Advertisement
ಜಾಮಿಯಾ ಮಿಲಿಯಾ ಇಸ್ಲಾಮಿಯಾದಂಥ ಅಲ್ಪಸಂಖ್ಯಾತ ವಿಶ್ವವಿದ್ಯಾಲಯಗಳು, ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನದಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ತುತ್ತಾಗಿ ಭಾರತಕ್ಕೆ ಓಡಿ ಬಂದವರಿಗೆ ಭಾರತ ಸರಕಾರ ಪೌರತ್ವ ಕೊಡುವುದನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ತೊಡಗಿವೆ. ಅಲ್ಲಿನ ವಿದ್ಯಾರ್ಥಿಗಳು ಪೊಲೀಸರ ಮೇಲೆ ಕಲ್ಲುತೂರುವಾಗ ಎತ್ತಲಾದ ಧಾರ್ಮಿಕ ಘೋಷಣೆಗಳೆಲ್ಲವೂ ಈ ಪ್ರತಿಭಟನೆಗಳ ಕೋಮುವಾದಿ ಗುಣವನ್ನು ಸ್ಪಷ್ಟವಾಗಿ ಸಾರುತ್ತಿವೆ.
Related Articles
Advertisement
2011ರಲ್ಲಿ ಸೋನಿಯಾ ಗಾಂಧಿಯವರ ಕಾಂಗ್ರೆಸ್ ಸರಕಾರ ಜಾಮಿಯಾ ಮಿಲಿಯಾಗೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಮಾನ್ಯತೆ ನೀಡಿತು ಮತ್ತು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂಬ ಸಾಂವಿಧಾನಿಕ ನಿಯಮದಿಂದಲೂ ವಿನಾಯಿತಿ ಕೊಟ್ಟಿತು. ಅತ್ತ ಅಲೀಗಢ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲೂ ಹಿಂದುಳಿದ ವರ್ಗದವರಿಗೆ ಸಾಂವಿಧಾನಿಕವಾಗಿ ನೀಡಲಾಗುವ ಮೀಸಲಾತಿ ಅನುಷ್ಠಾನಗೊಂಡಿಲ್ಲ.
ಈ ರೀತಿಯಲ್ಲಿ ಸಾರ್ವಜನಿಕ ಹಣದಲ್ಲಿ ನಿರ್ಮಾಣವಾಗಿ, ಕೇವಲ ಒಂದು ಧರ್ಮಕ್ಕೆ ಸೇರಿದ ವಿದ್ಯಾರ್ಥಿಗಳಿಗಷ್ಟೇ ಸೀಟು ಮೀಸಲಿಡುವ ಕಾಲೇಜುಗಳು ಇವೆರಡೇ ಅಲ್ಲ. ಸತ್ಯವೇನೆಂದರೆ, ದೇಶದಲ್ಲಿ ಇಂಥ ನೂರಾರು ಕಾಲೇಜುಗಳು ಇವೆ. “ಅಲ್ಪಸಂಖ್ಯಾತ’ ಟ್ಯಾಗ್ ಇರುವ ಈ ಕಾಲೇಜುಗಳು ಪರಿಶಿಷ್ಟ ಜಾತಿಗಳು/ ಪರಿಶಿಷ್ಟ ಪಂಗಡಗಳು/ ಒಬಿಸಿ ವರ್ಗದವರಿಗೆ ಮೀಸಲಾತಿ ಕೊಡುವುದಿಲ್ಲ.
