ಶಿಡ್ಲಘಟ್ಟ: ಕೊರೊನಾ ಸೋಂಕಿನ ನೆಪವೊಡ್ಡಿ ಕೆಲ ಖಾಸಗಿ ಶಾಲೆಗಳು ಪೋಷಕರನ್ನು ಪೀಡಿಸುತ್ತಿರುವ ದೂರು ಪ್ರತಿನಿತ್ಯ ಕೇಳಿ ಬರುತ್ತಿವೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ, ಅವರ ಭವಿಷ್ಯ ಉಜ್ವಲಗೊಳಿಸಬೇಕೆಂದು ಕ್ಷೇತ್ರ ಶಿಕ್ಷಣಾ ಧಿಕಾರಿ ರಘುನಾಥ್‌ರೆಡ್ಡಿ ಮನವಿ ಮಾಡಿದರು.
ತಾಲೂಕಿನ ತುಮ್ಮನಹಳ್ಳಿ ಗ್ರಾಪಂ ತಿಪ್ಪೇನಹಳ್ಳಿಯಲ್ಲಿ ಶಿಥಿಲಗೊಂಡಿದ್ದ ಸರ್ಕಾರಿ ಶಾಲೆಯನ್ನು ಕಾರ್ಲ್ ಝೈಸ್ ಇಂಡಿಯಾ, ಬ್ಯುಸಿನೆಸ್ ನೆಟ್‌ವರ್ಕ್ ಇಂಟರ್ ನ್ಯಾಷನಲ್ ಇನ್ಸಫೈರ್ ಚಾಪ್ಟರ್(ಬಿಎನ್‌ಐ) ಹಾಗೂ ಬೆಂಗಳೂರಿನ ರೋಟರಿ ಸೌಥ್ ಪರೇಡ್‌ನ ಆಶ್ರಯದಲ್ಲಿ ನವೀಕರಣಗೊಳಿಸಿದ್ದ ಶಾಲೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಸಿಗುವಂತ ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳಲ್ಲಿ ಸಿಗುವುದಿಲ್ಲ. ಆದರೆ, ಪೋಷಕರ ಖಾಸಗಿ ಶಾಲೆಗಳ ಬಗೆಗಿನ ವ್ಯಾಮೋಹವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆ ಆಗಲು ಕಾರಣವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಉತ್ತಮ ಉನ್ನತ ಶಿಕ್ಷಣ ಪಡೆದ ಶಿಕ್ಷಕರು ಸಂದರ್ಶನದಲ್ಲಿ ಪಾಸಾಗಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದು, ನಿಮ್ಮ ಮಕ್ಕಳ ಜ್ಞಾನವನ್ನು ಹೆಚ್ಚಿಸುವಲ್ಲಿ ಎಲ್ಲ ರೀತಿಯಲ್ಲೂ ಸನ್ನದ್ಧರಾಗಿದ್ದಾರೆ. ನಂಬಿಕೆಯಿಟ್ಟು ಸರ್ಕಾರಿ ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿದರು.
25 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ದುರಸ್ತಿ: ತಿಪ್ಪೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಓದಿದ್ದ ಹಿರಿಯ ವಿದ್ಯಾರ್ಥಿ ಇದೀಗ ಬಿಎನ್‌ಐ ಸಂಸ್ಥೆಯಲ್ಲಿ ಡೈರೆಕ್ಟರ್ ಕನ್ಸ್‌ಲ್ಟೆಂಟ್ ಆಗಿರುವ ಟಿ.ಪಿ.ಶ್ರೀನಿವಾಸ್ ಮಾತನಾಡಿ, ಉದ್ಯೋಗ ಕಾರಣಕ್ಕಾಗಿ ನಾನು ಬೆಂಗಳೂರಲ್ಲಿ ನೆಲೆಸಿದ್ದು, ಸ್ವಂತ ಊರಿಗೆ ಬಂದಾಗ ಶಿಥಿಲಗೊಂಡ ಶಾಲೆ ಕಣ್ಣಿಗೆ ಬಿತ್ತು. ನಾನು ಓದಿ ಬೆಳೆದ ಶಾಲೆಗೆ ಏನಾದರೂ ಮಾಡಬೇಕೆನ್ನುವ ಉದ್ದೇಶದಿಂದ ರೋಟರ್ ಕ್ಲಬ್, ಕಾರ್ಲ್ ಝೈಸ್ ಇಂಡಿಯಾ ಸಂಸ್ಥೆ ಅವರನ್ನು ಸಂಪರ್ಕಿಸಿ ಅವರ ನೆರವಿನಿಂದ 25 ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ದುರಸ್ತಿ, ಪೀಠೊಪಕರಣ, ಮಕ್ಕಳ ಆಟದ ಮೈದಾನ ವ್ಯವಸ್ಥೆ ಮಾಡಿದ್ದು, ನನಗೆ ಸಂತಸ ತಂದಿದೆ ಎಂದರು.
ಆಮ್ಲಜನಕ ಸಾಂದ್ರಕ ವಿತರಣೆ: ರೋಟರಿ ಕ್ಲಬ್‌ನ ಅಧ್ಯಕ್ಷ ರವಿಪ್ರಸಾದ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳನ್ನು ಗುರುತಿಸಿ ತಲಾ 25 ಸಾವಿರ ರೂ. ನೆರವು ನೀಡಿ, ಈಗಾಗಲೇ 6.5 ಲಕ್ಷ ರೂ. ಸಹಾಯಧನವನ್ನು ನೀಡಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ 17 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕ ಸಾಂದ್ರಕ ನೀಡಲಾಗಿದೆ ಎಂದರು.
ಕೋಚಿಮುಲ್ ನಿರ್ದೇಶಕ ಆರ್. ಶ್ರೀನಿವಾಸ್, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಆಂಜಿನೇಯ, ಸ್ಥಳೀಯರಾದ ಭರತ್, ಲಕ್ಷ್ಮೀನಾರಾಯಣ್, ಗೌರೀಶ್, ಕಾರ್ಲ್ ಝೈಸ್ ಇಂಡಿಯಾ ಸಂಸ್ಥೆ ಎಂ.ಡಿ ವಿಲ್ಸನ್ ಥಾಮಸ್, ರೋಟರಿ ಕ್ಲಬ್‌ನ ಕಾರ್ಯ ದರ್ಶಿ ಆನಂದ್ ಪ್ರವೀಣ್, ಸುದರ್ಶನ್ ರಾಮಯ್ಯ, ರಾಮಚಂದ್ರ, ಬಿಎನ್‌ಐನ ಟಿ.ಪಿ. ಶ್ರೀನಿವಾಸ್, ಚಂದ್ರಶೇಖರ್, ಗ್ರಾಪಂ ಪಿಡಿಒ ಹರೀಶ್, ವಿಜಯ್, ಶಾಲಾ ಶಿಕ್ಷಕರು, ಹಾಗೂ ಸ್ಥಳೀಯರು ಇದ್ದರು.