Advertisement

ನೆಟ್ಟಣಿಗೆ : ಜಾಂಬ್ರಿ ಗುಹೆ ಪ್ರವೇಶಿಸುವ ಕಾಪಾಡರು ದಾಂಪತ್ಯಕ್ಕೆ

04:50 PM Mar 13, 2017 | Harsha Rao |

ಬದಿಯಡ್ಕ: ನೆಟ್ಟಣಿಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 12 ವರ್ಷಗಳಿಗೊಮ್ಮೆ ಜರಗುವ ಜಾಂಬ್ರಿ ಗುಹಾಪ್ರವೇಶದಲ್ಲಿ ಪಾಲ್ಗೊಳ್ಳುವ ಕಾಪಾಡರ ವಿವಾಹವನ್ನು ಮಾ. 12ರಂದು ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ನಡೆಸಲಾಯಿತು.
ಜಾಂಬ್ರಿ ಗುಹಾ ಪ್ರವೇಶ ಮಹೋತ್ಸವ ಎಪ್ರಿಲ್‌ 27ರಿಂದ ಮೇ 2ರ ವರೆಗೆ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಕಾಪಾಡರ ವಿವಾಹ ರ‌ವಿವಾರ ಜರಗಿತು.

Advertisement

ಗುಹಾಪ್ರವೇಶಿಸುವ ಕಾಪಾಡರು 48 ದಿನಗಳ ಕಾಲ ವ್ರತ ಆಚರಿಸಬೇಕಾಗುತ್ತದೆ. ವ್ರತಾಚರಣೆ ವೇಳೆ ಅವರು ಕ್ಷೇತ್ರದಲ್ಲಿ ಇದ್ದು, ವಿವಾಹ, ಮರಣಪೂರ್ವ ಉತ್ತರಕ್ರಿಯಾದಿಗಳನ್ನು ನಡೆಸಬೇಕೆಂಬ ನಿಬಂಧನೆಯಿದೆ. ಕ್ಷೇತ್ರದಲ್ಲಿ ನಡೆಸಿದ ಪ್ರಶ್ನೆ ಚಿಂತನೆಯಂತೆ ಈ ಬಾರಿ ಗುಹಾಪ್ರವೇಶಕ್ಕೆ ಪಾಣಾಜೆ ಬಳಿಯ ಮೊಟ್ಟೆಕಲ್ಲು ಎಂಬಲ್ಲಿನ ಆನಂದ ಅವರು ನೇಮಕಗೊಂಡಿದ್ದಾರೆ. ಇವರು ಅವಿವಾಹಿತರಾದುದರಿಂದ ಅವರ ವಿವಾಹ ಬದಿಯಡ್ಕ ಬಳಿಯ ಬಾರಡ್ಕ ನಿವಾಸಿ ಗೀತಾ ಅವರೊಂದಿಗೆ ಬೆಳಗ್ಗೆ ಶ್ರೀ ಕ್ಷೇತ್ರದ ಮೇಲುಸ್ತುವಾರಿಯಲ್ಲಿ ನಡೆಯಿತು.

ಇನ್ನು 15 ದಿನಗಳ ಬಳಿಕ ಅವರ ನಿಧನ ಪೂರ್ವ ಉತ್ತರಾದಿ ಕಾರ್ಯಗಳು ನಡೆಯಲಿರುವುವು. 48 ದಿನಗಳ ವ್ರತಾಚರಣೆ ಬಳಿಕ ನಡೆಯುವ ಜಾಂಬ್ರಿ ಗುಹಾ ಪ್ರವೇಶ ವೇಳೆ ಕಾಪಾಡರು ದೊಂದಿ ಹಿಡಿದು ಮುಂಚೂಣಿಯಲ್ಲಿರುವರು. ಶಿವನಾಮೋಚ್ಛಾರಣೆ ನಡೆಸುತ್ತಾ ದೇವಾಲಯದ ತಂತ್ರಿವರ್ಯರು ಹಾಗೂ ಸ್ಥಾನಿಕರು ಕಾಪಾಡರನ್ನು ಹಿಂಬಾಲಿಸುವರು.
ಗುಹೆ ಪ್ರವೇಶಿಸಿದವರನ್ನು ಮುಂದೆ ಹೆಸರೆತ್ತಿ ಕರೆಯದೆ ಕಾಪಾಡರೆಂದೇ ಕರೆಯಲ್ಪಡುವರು.

Advertisement

Udayavani is now on Telegram. Click here to join our channel and stay updated with the latest news.

Next