Advertisement

ಸಿಎಫ್ಟಿಆರ್‌ಐನಲ್ಲಿ ಉದ್ಯಮಿಗಳ ಸಮಾವೇಶ

09:45 PM Jun 11, 2019 | Team Udayavani |

ಮೈಸೂರು: ಆಹಾರೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರತರಾಗಿರುವ ಉದ್ಯಮಗಳು ಹಾಗೂ ಸಂಸ್ಥೆಗಳ ಜೊತೆಗೂಡಿ ತಾನು ಮುಂದೆ ಕೈಗೊಳ್ಳಬೇಕಾದ ಸಂಶೋಧನೆಗಳ ಕುರಿತು ಚಿಂತನ ನಡೆಸಲು ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯವು (ಸಿಎಫ್ಟಿಆರ್‌ಐ) ಇದೇ ಮೊದಲ ಬಾರಿಗೆ ಒಂದು ದಿನದ ಉದ್ಯಮಿಗಳ ಸಮಾವೇಶ ಆಯೋಜಿಸಿತ್ತು.

Advertisement

ದೆಹಲಿಯ ವೈಜ್ಞಾನಿಕ ಹಾಗೂ ಔದ್ಯಮಿಕ ಸಂಶೋಧನಾ ಮಂಡಳಿಯ ಮಹಾ ನಿರ್ದೇಶಕ ಪ್ರೊ. ಶೇಖರ ಮಾಂಡೆ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು. ಸಿಎಸ್‌ಐಆರ್‌-ಈಶಾನ್ಯ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಶೋಧನಾಲಯದ ನಿರ್ದೇಶಕ ಡಾ.ಜಿ. ನರಹರಿ ಶಾಸ್ತ್ರಿಯವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

ಸಮಾವೇಶದಲ್ಲಿ 30 ಆಹಾರ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಉದ್ಯಮಕ್ಕೆ ನೆರವಾಗಬಲ್ಲ ಸಂಶೋಧನೆಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಮಂಡಿಸಿದರು. ಸಮಾವೇಶದಲ್ಲಿ ಬೃಹತ್‌ ಉದ್ಯಮಗಳಾದ ನೆಸ್ಲೆ ಇಂಡಿಯಾ, ಬ್ಯೂಲರ್‌ ಸಂಸ್ಥೆ, ಮ್ಯಾರಿಕೋ, ಟಾಟಾ ಗ್ಲೋಬಲ್‌ ಬೀವರೇಜಸ್‌ ಅಲ್ಲದೆ ಹೊಸ ಉದ್ಯಮಗಳಾದ ನ್ಯೂಟ್ರಿಪ್ಲಾನೆಟ್, ಸರೇಧ, ಎಕೊrವೇಟ್‌ ಹಾಗೂ ಇತರೆ ಪ್ರತಿನಿಧಿಗಳಿದ್ದರು. ತೈಲ, ಮಾಂಸ ಮತ್ತು ಕುಕ್ಕುಟ ಉದ್ಯಮ, ಪ್ರೋಟಿನ್‌ ಆಹಾರಗಳು, ಮಸಾಲೆ ಹಾಗೂ ಪೇಯಗಳು, ಪ್ಯಾಕೇಜಿಂಗ್‌ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿನ ಉದ್ಯಮಗಳವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಚಿಂತನ ಮಂಥನ ಉದ್ಘಾಟಿಸಿದ ಸಿಎಫ್ಟಿಆರ್‌ಐ ನಿರ್ದೇಶಕ ಡಾ.ಕೆಎಸ್‌ಎಂಎಸ್‌ ರಾಘವರಾವ್‌, ಸಂಸ್ಥೆಯ ಸಾಮರ್ಥ್ಯ, ಸಂಸ್ಥೆಯ ಮುಂದಿರುವ ಅವಕಾಶಗಳು, ಸಂಸ್ಥೆಯ ದೋಷಗಳನ್ನು ಕೈಗಾರಿಕಾ ಪ್ರತಿನಿಧಿಗಳ ಮುಂದೆ ವಿಶ್ಲೇಷಿಸಿದರು. ಹೊಸದೊಂದು ಆಹಾರ ಕೈಗಾರಿಕೋದ್ಯಮವನ್ನು ಕಟ್ಟಿ ಬೆಳೆಸುವ ದಿಕ್ಕಿನಲ್ಲಿ ಸಿಎಸ್‌ಐಆರ್‌ ಸಿಎಫ್ಟಿಆರ್‌ಐಯನ್ನು ಕೈಗಾರಿಕೆಯ ಜ್ಞಾನ ಸಹಯೋಗಿಯನ್ನಾಗಿ ಗುರುತಿಸಬೇಕೆಂದು ಉದ್ಯಮಿಗಳನ್ನು ವಿನಂತಿಸಿದರು.