ವೆಲ್ಲೋರ್‌ನಲ್ಲಿನ ಸೇಂಟ್ ಸ್ಟೀಫನ್ಸ್ ಕಾಲೇಜು ಮತ್ತು ದಿ ಕ್ರಿಶ್ಚಿಯನ್‌ಮೆಡಿಕಲ್ ಕಾಲೇಜನ್ನೇ ನೋಡಿ. ಸೇಂಟ್ ಸ್ಟೀಫನ್ಸ್ ಕಾಲೇಜಿಗೆ 95 ಪ್ರತಿಶತದಷ್ಟು ಹಣ ಕೇಂದ್ರ ಸರಕಾರದಿಂದ ಬರುತ್ತದೆ. ಆದರೆ ಈ ಕಾಲೇಜು ತನ್ನಲ್ಲಿನ 50 ಪ್ರತಿಶತ ಸೀಟುಗಳನ್ನು ಕ್ರಿಶ್ಚಿಯನ್ನರಿಗೆ ಮೀಸಲಿಟ್ಟಿದೆ. ಇನ್ನು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ತನ್ನಲ್ಲಿನ ನರ್ಸಿಂಗ್ ಕೋರ್ಸುಗಳಲ್ಲಿ 85 ಪ್ರತಿಶತ ಸೀಟುಗಳನ್ನು ಕ್ರಿಶ್ಚಿಯನ್ನರಿಗೆ ಮೀಸಲಿಟ್ಟಿದೆ. ಸೇಂಟ್ ಸ್ಟೀಫನ್ಸ್ ಕಾಲೇಜಿನ ನಿಯಮಾವಳಿಯು “ಕಾಲೇಜಿನ ಸುಪ್ರೀಂ ಕೌನ್ಸಿಲ್‌ನ ಸದಸ್ಯರು ಚರ್ಚಿನಿಂದ ಬಂದವರೇ ಆಗಿರಬೇಕು’ ಎನ್ನುತ್ತದೆ.
ಸಿಬ್ಬಂದಿ ನೇಮಕಾತಿ, ದಾಖಲಾತಿ ಪ್ರಕ್ರಿಯೆ, ಆರ್ಥಿಕ ಸ್ವಾಯತ್ತತೆ, ಇತ್ಯಾದಿಗಳ ವಿಚಾರದಲ್ಲಿ ಈ ಸಂಸ್ಥೆಗಳಿಗೆ ಇರುವ ನಿಬಂಧನೆಗಳು ಹಿಂದೂ ಸಂಸ್ಥೆಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ಸಡಿಲವಾಗಿವೆ.ಇದು ಕೇವಲ ಉನ್ನತ ಶಿಕ್ಷಣ ಸ್ತರದಲ್ಲಿ ನಡೆಯುತ್ತಿರುವ ತಾರತಮ್ಯವಷ್ಟೇ. ಈಗ ಶಾಲೆಗಳ ವಿಚಾರಕ್ಕೆ ಬರೋಣ. ದೇಶದಲ್ಲಿ ಪ್ರತಿ ವರ್ಷ ಆರ್ಥಿಕವಾಗಿ ದುರ್ಬಲರಾಗಿರುವ, ದಮನಿತ ವರ್ಗಗಳ ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಹಕ್ಕು(ಆರ್‌ಟಿಇ) ಕಾಯ್ದೆ ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಅಡ್ಮಿಷನ್ ಪಡೆಯುತ್ತಾರೆ. ಆದರೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಈ ಸಾಮಾಜಿಕಜವಾಬ್ದಾರಿಯಿಂದಲೂ ವಿನಾಯಿತಿ ನೀಡಲಾಗಿದೆ. ಮೂಲಸೌಕರ್ಯ, ಪ್ರವೇಶಾತಿ, ಶಿಕ್ಷಕರು ವಿದ್ಯಾರ್ಥಿಗಳ ಅನುಪಾತದ ವಿಷಯದಲ್ಲೂ ದೇಶದ ಎಲ್ಲಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನಿಯಮಗಳು ಸಡಿಲವಾಗಿದ್ದು, ಇದರಿಂದಾಗಿ ಮಾರುಕಟ್ಟೆಯಲ್ಲಿ ಈ ಶಿಕ್ಷಣ ಸಂಸ್ಥೆಗಳಿಗೆ ಮೇಲುಗೈ ಸಾಧಿಸಲು ಸಾಧ್ಯವಾಗಿದೆ.ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಿಂಸಾಚಾರಕ್ಕೆ ತುತ್ತಾಗಿ ಭಾರತಕ್ಕೆ ಬಂದವರಿಗೆ ತುಸು ಸಹಕಾರ ಸಿಕ್ಕಿತೆಂಬ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿರುವವರೆಲ್ಲ ಮೇಲ್ಕಂಡ ತಾರತಮ್ಯದ ವಿಚಾರದಲ್ಲಿ ಮಾತ್ರ ಮಾತನಾಡುವುದಿಲ್ಲ. ಇನ್ನು ಈ ವಿಷಯದಲ್ಲಿ ಮುಖ್ಯವಾಹಿನಿ ಮಾಧ್ಯಮಗಳು ಮತ್ತು ಎಡಪಂಥೀಯರೇನೂ ಕಮ್ಮಿಯಿಲ್ಲ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ಸಾಹಿತ್ಯ ವಿಭಾಗಕ್ಕೆ ಮುಸ್ಲಿಂ ಪ್ರೊಫೆಸರ್ ಒಬ್ಬರನ್ನು ನೇಮಿಸುವ ವಿಚಾರದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ಆರಂಭವಾದಾಗ ದೊಡ್ಡ ಮಟ್ಟದಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು. ಆಕ್ರೋಶ ವ್ಯಕ್ತಪಡಿಸಿದ ಇದೇ ಜನರೇ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಕಲ್ಲುತೂರಾಟ, ಹಿಂಸಾಚಾರ, ಕೋಮುವಾದಿ ಘೋಷಣೆಗಳನ್ನೆಲ್ಲ ಕಡೆಗಣಿಸಿಬಿಡುತ್ತಿದ್ದಾರೆ. ಇದನ್ನೆಲ್ಲ ಟೀಕಿಸುವ ಬದಲು, ಧರ್ಮಾಂಧರಿಗೆ ಮತ್ತು ಸಮಾಜ ವಿರೋಧಿಶಕ್ತಿಗಳಿಗೆ ಶಹಬ್ಟಾಸ್ ಹೇಳಲಾಗುತ್ತಿದೆ.
ಏನೇ ಆದರೂ ಒಂದು ಸಂಗತಿಯಂತೂ ಸ್ಪಷ್ಟ. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿರುವ ವಿಶೇಷ ಸವಲತ್ತುಗಳನ್ನು ಮತ್ತು ಮಮತೆಯನ್ನು ಕೂಡಲೇ ನಿಲ್ಲಿಸಬೇಕಿದೆ. ಆರ್ಟಿಕಲ್ 30ಅನುಷ್ಠಾನದ ಮೂಲಕ ಇದು ಸಾಧ್ಯವಾಗುತ್ತದೆ. ಅನಂತರ, ಸೋನಿಯಾ ಗಾಂಧಿಯವರ ಕಾಂಗ್ರೆಸ್ ಸರಕಾರವು ಆರ್ಟಿಕಲ್ 15ರಲ್ಲಿ ಸೇರಿಸಿದ ಕ್ಲಾಸ್ 5 ಅನ್ನು ಅಳಿಸಿಹಾಕಬೇಕು.ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ನಮಗೆ ಹೊಸ ಮತ್ತು ಉತ್ತಮ ಮಾರ್ಗಗಳು ಬೇಕಾಗಿವೆ.ಮೊದಲನೆಯದಾಗಿ, ನಾವು ಪ್ರಸಕ್ತ ಅಸ್ತಿತ್ವದಲ್ಲಿ ಇರುವ ಅಲ್ಪಸಂಖ್ಯಾತ ಮತ್ತು ಅಲ್ಪಸಂಖ್ಯಾತೇತರ ಶಿಕ್ಷಣ ಸಂಸ್ಥೆಗಳು ಎಂಬ ವರ್ಗೀಕರಣವನ್ನೇ ನಿಲ್ಲಿಸಬೇಕು. ಇದರ ಬದಲಾಗಿ, ಶಿಕ್ಷಣ ಸಂಸ್ಥೆಗಳ ವರ್ಗೀಕರಣವೂ ಪಂಥೀಯ ಮತ್ತು ಸೆಕ್ಯುಲರ್ ಎನ್ನುವ ವರ್ಗಗಳ ಆಧಾರದ ಮೇಲೆ ಆಗಬೇಕು. ವಿಜ್ಞಾನ, ಗಣಿತ ಮತ್ತು ಸಾಮಾಜಿಕ ವಿಜ್ಞಾನಗಳಂತಹ ಬೋಧನಾ ವಿಷಯಗಳನ್ನು ಜಾತ್ಯತೀತ ಎಂದು ವರ್ಗೀಕರಿಸಬೇಕು ಮತ್ತು ಯಾವ ವಿಷಯಗಳು ಭಾಷೆ ಮತ್ತು ಸಂಸ್ಕೃತಿ ಸಂಬಂಧಿಸಿರುತ್ತವೋ(ಉದಾಹರಣೆಗೆ ಒಂದು ಧರ್ಮಕ್ಕೆ ಸೇರಿದವು) ಅವನ್ನು ಪಂಥೀಯ ಎಂದು ಕರೆಯಬಹುದು.
