Advertisement

ವೃತ್ತಿಯಲ್ಲಿ ಉದ್ಯಮಿ, ಪ್ರವೃತ್ತಿಯಲ್ಲಿ ಸಾಹಿತಿ

06:39 AM Jul 01, 2019 | Lakshmi GovindaRaj |

ಬೆಂಗಳೂರು: ಬಹುಮುಖ ವ್ಯಕ್ತಿತ್ವದ ಸಾಹಿತಿ ಡಿ.ಕೆ.ಚೌಟ, ಸಮಾಜಮುಖೀ ಚಿಂತನೆಗಳನ್ನು ಹೊಂದಿದ್ದರು ಎಂದು ನಿವೃತ್ತ ಐಎಎಸ್‌ ಅಧಿಕಾರಿ ಡಾ.ಸಿ. ಸೋಮಶೇಖರ್‌ ತಿಳಿಸಿದರು. ನಗರದ ಬಂಟರ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ “ಚೌಟ ಅವರಿಗೆ ಭಾವನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೃತ್ತಿಯಲ್ಲಿ ಚೌಟ ವಾಣಿಜ್ಯೋದ್ಯಮಿ ಆಗಿದ್ದರೆ, ಪ್ರವೃತ್ತಿಯಲ್ಲಿ ಒಬ್ಬ ಸಾಹಿತಿ ಆಗಿದ್ದರು.

Advertisement

ರಂಘ ಸಂಘಟಕರಾಗಿದ್ದರು. ವರ್ಣರಂಜಿತ ಬದುಕು ಪೂರೈಸಿದ ಅವರದ್ದು ಸಾರ್ವಜನಿಕ ವ್ಯಕ್ತಿತ್ವ. ನಮಗಾಗಿ ದುಡಿದವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಅಂತರ್ಮುಖೀಯೂ ಮತ್ತು ಬಹುರ್ಮುಖೀಯೂ ಆಗಿದ್ದ ಸಾಹಿತಿ ಡಿ.ಕೆ. ಚೌಟ, ಸಮಾಜಮುಖೀ ಚಿಂತನೆಗಳನ್ನು ಹೊಂದಿದ್ದ ಅಪರೂಪದ ವ್ಯಕ್ತಿ. ಚಿತ್ರಕಲೆ, ಯಕ್ಷಗಾನ, ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರ. ಬಟ್ಟೆಯನ್ನು ಕಳಚುವಂತೆ ಆತ್ಮವು ಆಗಾಗ ಶರೀರವನ್ನು ಬದಲಿಸುತ್ತದೆ.

ಚೌಟ ಅವರ ಅಗಲಿಕೆ ನಮಗೆ ಸಂಕಟ ಉಂಟುಮಾಡಿದೆ ಎಂದ ಅವರು, ಚೌಟ ಮನೆಗೆ ನಮ್ಮ ಮನೆ ಹೊಂದಿಕೊಂಡಿತ್ತು. ಅವರ ಮನೆಯ ಊಟ ನಮ್ಮ ಮನೆಗೆ ಬರುತ್ತಿತ್ತು. ಯಾರಿಗಾದರೂ ಮನೆಯ ವಿಳಾಸ ಹೇಳುವಾಗ ನಾವಿಬ್ಬರೂ ಪರಸ್ಪರರ ಮನೆಯ “ಲೊಕೇಷನ್‌’ ಹೇಳುತ್ತಿದ್ದೆವು ಎಂದು ಮೆಲುಕು ಹಾಕಿದರು. ಬಂಟರ ಸಂಘದ ಗೌರವ ಕಾರ್ಯದರ್ಶಿ ಮಧುಕರ ಎಂ. ಶೆಟ್ಟಿ ಮಾತನಾಡಿ, ಎಲ್ಲ ರಂಗಗಳಲ್ಲೂ ಚೌಟ ಸಂಭ್ರಮದ ಛಾಯೆ ಮೂಡಿಸಿದರು.

ಆದರೆ, ನಮ್ಮಲ್ಲಿ ಸೂತಕದ ಛಾಯೆ ಮೂಡಿಸಿದ್ದಾರೆ. ಸಂಕಟವಾಗಿದ್ದರೂ ಅದನ್ನು ಹೇಳಿಕೊಳ್ಳುವಂತಿಲ್ಲ; ಮನಸ್ಸಿನಲ್ಲಿಯೂ ಇಟ್ಟುಕೊಳ್ಳುವಂತಿಲ್ಲ ಎಂದು ಶೋಕ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಮಾತನಾಡಿ, ಚೌಟ ಅವರ ಬದುಕನ್ನು ಯುವಕರಿಗೆ ಪರಿಚಯಿಸುವ ಪ್ರಯತ್ನ ಈ ಭಾವ ನಮನ. ನನಗೆ ಅವರೊಬ್ಬ ಸ್ನೇಹಿತ, ತತ್ವಜ್ಞಾನಿ, ಮಾರ್ಗದರ್ಶಕರಾಗಿದ್ದರು. ಸಮಾಜಕ್ಕೆ ಅವರ ಕೊಡುಗೆ ಅಪಾರ. ಬಂಟರ ಸಮಾಜಕ್ಕೆ ಅವರಿಂದ ಹೆಸರು ಬಂದಿದೆ ಎಂದು ಸ್ಮರಿಸಿದರು.

ಕಲಾ ನಿರ್ದೇಶಕ ಶಶಿಧರ್‌ ಅಡಪ ಮಾತನಾಡಿ, ಒಬ್ಬ ವ್ಯಕ್ತಿ ಜತೆ ಭಾವನಾತ್ಮಕ ಸಂಬಂಧ ಹೊಂದಿದ್ದರೆ, ಅವರನ್ನು ವಿಶ್ಲೇಷಣೆ ಹಾಗೂ ತೂಕ ಹಾಕುವದಾಗಲಿ ಬಹಳ ಕಷ್ಟದ ಮಾತು. ನಮಗಾಗಿ ದುಡಿದವರಿಗೆ ನಾವು ಕೃತಜ್ಞತೆಯನ್ನು ಸಲ್ಲಿಸದೆ ಇರಬಾರದು ಎನ್ನುವುದನ್ನು ಅವರಿಂದ ಕಲಿತಿದ್ದೇನೆ. ಕೆಲವರು ನನ್ನಲಿದೆ ಎಂದು ದಾನ ಮಾಡುತ್ತಾರೆ, ಮತ್ತೆ ಕೆಲವರು ಇನ್ನೊಬ್ಬರಿಗೆ ಅವಶ್ಯಕತೆಯಿದೆ ಎಂದು ದಾನ ಮಾಡುತ್ತಾರೆ. ಇದರಲ್ಲಿ ಚೌಟ ಅವರು ಎರಡನೇ ಸಾಲಿಗೆ ಸೇರುತ್ತಾರೆ ಎಂದು ಹೇಳಿದರು.

Advertisement

ರಂಗ ಕಲಾವಿದ ಕೃಷ್ಣಮೂರ್ತಿ ಕವತ್ತಾರ್‌, ಶಿಕ್ಷಣ ತಜ್ಞ ಪ್ರೊ.ಕೆ.ಇ. ರಾಧಾಕೃಷ್ಣ, ಪದಾಧಿಕಾರಿಗಳಾದ ಎ.ಎನ್‌. ಶೆಟ್ಟಿ, ತೊ. ನಂಜುಂಡಸ್ವಾಮಿ, ಹರೀಶ್‌ ಕುಮಾರ್‌ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next