Advertisement

ಉದ್ಯಮಿಗಳಿಗೆ ಮುಕ್ತ ಸ್ವಾತಂತ್ರ್ಯ ಅಗತ್ಯ

01:05 AM Jul 02, 2019 | Lakshmi GovindaRaj |

ಬೆಂಗಳೂರು: ಉದ್ಯಮಿಗಳಿಗೆ ಮುಕ್ತ ಸ್ವಾತಂತ್ರ್ಯ, ತೆರಿಗೆ ಸಂಗ್ರಹ ವಿಧಾನ ಇನ್ನಷ್ಟು ಸರಳ ಹಾಗೂ ಸಂಗ್ರಹಿಸಿದ ತೆರಿಗೆಯನ್ನು ದಕ್ಷತೆಯಿಂದ ಬಳಕೆಯಾಗುವಂತೆ ನೋಡಿಕೊಳ್ಳುವ ಸವಾಲುಗಳನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸಬೇಕು ಎಂದು ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ಹೇಳಿದರು.

Advertisement

ಜಿಎಸ್‌ಟಿ ಜಾರಿಯಾಗಿ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೇಂದ್ರೀಯ ತೆರಿಗೆ (ಜಿಎಸ್‌ಟಿ) ಪ್ರಧಾನ ಮುಖ್ಯ ಆಯುಕ್ತರ ಕಚೇರಿಯು ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಉದ್ಯಮಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ಆದರೆ ರಾಜ್ಯ ಸರ್ಕಾರಗಳು ಹಲವು ಅನುಮತಿ ನೀಡಿಕೆ ವಿಚಾರದಲ್ಲಿ ತಮ್ಮ ಕಿರುಕುಳ ಮುಂದುವರಿಸಿದ್ದು, ಇದನ್ನು ನಿವಾರಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಈ ಹಿಂದೆ ಅಂದರೆ 1973ರಲ್ಲೇ ಬ್ರಿಟನ್ನಿನಲ್ಲಿ ವ್ಯಾಟ್‌ ತೆರಿಗೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿತ್ತು. ದೇಶದಲ್ಲಿ 43 ವರ್ಷಗಳ ನಂತರ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದಿದ್ದು, ಅದರ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರ ತನ್ನ ಬದ್ಧತೆ ತೋರಿಸಿದೆ. ರಾಜ್ಯ ಸರ್ಕಾರಗಳು ಇದಕ್ಕೆ ಸಹಕಾರ ನೀಡಿವೆ. 300 ವರ್ಷಗಳಿಂದ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಸಿಗದ ಗೌರವ ಈಗ ದೊರಕಿದೆ.

ಇದೇ ಅವಕಾಶ ಬಳಸಿಕೊಂಡು ದೇಶದ ಬಡತನವನ್ನು ನಿವಾರಿಸುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಯಬೇಕಿದೆ. ಇದಕ್ಕೆ ಎಲ್ಲರೂ ಶಕ್ತಿ ಮೀರಿ ಶ್ರಮಿಸಬೇಕು. ವೈಯಕ್ತಿಕ ಸುಖವನ್ನು ಬದಿಗೊತ್ತಿ, ದೇಶದ ಅಭಿವೃದ್ಧಿ ದೃಷ್ಟಿಯಿಂದ ದುಡಿಯುವ ಮನೋಭಾವನೆ ಮೂಡಬೇಕು ಎಂದು ಅಭಿಪ್ರಾಯಪಟ್ಟರು.

ಸೆಲ್ಕೊ ಕಂಪೆನಿ ಸಹ ಸ್ಥಾಪಕ ಹರೀಶ್‌ ಹಂದೆ, ಗ್ರಾಮೀಣ ಭಾರತವು ಉದ್ಯಮವನ್ನು ಮುನ್ನಡೆಸುವ ಹಂತಕ್ಕೆ ಬರಬೇಕು ಹಾಗೂ ಗ್ರಾಮೀಣ ಕೌಶಲ್ಯಕ್ಕೆ ಪ್ರೋತ್ಸಾಹ ಸಿಗಬೇಕು. ಆಫ್ರಿಕಾ, ಲ್ಯಾಟಿನ್‌ ಅಮೆರಿಕ ಸೇರಿದಂತೆ ಹಲವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮುಂದೆ ಭಾರತವೇ ದೊಡ್ಡ ಮಾರುಕಟ್ಟೆ ಒದಗಿಸಲು ಪೂರಕವಾದ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.

Advertisement

ಕೇಂದ್ರ ತೆರಿಗೆ ಇಲಾಖೆ ಬೆಂಗಳೂರು ವಲಯದ ಪ್ರಧಾನ ಮುಖ್ಯ ಆಯುಕ್ತ ಡಿ.ಪಿ.ನಾಗೇಂದ್ರ ಕುಮಾರ್‌, ಮುಂದಿನ ಅಕ್ಟೋಬರ್‌ 1ರಿಂದ ಎರಡನೇ ಹಂತದ ಜಿಎಸ್‌ಟಿ ಜಾರಿಗೆ ಬರಲಿದ್ದು, ಬಳಿಕ ಜಿಎಸ್‌ಟಿ ಇನ್ನಷ್ಟು ಸರಳವಾಗಿರಲಿದೆ ಎಂದು ತಿಳಿಸಿದರು.

ಆದಾಯ ತೆರಿಗೆ ಇಲಾಖೆ (ಕರ್ನಾಟಕ ಮತ್ತು ಗೋವಾ ವಲಯ) ಪ್ರಧಾನ ಮುಖ್ಯ ಆಯುಕ್ತ ಬಿ.ಆರ್‌.ಬಾಲಕೃಷ್ಣನ್‌, ಕೇಂದ್ರೀಯ ತೆರಿಗೆ ಬೆಂಗಳೂರು ವಲಯದ ಮುಖ್ಯ ಆಯುಕ್ತ ಎ.ಕೆ.ಜ್ಯೋತಿಷಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next