ ಭಟ್‌.

Advertisement

ಹೌದು, ವಿನಯಾ ಪ್ರಸಾದ್‌ ಅವರ ಸೋದರ ರವಿಭಟ್‌ ಅವರ ಪುತ್ರಿ ಕೃಷ್ಣಾ ಈಗ “ಸವರ್ಣದೀರ್ಘ‌ಸಂಧಿ’ ಎನ್ನುವ ಚಿತ್ರದ ಮೂಲಕ ನಾಯಕ ನಟಿಯಾಗಿ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ಇದೇ ವೇಳೆ “ಬಾಲ್ಕನಿ’ಯಲ್ಲಿ ಮಾತನಾಡಿರುವ ಕೃಷ್ಣಾ, ತಮ್ಮ ಚಿತ್ರ ಬದುಕಿನ ಆರಂಭದ ಬಗ್ಗೆ ಕೆಲ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.  “ನಮ್ಮದು ಕಲಾವಿದರ ಹಿನ್ನೆಯ ಕುಟುಂಬವಾದರೂ, ಆರಂಭದಲ್ಲಿ ನನಗೆ ಅಭಿನಯಿಸಬೇಕು ಅಥವಾ ಚಿತ್ರರಂಗಕ್ಕೆ ಬರಬೇಕು ಎನ್ನುವ ಯಾವುದೇ ಯೋಚನೆ ಇರಲಿಲ್ಲ.

ಮೊದಲು ನನಗೆ ಒಳ್ಳೆಯ ರೆಸ್ಟೋರೆಂಟ್‌ ಮಾಡಬೇಕು ಎಂಬ ಕನಸಿತ್ತು. ಅದಕ್ಕಾಗಿಯೇ ಕ್ರೈಸ್ಟ್‌ ಯುನಿವರ್ಸಿಟಿಯಲ್ಲಿ ಹೋಟೆಲ್‌ ಮ್ಯಾನೇಜ್ಮೆಂಟ್‌ ಕೋರ್ಸ್‌ಗೆ ಸೇರಿಕೊಂಡೆ. ಹೀಗೆ ಕೋರ್ಸ್‌ ಮಾಡುತ್ತಿರುವಾಗಲೇ, ಮನೆಯವರ ಸಲಹೆಯಂತೆ ಪಾರ್ಟ್‌ ಟೈಂ ಮಾಡೆಲಿಂಗ್‌ ಮಾಡೋದಕ್ಕೆ ಶುರು ಮಾಡಿದೆ. ಆಗಾಗ್ಗೆ ಶೋಗಳಲ್ಲಿ ಭಾಗವಹಿಸುತ್ತಿದ್ದೆ. ಕೆಲ ಕಾಂಪಿಟೇಷನ್ಸ್‌ನಲ್ಲಿ ಸ್ಪರ್ಧಿಸಿ ಫ‌ಸ್ಟ್‌ ಪ್ರೈಸ್‌ ಕೂಡ ಪಡೆದುಕೊಂಡಿದ್ದೆ.

ಕಾಲೇಜು ದಿನಗಳಲ್ಲಿ ಜಸ್ಟ್‌ ಪಾಕೆಟ್‌ ಮನಿಗಾಗಿ ಮಾಡುತ್ತಿದ್ದ ಮಾಡೆಲಿಂಗ್‌ನಿಂದಾಗಿ ನಂತರ ನನಗೆ ಸೀರಿಯಲ್‌ ಮತ್ತು ಸಿನಿಮಾಗಳಿಂದಲೂ ಸಾಕಷ್ಟು ಆಫ‌ರ್ ಬರೋದಕ್ಕೆ ಶುರುವಾಯ್ತು. ಕಾಲೇಜ್‌ ಮುಗಿಯುತ್ತಿದ್ದಂತೆ ಮನೆಯವರೊಂದಿಗೆ ಚರ್ಚಿಸಿ ಬಳಿಕ ಚಿತ್ರರಂಗಕ್ಕೆ ಬರುವ ನಿರ್ಧಾರ ಮಾಡಿದೆ’ ಎನ್ನುತ್ತಾರೆ ಕೃಷ್ಣಾ. ಇನ್ನು ಮನೆಯವರ ಸಲಹೆಯ ಬಳಿಕ ಚಿತ್ರರಂಗಕ್ಕೆ ಬರುವ ನಿರ್ಧಾರ ಮಾಡಿದ ಕೃಷ್ಣಾ ಅವರಿಗೆ, ಅಭಿನಯಕ್ಕೆ ಸಂಬಂಧಿಸಿದಂತೆ ಕಲಿಕೆ ಮತ್ತು ಮಾರ್ಗದರ್ಶನ ಮಾಡಿರುವುದು ನಟಿ ಮತ್ತು ರಂಗಕಲಾವಿದೆ ಉಷಾ ಭಂಡಾರಿ.

