Advertisement

“ವಿದ್ಯಾರ್ಥಿ ಜೀವನ ಸದುಪಯೋಗಿಸಿ: ಕಾಶೀ ಶ್ರೀ

11:11 PM Nov 28, 2019 | Sriram |

ಕಾರ್ಕಳ: ವಿದ್ಯಾರ್ಥಿ ಎಂದರೆ ವಿದ್ಯೆಯನ್ನು ಅರ್ಜಿಸುವವನು ಎಂದರ್ಥ. ನಮ್ಮ ಬಾಳ್ವೆಯಲ್ಲಿ ಕಳೆಯುವ ಅತ್ಯಂತ ಸುಂದರ ಹಾಗೂ ಮಹತ್ವದ ದಿನಗಳೆಂದರೆ ಅದು ವಿದ್ಯಾರ್ಥಿ ಜೀವನ. ಹಾಗಾಗಿ ವಿದ್ಯಾರ್ಥಿ ಘಟ್ಟವನ್ನು ಉತ್ತಮ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶ್ರೀ ಸಂಸ್ಥಾನ ಕಾಶೀ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

Advertisement

ಅವರು ನ. 28ರಂದು ಶ್ರೀ ಭುವನೇಂದ್ರ ಕಾಲೇಜಿನ ವಜ್ರ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ಸಂಬಂಧ ಬಹಳ ಅಮೂಲ್ಯವಾದುದು. ವಿದ್ಯಾರ್ಥಿಗಳಿಂದಲೇ ಕಾಲೇಜಿಗೆ ಹೆಸರು, ಕೀರ್ತಿ ಲಭಿಸುವುದು. ಆದರೆ, ಅದರ ಹಿಂದೆ ಅಧ್ಯಾಪಕರ ಪರಿಶ್ರಮವಿದೆ ಎಂದು ಸ್ವಾಮೀಜಿ ನುಡಿದರು.

ಭಕ್ತಿ ಗೌರವ ಭಾವನೆಯಿರಲಿ
ಅಧ್ಯಾಪಕನಾದವರಿಗೆ ವಿದ್ಯಾರ್ಥಿಗಳ ಕುರಿತು ಕಾಳಜಿಯಿರಬೇಕು. ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಭಕ್ತಿ ಗೌರವದಿಂದ ಕಾಣಬೇಕು. ಹೀಗಿದ್ದಲ್ಲಿ ಗುರುಶಿಷ್ಯರ ಸಂಬಂಧ ಉತ್ತಮವಾಗಿರುವುದು ಎಂದು ಸಂಯಮೀಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ
ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದಿನ ಶಿಕ್ಷಣ ಅಂಕ ಗಳಿಕೆಗೆ ಮಾತ್ರ ಒತ್ತು ನೀಡುತ್ತಿದೆಯೇ ಹೊರತು ಮೌಲ್ಯ ಹಾಗೂ ಸಂಸ್ಕಾರ ತುಂಬುವಲ್ಲಿ ಎಡವುತ್ತಿದೆ. ಪುಸ್ತಕ ಓದುವುದರ ಬದಲು ಮೊಬೈಲ್‌ನಲ್ಲಿ ಕಾಲ ಕಳೆಯುವಂತಾಗಿದೆ ಎಂದು ಸಂಯಮೀಂದ್ರ ತೀರ್ಥ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.

Advertisement

ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಶ್ರೀ ಭುವನೇಂದ್ರ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ. ಶಿವಾನಂದ ಪೈ ಸ್ವಾಗತಿಸಿ, ಉಪನ್ಯಾಸಕಿ ವನಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಅನಂತರ ಮಹಾಲಕ್ಷ್ಮೀ ಶೆಣೈ ಅವರ ಬಳಗದಿಂದ ಭಕ್ತಿ ಗಾಯನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next