ಆ ಹುಡುಗನ ಹೆಸರು ಹರ್ಷ. ಹೆಸರಿನಲ್ಲಿ ಹರ್ಷ ಅಂತಿದ್ದರೂ, ಅವನ ಪಾಲಿಗೆ ನಿಜವಾದ ಹರ್ಷ, ಖುಷಿ ಅನ್ನೋದು ಮರೀಚಿಕೆಯಂತೆ. ಇರೋದಕ್ಕೆ ದೊಡ್ಡ ಮನೆ, ಓದೋದಕ್ಕೆ ಒಳ್ಳೆಯ ಕಾಲೇಜು, ಪ್ರೀತಿಯಿಂದ ನೋಡಿಕೊಳ್ಳುವ ಅಪ್ಪ-ಅಮ್ಮ, ಕಷ್ಟ-ಸುಖ ಹಂಚಿಕೊಳ್ಳಲು ಒಂದಷ್ಟು ಸ್ನೇಹಿತರು… ಹೀಗೆ ಎಲ್ಲ ಇದ್ದರೂ, ಈ ಹರ್ಷ ಇದ್ದಕ್ಕಿದ್ದಂತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗುತ್ತಾನೆ. ಹಾಗಾದರೆ, ಹರ್ಷನಿಗೆ ಖುಷಿಯಾಗಿರಲು ಸಾಧ್ಯವಾಗದೆ ಇರುವುದಾದರೂ ಯಾಕೆ?
ಅಂದ್ರೆ ಅದಕ್ಕೆ ಕಾರಣ ಹುಡುಗಿಯರ ಮೇಲಿನ ಮೋಹ, ಹಣದ ಮೇಲಿನ ವ್ಯಾಮೋಹ! ಇದು ಇಂದಿನ ಅನೇಕ ಕಾಲೇಜು ಹುಡುಗರ ಕಥೆ-ವ್ಯಥೆ. ಇದೇ ಎಳೆಯನ್ನು ಇಟ್ಟುಕೊಂಡು ಈ ವಾರ ತೆರೆಗೆ ಬಂದಿರುವ ಚಿತ್ರ “ಡೆಮೊ ಪೀಸ್’ ಚಿತ್ರದ ಆರಂಭದಲ್ಲಿಯೇ ಹೀರೋ ಹರ್ಷ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ಇಂಟರ್‌ವಲ್ ಹೊತ್ತಿಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಹೀರೋ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ದೃಢೀಕರಿಸುತ್ತಾರೆ.
ಇನ್ನೂ ಒಂದಷ್ಟು ಹೊತ್ತು ಬಾಳಿ-ಬದುಕಿ ನೋಡುಗರಿಗೆ ಮನರಂಜಿಸಬೇಕಾದ ಹೀರೋ, ಹೀಗೆ ಸಿನಿಮಾವನ್ನ ಅರ್ಧಕ್ಕೆ ಬಿಟ್ಟು ಹೋದರೆ, ಮುಂದೆ ಸಿನಿಮಾದಲ್ಲಿ ನೋಡುವುದೇನಿದೆ ಎಂದು ಪ್ರೇಕ್ಷಕರು ಬ್ರೇಕ್ ತೆಗೆದುಕೊಂಡು ವಾಪಾಸ್ ಬಂದು ಕೂತರೆ, ಕಥೆ ಮತ್ತೂಂದು ಟ್ವಿಸ್ಟ್ ತೆಗೆದುಕೊಂಡು ಮತ್ತೆಲ್ಲೋ ಕರೆದುಕೊಂಡು ಹೋಗುತ್ತದೆ. ಇದೆಲ್ಲವನ್ನು ಕಣ್ತುಂಬಿಕೊಳ್ಳಬೇಕೆಂದರೆ, “ಡೆಮೊ ಪೀಸ್’ ಚಿತ್ರ ನೋಡಲು ಅಡ್ಡಿಯಿಲ್ಲ. “ಡೆಮೊ ಪೀಸ್’ ಚಿತ್ರದ ಕಥೆಯಲ್ಲಿ ಹೊಸದೇನು ನಿರೀಕ್ಷಿಸುವಂತಿಲ್ಲ.
ಹಾಗಂತ ಚಿತ್ರದಲ್ಲಿ ಬೇರೇನೂ ಇಲ್ಲ ಅಂತಲೂ ಹೇಳುವಂತಿಲ್ಲ. ನಮ್ಮ ನಡುವೆ ನಡೆಯಬಹುದಾದ ಕಂಡು-ಕೇಳಿದ ಕಥೆಯ ಎಳೆಯನ್ನು ಇಟ್ಟುಕೊಂಡು, ಅದಕ್ಕೊಂದಷ್ಟು ಅನಿರೀಕ್ಷಿತ, ಅಚ್ಚರಿಯ ತಿರುವುಗಳನ್ನು ಕೊಟ್ಟು ಕುತೂಹಲ ಮೂಡಿಸುತ್ತ ಚಿತ್ರದ ನಿರೂಪಣೆ ಕೊನೆವರೆಗೂ ಕರೆದುಕೊಂಡು ಹೋಗುತ್ತದೆ. ಮಾಮೂಲಿ ಕಥೆಯನ್ನೇ ಎಲ್ಲೂ ಬೋರ್ ಆಗದಂತೆ ತೆಗೆದುಕೊಂಡು ಹೋಗುವುದರಲ್ಲಿ ನಿರ್ದೇಶಕ ವಿವೇಕ್ ಜಾಣ್ಮೆ ಕಾಣುತ್ತದೆ.
