Advertisement
2016-17ನೇ ಸಾಲಿನಲ್ಲಿ ಮಾತೃಪೂರ್ಣ ಯೋಜನೆಯನ್ನು ಎಚ್.ಡಿ.ಕೋಟೆ, ಮಧುಗಿರಿ, ಮಾನ್ವಿ, ಜಮಖಂಡಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದ ಸರ್ಕಾರ, 2017-18ನೇ ಸಾಲಿಗೆ ರಾಜ್ಯದೆಲ್ಲೆಡೆ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಮಧ್ಯಾಹ್ನ ಪೌಷ್ಠಿಕ ಆಹಾರ ಒದಗಿಸಲು ಸುಮಾರು 302 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲು ಇಟ್ಟಿತ್ತು, ಇದೀಗ ನಿಗದಿಯಂತೆ ಅ.2ಕ್ಕೆ ಯೋಜನೆ ಅನುಷ್ಠಾನವಾಗಬೇಕಿದೆ. ಆದರೆ, ಒಂದರ ಮೇಲೊಂದರಂತೆ ಸಮಸ್ಯೆಗಳು ಉದ್ಭವವಾಗುತ್ತಿದ್ದು, ಯೋಜನೆ ಅನುಷ್ಠಾನ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
Related Articles
Advertisement
ಮಧ್ಯಾಹ್ನದ ಹೊತ್ತಿನಲ್ಲಿ ಬಾಣಂತಿಯರನ್ನು, ಗರ್ಭಿಣಿಯರನ್ನು ಸುಮಾರು 1-2 ಕಿ.ಮೀ ದೂರದ ಅಂಗನವಾಡಿಗಳಿಗೆ ಕಳುಹಿಸಿಕೊಡಲು ಸಾಧ್ಯವೇ? ಒಂದು ವೇಳೆ ಫಲಾನುಭವಿಗಳು ಬರದಿದ್ದರೆ ಮಾಡಿದ ಅಡುಗೆ ಗತಿಯೇನು? ಸರ್ಕಾರಕ್ಕೆ ನಷ್ಟ ಆಗುವುದಿಲ್ಲವೇ? ಎಂಬಿತ್ಯಾದಿ ಹಲವು ಪ್ರಶ್ನೆಗಳು ಉದ್ಭವವಾಗುತ್ತಿವೆ.
ಕಾರ್ಯಕರ್ತರಿಗೆ ಹೊರೆ: ಈ ಹಿಂದೆ ಅಂಗನವಾಡಿಗಳು ಬೆಳಗ್ಗೆ 9.30ಕ್ಕೆ ಆರಂಭಗೊಂಡು ಮಧ್ಯಾಹ್ನ 1.30ರಿಂದ 2ಕ್ಕೆ ಅಂತ್ಯಗೊಳ್ಳುತ್ತಿತ್ತು. ಇದೀಗ ಅವಧಿ ವಿಸ್ತರಿಸಿರುವ ಸರ್ಕಾರ ಸಂಜೆ 4ರವರೆಗೆ ಕಾರ್ಯನಿರ್ವಹಿಸುವುದನ್ನು ಕಡ್ಡಾಯ ಮಾಡಿದೆ. ಇದರೊಂದಿಗೆ ವಿವಿಧ ಜವಾಬ್ದಾರಿಗಳು ಕೂಡ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರ ಹೆಗಲಿಗೆ ಹೊರಿಸಲಾಗಿದೆ. ಮಾತೃಪೂರ್ಣ ಯೋಜನೆಯಲ್ಲಿ ಒಟ್ಟು 12 ಲಕ್ಷಕ್ಕೂ ಅಧಿಕ ಫಲಾನುಭವಿಗಳು,
5 ವರ್ಷದೊಳಗಿನ ಮಕ್ಕಳು ಸೇರಿದಂತೆ ಒಟ್ಟು 55 ಲಕ್ಷ ಫಲಾನುಭವಿಗಳು ಅಂಗನವಾಡಿ ವ್ಯಾಪ್ತಿಯಲ್ಲಿ ಬರುತ್ತಾರೆ. ಅವರಿಗೆ ನಿಗದಿತ ಸಮಯಕ್ಕೆ ಪೌಷ್ಠಿಕಾಂಶಯುಕ್ತ ಆಹಾರ, ಶಾಲಾ ಪೂರ್ವ ಶಿಕ್ಷಣ ಒದಗಿಸಬೇಕಿದೆ. ಆದ್ದರಿಂದ ಈಗಿರುವ ಸಿಬ್ಬಂದಿ ಜತೆಗೆ ಅಡುಗೆ ತಯಾರಿಕೆಗಾಗಿ ಪ್ರತ್ಯೇಕವಾಗಿ ಸಹಾಯಕರನ್ನು ಒದಗಿಸಬೇಕು ಎಂಬ ಒತ್ತಾಯ ಅಂಗನವಾಡಿ ಕಾರ್ಯಕರ್ತೆಯರದ್ದು. ಜತೆಗೆ ಹೆಚ್ಚಿನ ಹೊರೆಗೆ ಹೆಚ್ಚುವರಿ ಸಂಭಾವನೆ ನೀಡಬೇಕು ಎನ್ನುವ ಆಗ್ರಹಕ್ಕೆ ಸರ್ಕಾರದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.