ಸಮಾವೇಶದಲ್ಲಿ ಆಹಾರ ಸಂಸ್ಕರಣೆ ಮತ್ತು ಇಂಜಿನಿಯರಿಂಗ್‌, ಜೈವಿಕ ತಂತ್ರಜ್ಞಾನ, ಆಹಾರೌಷಧಗಳು ಮತ್ತು ಸ್ವಾಸ್ಥ್ಯ, ಸಂಸ್ಕರಿತ ಆಹಾರಗಳು ಹಾಗೂ ಪೇಯಗಳು, ಆಹಾರ ಸರಬರಾಜು ಮತ್ತು ಪ್ಯಾಕೇಜಿಂಗ್‌, ನವೋದ್ಯಮ ಮತ್ತು ಉದ್ಯಮಶೀಲತೆ ಎಂಬ ಐದು ಪ್ರಮುಖ ವಿಷಯಗಳನ್ನು ಕುರಿತು ಚಿಂತಿಸಲಾಯಿತು. ಪ್ರತಿ ಕ್ಷೇತ್ರದ ಬೆಳೆವಣಿಗೆಗೆ ಸಿಎಫ್ಟಿಆರ್‌ಐ ನೀಡಬಹುದಾದ ಜ್ಞಾನ ಹಾಗೂ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಯಿತಲ್ಲದೆ, ಉದ್ಯಮಗಳು ಹಾಗೂ ಸಂಸ್ಥೆಗಳು ಜೊತೆಯಾಗಿ ವ್ಯವಹರಿಸಬಹುದಾದ ವಿಷಯಗಳನ್ನು ಪಟ್ಟಿ ಮಾಡಲಾಯಿತು.

Advertisement

ಸಮಾವೇಶದ ಅಂಗವಾಗಿ ನಡೆದ ವಸ್ತು ಪ್ರದರ್ಶನದಲ್ಲಿ ಈ ಐದು ಕ್ಷೇತ್ರಗಳಲ್ಲಿ ಸಿಎಫ್ಟಿಆರ್‌ಐ ಸಿದ್ಧಪಡಿಸಿರುವ ಹೊಸ ಉತ್ಪನ್ನಗಳು ಹಾಗೂ ಯಂತ್ರೋಪಕರಣಗಳನ್ನು ಪ್ರದರ್ಶಿಸಲಾಯಿತು. ಇದಲ್ಲದೆ ವಿವಿಧ ಕೈಗಾರಿಕೆಗಳ ಜೊತೆಗೆ ಸಿಎಸ್‌ಐಆರ್‌-ಸಿಎಫ್ಟಿಆರ್‌ಐ ಮಾಡಿಕೊಂಡ ಹತ್ತು ಒಡಂಬಡಿಕೆಗಳಿಗೆ ಸಹಿ ಹಾಕಿ, ವಿನಿಮಯ ಮಾಡಿಕೊಳ್ಳಲಾಯಿತು.

ಕೈಗಾರಿಕೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆಯ ಜೊತೆಗೆ ಯಾವ್ಯಾವ ಕ್ಷೇತ್ರದಲ್ಲಿ ಸಹಯೋಗ, ಸಹಕಾರ ಹಾಗೂ ಒಡನಾಟ ಮುಂದುವರಿಯಬೇಕೆನ್ನುವ ಬಗ್ಗೆ ಒಂದು ವರದಿಯ ಕರಡನ್ನು ಸಿದ್ಧಪಡಿಸುವುದರೊಂದಿಗೆ ಸಮಾವೇಶವು ಸಮಾರೋಪಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next