ದಾವಣಗೆರೆ: ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅನುಷ್ಠಾನದ ಸಂಬಂಧ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಎಚ್.ಕೆ. ಪಾಟೀಲ್ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದರು.
ಜಗಳೂರಲ್ಲಿ ಶೇ.198ರಷ್ಟು ಕೆಲಸವಾಗಿದೆ. ಹರಪನಹಳ್ಳಿಯಲ್ಲಿ ಸಹ ಚೆನ್ನಾಗಿ ಕೆಲಸ ಆಗಿದೆ. ಇನ್ನುಳಿದ ನಾಲ್ಕು ತಾಲೂಕಿನಲ್ಲಿ ಖಾತರಿ ಯೋಜನೆ ಅನುಷ್ಠಾನ ತೃಪ್ತಿಕರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿದಿನ ಮಾನವದಿನ ಸೃಷ್ಟಿಯಾಗಬೇಕು.
ಜನರು ಕೆಲಸ ಅರಸುತ್ತಾ ಬೇರೆ ಕಡೆ ಹೋಗುವಂತಾಗಬಾರದು. 21 ಅಂಶಗಳ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್. ಅಶ್ವತಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. ಚನ್ನಗಿರಿ ತಾಲೂಕಿನಲ್ಲಿ ಕೃಷಿ ಕೂಲಿ ಕಾರ್ಮಿಕರು ಬರುವುದೇ ಇಲ್ಲ ಎನ್ನುವ ವಾತಾವರಣ ಇದೆ.
ಕೇವಲ ಶೇ. 63.2 ರಷ್ಟು ಪ್ರಗತಿಯಾಗಿದೆ. ಗ್ರಾಮೀಣ ಭಾಗದಲ್ಲಿ ಆಟದ ಮೈದಾನ, ಕಣ, ದನ, ಕುರಿ ದೊಡ್ಡಿ, ಸ್ಮಶಾನ ಅಭಿವೃದ್ಧಿಯಂತಹ ಸಮುದಾಯ ಆಧಾರಿತ ಕೆಲಸ ಕೈಗೊಳ್ಳುವ ಮೂಲಕ ಜನರಿಗೆ ಉದ್ಯೋಗ ಒದಗಿಸಬೇಕು. ಖಾತರಿ ಯೋಜನೆಯ ಮಾರ್ಗಸೂಚಿಯಂತೆ ಅಗತ್ಯ ನೆರಳು, ಶುದ್ಧ ಕುಡಿಯುವ ನೀರು, 100ಕ್ಕಿಂತ ಹೆಚ್ಚು ಜನರು ಕೆಲಸ ಮಾಡುತ್ತಿದ್ದರೆ ಆರೋಗ್ಯ ತಪಾಸಣೆ, 10-15 ಮಕ್ಕಳಿದ್ದಲ್ಲಿ ಕಲಿಕಾ ವಾತಾವರಣ ನಿರ್ಮಾಣ ಮಾಡಬೇಕು.
ಅತಿ ಹೆಚ್ಚಿನ ಮಾನವ ದಿನ ಸೃಷ್ಟಿಸುವಂತಾಗಬೇಕು ಖಾತರಿ ಯೋಜನೆಯಡಿ ಏನೆಲ್ಲಾ ಮಾಡಬಹುದು. ಆದರೂ, ಯೋಜನೆಯನ್ನೇ ಸರಿಯಾಗಿ ಬಳಕೆ ಮಾಡದಿದ್ದರೆ ಹೇಗೆ ಎಂದು ಸಚಿವರು ಖಾರವಾಗಿ ಪ್ರಶ್ನಿಸಿದರು. ಜಿಲ್ಲೆಯಲ್ಲಿ 42.84 ಲಕ್ಷ ಮಾನವ ದಿನಗಳಲ್ಲಿ ಮಾರ್ಚ್ ಅಂತ್ಯಕ್ಕೆ 39.45 ಲಕ್ಷ ದಿನ ಸೃಜಿಸಲಾಗಿದೆ.
ಎಲ್ಲಾ ತಾಲೂಕಿನಲ್ಲಿ 7 ಸಾವಿರದಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಮಾರ್ಚ್‌ನಲ್ಲಿ ಕೂಲಿ ಹಣ ಬಿಡುಗಡೆಯಾಗದ ಕಾರಣ ಸಮಸ್ಯೆ ಉಂಟಾಯಿತು. ಚನ್ನಗಿರಿಯಲ್ಲಿ ಜನರು ಅಂತಹ ಆಸಕ್ತಿ ತೋರುತ್ತಿಲ್ಲ ಎಂದು ಸಿಇಒ ಎಸ್. ಅಶ್ವತಿ ಸಮಜಾಯಿಷಿ ನೀಡಿದರು. ಮಾ. 28ರ ವರೆಗೆ ಕೇಂದ್ರದಿಂದ ಹಣ ಬಂದಿರಲಿಲ್ಲ. ಹಾಗಾಗಿ ಕೂಲಿ ಪಾವತಿಗೆ ಅಡಚಣೆ ಉಂಟಾಗಿತ್ತು.
ಈಗ ಅನುದಾನ ಬಂದಿದೆ ಯಾವುದೇ ಸಮಸ್ಯೆ ಇಲ್ಲ ಎಂದು ಖಾತರಿ ಯೋಜನೆ ಆಯುಕ್ತ ಉಪೇಂದ್ರ ತ್ರಿಪಾಠಿ ಸಿಂಗ್ ತಿಳಿಸಿದರು. ಜಿಪಂ ಸದಸ್ಯರಾ ತೇಜಸ್ವಿ ಪಟೇಲ್, ಖಾತರಿ ಯೋಜನೆಯಡಿ ಭದ್ರಾ ನಾಲೆಯಲ್ಲಿ ಹೂಳು ತೆಗೆಸುವ, ವಿಕಲ ಚೇತನರಿಗೆ ತರಬೇತಿ, ಶೈಲಾ ಬಸವರಾಜ್, ಪೈಪ್‌ಲೈನ್ ಕಾಮಗಾರಿ ಅಳವಡಿಕೆ, ಸ್ಥಾಯಿ ಸಮಿತಿ ಅಧ್ಯಕ್ಷ ಪಿ. ಯೋಗೀಶ್, ಶಾಲಾ ಕಟ್ಟಡ ನಿರ್ಮಾಣಕ್ಕೆ ಅವಕಾಶದ ಬಗ್ಗೆ ಮನವಿ ಮಾಡಿದರು.