ಚಿತ್ರದ ಮೊದಲರ್ಧ ಕೊಂಚ ಮಂದಗತಿಯಲ್ಲಿ, ಕಾಮಿಡಿಯಾಗಿ ಸಾಗುವ ಚಿತ್ರದ ಕಥೆ, ದ್ವಿತೀಯರ್ಧದಲ್ಲಿ ಒಂದಷ್ಟು ಟ್ವಿಸ್ಟ್ ತೆಗೆದುಕೊಂಡು ಅಷ್ಟೇ ಸೀರಿಯಸ್ ಆಗಿ ಸಾಗುತ್ತದೆ. ಅಲ್ಲಲ್ಲಿ ಬರುವ ಸಾಂಗ್ಸ್, ಫೈಟ್ಸ್ ಮಾಸ್ ಆಡಿಯನ್ಸ್‌ನ ಗಮನದಲ್ಲಿಟ್ಟುಕೊಂಡು ಮಾಡಿದಂತಿದೆ. ಚಿತ್ರದ ಛಾಯಾಗ್ರಹಣ, ಲೈಟ್ಸ್, ಲೊಕೇಶನ್ಸ್ ಕಡೆಗೆ ಇನ್ನಷ್ಟು ಗಮನ ಕೊಡಬಹುದಿತ್ತು. ಉಳಿದಂತೆ ಕಲರಿಂಗ್, ಕಾಸ್ಟೂಮ್ಸ್, ಸಂಕಲನ ಕಾರ್ಯ, ಹಿನ್ನೆಲೆ ಸಂಗೀತ ಚೆನ್ನಾಗಿದೆ. ಇನ್ನು ಚಿತ್ರದ ನಾಯಕ ಭರತ್ ಮೊದಲ ಚಿತ್ರದಲ್ಲೇ ಗಮನ ಸೆಳೆಯುತ್ತಾರೆ.
ಡೈಲಾಗ್ ಡೆಲಿವರಿ, ಡ್ಯಾನ್ಸ್, ಆ್ಯಕ್ಷನ್ಸ್ ಎಲ್ಲದರಲ್ಲೂ ಅಚ್ಚುಕಟ್ಟಾದ ಅಭಿನಯ ನೀಡಿದ್ದಾರೆ. ಹೋಮ್ಲಿಲುಕ್‌ನಲ್ಲಿ ಕಾಣುವ ನಾಯಕಿ ಸೋನಾಲ್ ಅವರದ್ದು ಕೂಡ ಅಂದಕ್ಕೊಪ್ಪುವಂತೆ ಅಭಿನಯವಿದೆ. ಪೋಷಕರಾಗಿ ಸ್ಪರ್ಶರೇಖಾ, ಶ್ರೀಕಾಂತ್ ಹೆಬ್ಳೀಕರ್ ಅಭಿನಯ ಗಮನ ಸೆಳೆಯುತ್ತದೆ. ಉಳಿದ ಕಲಾವಿದರದ್ದು ಪರವಾಗಿಲ್ಲ ಎನ್ನಬಹುದಾದ ಅಭಿನಯ. ಒಟ್ಟಾರೆ ತೀರಾ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ಥಿಯೇಟರ್‌ಗೆ ಹೋದರೆ, “ಡೆಮೊ ಪೀಸ್’ ಕೊಟ್ಟ ಕಾಸಿಗೆ ಮನರಂಜಿಸುವಲ್ಲಿ ಮೋಸ ಮಾಡಲಾರದು ಎನ್ನಲು ಅಡ್ಡಿಯಿಲ್ಲ.
ಚಿತ್ರ: ಡೆಮೊ ಪೀಸ್
ನಿರ್ದೇಶನ: ವಿವೇಕ್. ಎ
ನಿರ್ಮಾಣ: ಸ್ಪರ್ಶ ರೇಖಾ
ತಾರಾಗಣ: ಭರತ್, ಸೋನಾಲ್ ಮಾಂತೆರೋ, ಸ್ಪರ್ಶ ರೇಖಾ, ಶ್ರೀಕಾಂತ್ ಹೆಬ್ಳೀಕರ್, ರೂಪೇಶ್, ಚಂದ್ರಚೂಡ್, ರೋಹಿತ್ ಮತ್ತಿತರರು.
* ಜಿ.ಎಸ್ ಕಾರ್ತಿಕ ಸುಧನ್