ಈ ಬಗ್ಗೆ ಮಾತನಾಡುವ ಕೃಷ್ಣಾ, “ನಮ್ಮ ಫ್ಯಾಮಿಲಿಯಲ್ಲಿ ಸಾಕಷ್ಟು ಕಲಾವಿದರಿದ್ದರೂ, ಬೇರೆಯವರಿಂದ ಕಲಿಯುವುದು ಸಾಕಷ್ಟಿರುತ್ತದೆ ಎನ್ನುವ ಕಾರಣಕ್ಕೆ ಉಷಾ ಭಂಡಾರಿ ಅವರ ಬಳಿ ನಟನೆ ತರಬೇತಿ ಪಡೆದುಕೊಂಡೆ. ನಟನೆಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಅವರಿಂದ ಕಲಿತುಕೊಂಡೆ. ಇದೇ ವೇಳೆ ಉಷಾ ಭಂಡಾರಿ ಅವರ ಮೂಲಕ “ಚಾಲೀಪೋಲಿಲು’ ತುಳು ಚಿತ್ರವನ್ನು ನಿರ್ದೇಶಿಸಿದ್ದ ನಿರ್ದೇಶಕ ವೀರೇಂದ್ರ ಶೆಟ್ಟಿ ಅವರ ಎರಡನೇ ಚಿತ್ರ “ಸವರ್ಣದೀರ್ಘ‌ಸಂಧಿ’ಯಲ್ಲಿ ಅಭಿನಯಿಸುವ ಆಫ‌ರ್‌ ಬಂತು.

Advertisement

ಬಳಿಕ ಆಡಿಷನ್‌ ಕೂಡ ಆಗಿ ಚಿತ್ರಕ್ಕೆ ನಾಯಕಿಯಾಗಿ ಸೆಲೆಕ್ಟ್ ಆದೆ’ ಎನ್ನುತ್ತಾರೆ. “ಸವರ್ಣದೀರ್ಘ‌ಸಂಧಿ’ ಚಿತ್ರವನ್ನು ಆಯ್ಕೆ ಮಾಡಿಕೊಂಡಿರುವುದರ ಬಗ್ಗೆ ಮಾತನಾಡುವ ಕೃಷ್ಣಾ, “ಮೊದಲು ಚಿತ್ರಕ್ಕೆ ಆಡಿಷನ್‌ ಕೊಡುವಾಗ, ನನಗೆ ಸ್ಕ್ರಿಪ್ಟ್ ಬಗ್ಗೆ ಅಷ್ಟೊಂದು ಐಡಿಯಾ ಇಲ್ಲದಿದ್ದರಿಂದ ನನ್ನ ತಂದೆಯನ್ನು ಜೊತೆಯಲ್ಲೇ ಕರೆದುಕೊಂಡು ಹೋಗಿದ್ದೆ. ಸ್ಕ್ರಿಪ್ಟ್ ನೋಡಿದ ನನ್ನ ತಂದೆ ಖುಷಿಯಿಂದ, ಚಿತ್ರದ ಸಬ್ಜೆಕ್ಟ್ ಮತ್ತು ಪಾತ್ರ ಎರಡೂ ಚೆನ್ನಾಗಿದೆ.