ಇಷ್ಟು ಮಾಡಿದ ನಂತರ, ಎಲ್ಲಾ ಶಿಕ್ಷಣ ಸಂಸ್ಥೆಗಳಿಗೂ(ಅದನ್ನು ಹಿಂದೂಗಳೇ ನಡೆಸಲಿ, ಮುಸಲ್ಮಾನರೇ ನಡೆಸಲಿ) ಸಮಾನ ನಿಯಮಗಳು ಜಾರಿಯಾಗಬೇಕು. ಮೀಸಲಾತಿ ಮತ್ತು ನಿರ್ವಹಣೆಯ ವಿಚಾರದಲ್ಲಿನ ದೇಶದ ಕಾನೂನು ಹೇಗಿದೆಯೋ, ಆ ನಿಯಮಗಳು ಎಲ್ಲಾ “ಸೆಕ್ಯುಲರ್’ ಶಿಕ್ಷಣ ಸಂಸ್ಥೆಗಳಿಗೂ ತಪ್ಪದೇ ಅನ್ವಯವಾಗಬೇಕು. ಇನ್ನು ಪಂಥೀಯ ಶಿಕ್ಷಣ ಸಂಸ್ಥೆಗಳು, ಅವು ಹಿಂದೂಗಳಿಗೆ ಸಂಬಂಧಿಸಿದ್ದೇ ಆಗಲಿ, ಮುಸ್ಲಿಮರು, ಸಿಕ್ಖರು ಅತವಾ ಕ್ರಿಶ್ಚಿಯನ್ ಸಮುದಾಯಗಳದ್ದೇ ಆಗಲಿ, ಅವುಗಳು ಪ್ರತ್ಯೇಕ ನಿಯಮಾವಳಿ ರಚಿಸಿಕೊಳ್ಳಲಿ. ಆದರೆ ಇವು ಎಲ್ಲರನ್ನೂ ಸಮಾನರಾಗಿ ನಡೆಸಿಕೊಳ್ಳುವಂತೆ ನೋಡಿಕೊಳ್ಳಬೇಕು.ದೇಶದ ಪ್ರಜಾಪ್ರಭುತ್ವಿಯ ಮತ್ತು ಜಾತ್ಯತೀತ ಮೌಲ್ಯಗಳಿಗೆ ಸರಿಹೊಂದುವಂಥ ಇಂಥ ವ್ಯವಸ್ಥೆಯನ್ನು ಯಾವೊಬ್ಬ ತಾರ್ಕಿಕಮನುಷ್ಯನೂ ವಿರೋಧಿಸುವುದಿಲ್ಲ. ವಿರೋಧಿಸುತ್ತಾರೆ ಎಂದರೆ, ಅವರ ಉದ್ದೇಶ ಬೇರೆ ಇದೆಯೊಂದೋ ಅಥವಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಮನ್ನಣೆ ನೀಡುವ ಪ್ರಸಕ್ತ ಕಾನೂನುಗಳೇ ಶಾಶ್ವತವಾಗಿ ಇರಬೇಕೆಂದು ಅವರು ಬಯಸುತ್ತಾರೆ ಎಂದರ್ಥ.(ಲೇಖಕರು “ಸ್ವರಾಜ್ಯ’ ಜಾಲತಾಣದಲ್ಲಿ ಹಿರಿಯ ಪತ್ರಕರ್ತರು)
ಅರಿಹಂತ್ ಪವಾರಿಯಾ