Advertisement

ಮತಪಟ್ಟಿಯಲ್ಲಿ ಹೆಸರು ಖಾತ್ರಿಪಡಿಸಿಕೊಳ್ಳಿ

07:26 AM Feb 16, 2019 | |

ತುಮಕೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ  18 ವರ್ಷ ತುಂಬಿದವರೆಲ್ಲರೂ ಮತಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕೆಂದು 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್‌.ಭರತ್‌ಕುಮಾರ್‌ ಹೇಳಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಪ್ಯಾಟ್‌ ಹಾಗೂ ಇವಿಎಂ ಪ್ರಾತ್ಯಕ್ಷಿಕೆ,  ಸಾರ್ವಜನಿಕರಿಗೆ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.

ಅರಿವು ಮೂಡಿಸಿ: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ .100 ರಷ್ಟು ಮತದಾನವಾಗಬೇಕು. ಅರ್ಹ ಮತದಾರರು ಮತಪಟ್ಟಿಗೆ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು. ಚುನಾವಣೆಯ ಬಗ್ಗೆ ತಪ್ಪು ಕಲ್ಪನೆ ಹೊಂದಿದವರಿಗೆ ಮೊದಲು ಜಾಗೃತಿ ಮೂಡಿಸಬೇಕು. ಮನೆ ಮನೆಗೆ ಭೇಟಿ ನೀಡಿ ವಿವಿಪ್ಯಾಟ್‌ ಮತ್ತು ಇವಿಎಂ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಾಧಿಕಾರದಿಂದ ಸಹಕಾರ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್‌ ಮಾತನಾಡಿ, ಮತದಾನ ಪ್ರಮಾಣದಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲೇ ಪ್ರಥಮ ಸ್ಥಾನ ಗಳಿಸಬೇಕು. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಸ್ವೀಪ್‌ ಕಾರ್ಯಕ್ರಮಗಳು ರಾಜ್ಯಪ್ರಶಸ್ತಿಗೆ ಪಾತ್ರವಾಗಿದೆ. ಚುನಾವಣೆಯ ಎಲ್ಲ ಕಾರ್ಯಕ್ರಮಗಳಿಗೆ ಪ್ರಾಧಿಕಾರದಿಂದ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು.

ಹೆಸರು ಇದೆಯೇ ಪರಿಶೀಲಿಸಿ: ಜಿಲ್ಲಾಧಿಕಾರಿ ಡಾ. ಕೆ.ರಾಕೇಶ್‌ಕುಮಾರ್‌ ಮಾತನಾಡಿ,  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಒಂದು ಹಬ್ಬವಿದ್ದಂತೆ.  ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಜವಾಬ್ದಾರಿ ಯುವ ಪೀಳಿಗೆಯದ್ದಾಗಿದ್ದು, ಲಿಂಗತ್ವ ಅಲ್ಪ ಸಂಖ್ಯಾತರು, ವಿಕಲಚೇತನರು, ವಯೋವೃದ್ಧರು ಸೇರಿದಂತೆ 18 ವರ್ಷ ತುಂಬಿದವರೆಲ್ಲಾ  ತಪ್ಪದೇ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬೇಕು ಎಂದರು.

Advertisement

ಮತಪಟ್ಟಿಯಲ್ಲಿ ಮತದಾರರ ಹೆಸರಿಲ್ಲದಿದ್ದರೆ ಮತದಾನಕ್ಕೆ ಅವಕಾಶವಿರುವುದಿಲ್ಲ. ಮತಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿದ್ದು, ಅರ್ಹ ಮತದಾರರು ಚುನಾವಣಾ ದಿನಾಂಕದವರೆಗೂ ಕಾಯದೇ ಕೂಡಲೇ ಮತಪಟ್ಟಿಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಆಮಿಷಕ್ಕೆ ಒಳಗಾಗಬೇಡಿ: ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಪ್ರಾಮಾಣಿಕವಾಗಿ ಮತ ಚಲಾಯಿಸಬೇಕು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ವಿವಿಪ್ಯಾಟ್‌ ಯಂತ್ರವನ್ನು ಬಳಸಿ ಯಶಸ್ವಿಯಾಗಿದ್ದೇವೆ.  ಈ ಯಂತ್ರದಲ್ಲಿ ನಾವು ಯಾರಿಗೆ ಮತಚಲಾಯಿಸಿದ್ದೇವೆ ಎಂದು ಚೀಟಿ ಮೂಲಕ ಖಚಿತಪಡಿಸಿಕೊಳ್ಳಬಹುದು. ಮತದಾನ ಮಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಹಕ್ಕು.  ತಪ್ಪದೇ ಮತದಾನ ಮಾಡಬೇಕು ಎಂದು ಮನವಿ ಮಾಡಿದರು. 

ಮೊಬೈಲ್‌ ಆ್ಯಪ್‌ ಬಳಸಿ: ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ಶುಭ ಕಲ್ಯಾಣ್‌ ಮಾತನಾಡಿ, ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ  ಮತ ಪಟ್ಟಿಗೆ ಹೆಸರು ನೋಂದಣಿ, ಮತಗಟ್ಟೆ ಮತ್ತು ಕ್ಷೇತ್ರ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಇನ್ನಿತರೆ ಮಾಹಿತಿಯನ್ನು ಚುನಾವಣಾ ಎಂಬ ಮೊಬೈಲ್‌ ಆ್ಯಪ್‌ನಿಂದ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1950ಗೆ ಕರೆ ಮಾಡುವ ಮೂಲಕ ಪಡೆಯಬಹುದಾಗಿದೆ.  

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗೆ  ಸಂಬಂಧಿಸಿದ ಸಲಹೆ, ದೂರು, ಕುಂದು ಕೊರತೆಗಳನ್ನು ದಾಖಲಿಸಲು  ಸಿವಿಜಿಲ್‌ ಎಂಬ ಮೊಬೈಲ್‌ ಆ್ಯಪ್‌ ಅನ್ನು ಹೊಸದಾಗಿ ಪರಿಚಯಿಸಲಾಗಿದ್ದು, ದೂರುದಾರರು  ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. 

ನಂತರ ಮತದಾನ ಜಾಗೃತಿ ಕುರಿತ ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ಬಿಡುಗಡೆ ಹಾಗೂ ವಿವಿಪ್ಯಾಟ್‌, ಇವಿಎಂಗಳ ಪ್ರಾತ್ಯಕ್ಷಿಕೆ ನೀಡಲಾಯಿತು. ಜಿಲ್ಲಾ ಸಂಪರ್ಕಾಧಿಕಾರಿ ಗಾಯಿತ್ರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ. ದೇವರಾಜ್‌, ಶಿಕ್ಷಕ ರಿಜ್ವಾನ್‌ ಪಾಷಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ಶ್ರೀನಗರದಲ್ಲಿ ಉಗ್ರರ ದಾಳಿಗೆ ಬಲಿಯಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next