ನೋಟಿಸ್ ಜಾರಿ: ಮಾತೃಪೂರ್ಣ ಯೋಜನೆಯ ಕಾರ್ಯಕ್ಕೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಸೂಚಿಸಬೇಕು. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಯೋಜನೆ ಜಾರಿಗೊಳಿಸಲು ಹೊರಟಿರುವ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಸಂಘ, ಮಂಗಳೂರು ನಗರ ಹಾಗೂ ಗ್ರಾಮಾಂತರ ಅಂಗನವಾಡಿ ಕಾರ್ಯಕರ್ತೆಯರ ಸಂಘ ಸೇರಿ 28 ಮಂದಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಲಯ ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ, ನಿರ್ದೇಶಕರು, ಉಪನಿರ್ದೇಶಕರು ಸೇರಿದಂತೆ ಹಲವರಿಗೆ ನೋಟಿಸ್ ಜಾರಿ ಮಾಡಿದೆ. ಯೋಜನೆ ಕಾರ್ಯವಿಧಾನ, ಮಾರ್ಗಸೂಚಿಗಳನ್ನೊಳಗೊಂಡ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದೆ.
ಯೋಜನೆ ಜಾರಿಗೆ ಸರ್ಕಾರ ತರಾತುರಿಯಲ್ಲಿ ಈಗ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪಾತ್ರೆಗಳು, ಸಿಲಿಂಡರ್, ಸ್ಟೌಟ್‌ಗಳ ಖರೀದಿ ಮಾಡುತ್ತಿದ್ದು, ಹಣ ದೋಚುವ ಕಾರ್ಯಕ್ರಮ ಇದಾಗಿದೆ. ಫಲಾನುಭವಿಗಳಿಗೆ ಆಹಾರ ಒದಗಿಸುವ ಮತ್ತು ಯೋಜನೆ ಯಶಸ್ವಿ ಮಾಡುವ ಕುರಿತು ಇದುವರೆಗೂ ಒಂದು ಸಮೀಕ್ಷೆಯನ್ನೂ ಮಾಡಿಲ್ಲ. ಇದೆಲ್ಲಾ ಚುನಾವಣೆ ಗಿಮಿಕ್.-ಜಿ.ಆರ್.ಶಿವಶಂಕರ್, ಅಧ್ಯಕ್ಷ, ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿ ಮಾತೃಪೂರ್ಣ ಯೋಜನೆಗೆ ನಮ್ಮ ವಿರೋಧವೇನಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ತಯಾರಿಸಲು ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು. ಈಗಿರುವ ಸಿಬ್ಬಂದಿ ಜತೆಗೆ ಅಡುಗೆ ತಯಾರಿಕೆಗೆ ಮತ್ತೂಬ್ಬ ಸಹಾಯಕರನ್ನು ಒದಗಿಸಬೇಕು. ಒಂದು ವೇಳೆ ಫಲಾನುಭವಿಗಳ ಆರೋಗ್ಯದಲ್ಲಿ ಏರುಪೇರಾದರೆ ಅಂಗನವಾಡಿ ಊಟದಿಂದ ಆಗಿದೆಯೆಂಬ ಆರೋಪ ವಹಿಸಿದೇ, ಇಲಾಖೆಯೇ ಅದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ನಮ್ಮನ್ನು ಹೊಣೆ ಮಾಡಬಾರದು.
-ಎಸ್.ವರಲಕ್ಷ್ಮಿ, ಅಧ್ಯಕ್ಷೆ, ರಾಜ್ಯ ಅಂಗನವಾಡಿ ನೌಕರರ ಸಂಘ * ಸಂಪತ್ ತರೀಕೆರೆ