ಈ ಸಿನಿಮಾ ನೀನೆ ಮಾಡಬೇಕು ಅಂತ ಹೇಳಿದ್ರು. “ಸವರ್ಣದೀರ್ಘ‌ಸಂಧಿ’ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಅಮೃತವರ್ಷಿಣಿ ಅಂತ. ಪಾಪ್ಯುಲರ್‌ ಮ್ಯೂಸಿಕ್‌ ಡೈರೆಕ್ಟರ್‌ ಒಬ್ಬರ ಮಗಳಾದ ನಾನು, ಇಂದಿನ ಪಕ್ಕಾ ಬೆಂಗಳೂರು ಹುಡ್ಗಿರ ಥರಾನೇ ಇರುತ್ತೇನೆ. ಜೊತೆಗೆ ಕ್ಲಾಸಿಕಲ್‌ ಸಿಂಗರ್‌ ಕೂಡ ಆಗಿರುತ್ತೇನೆ. ಇನ್ನೊಂದು ವಿಶೇಷ ಅಂದ್ರೆ, ನನ್ನ ತಂದೆ ರವಿಭಟ್‌ ಅವರೇ ಚಿತ್ರದಲ್ಲೂ ಕೂಡ ನನ್ನ ತಂದೆಯ ಪಾತ್ರವನ್ನೇ ಮಾಡಿದ್ದಾರೆ’ ಎಂದು ತಮ್ಮ ಪಾತ್ರದ ವಿವರಣೆ ಕೊಡುತ್ತಾರೆ.

ಅಂದಹಾಗೆ, ಕೃಷ್ಣ ಅವರು ಹೇಳುವಂತೆ “ಸವರ್ಣದೀರ್ಘ‌ಸಂಧಿ’ ಒಂದು ರೌಡಿಸಂ ಗ್ಯಾಂಗ್‌ಸ್ಟರ್‌ ಸಬ್ಜೆಕ್ಟ್ ಚಿತ್ರವಂತೆ. ಹಾಗಂತ ಇಡೀ ಸಿನಿಮಾದಲ್ಲಿ ಎಲ್ಲೂ ರಕ್ತಪಾತ, ಹೊಡೆದಾಟ ಅಂತಿಲ್ಲ. ಇಡೀ ಸಿನಿಮಾ ಕಾಮಿಡಿ ಆಗಿಯೇ ನಡೆಯುತ್ತದೆ. ನಿರ್ದೇಶಕ ವೀರೇಂದ್ರ ಶೆಟ್ಟಿ ಅವರೇ ಚಿತ್ರದಲ್ಲಿ ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಪದ್ಮಜಾ ರಾವ್‌, ಅವಿನಾಶ್‌ ರೈ, ವಿಕ್ಕಿ, ಕೃಷ್ಣಾ ನಾಡಿಗ್‌, ರವಿ ಮಂಡ್ಯ, ದತ್ತಾತ್ರೆಯ ಕುರಹಟ್ಟಿ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರದ ಹಾಡುಗಳಿಗೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದಾರೆ. ಆನೇಕಲ್‌, ಬೆಂಗಳೂರು, ಮೂಡಿಗೆರೆ ಸುತ್ತಮುತ್ತ “ಸವರ್ಣದೀರ್ಘ‌ಸಂಧಿ’ ಚಿತ್ರದ ಶೂಟಿಂಗ್‌ ನಡೆಸಲಾಗಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಮುಂದಿನ ತಿಂಗಳ ಅಂತ್ಯದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಒಟ್ಟಾರೆ “ಸವರ್ಣದೀರ್ಘ‌ಸಂಧಿ’ಯ ಮೂಲಕ ಪ್ರೇಕ್ಷಕರ ಮುಂದೆ ತಯಾರಾಗುತ್ತಿರುವ ಕೃಷ್ಣಾ ತನ್ನ ಅಭಿನಯದ ಮೂಲಕ ಎಷ್ಟರ ಮಟ್ಟಿಗೆ ಜನಮನ ಗೆಲ್ಲಲಿದ್ದಾರೆ ಅನ್ನೋದು ಶೀಘ್ರದಲ್ಲಿಯೇ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next