ನವದೆಹಲಿ:ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬ್ರಿ ಕಟ್ಟಡ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಇಂದೇ ಮುಕ್ತಾಯಗೊಳಿಸುವಂತೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯಿ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಅಯೋಧ್ಯೆ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆ ಮೂಲಕ ನಡೆಸಿದ ಸಂಧಾನ ನಡೆಸಲು ಸುಪ್ರೀಂಕೋರ್ಟ್ ನ ಪಂಚಸದಸ್ಯ ಸಾಂವಿಧಾನಿಕ ಪೀಠ ಮಧ್ಯಸ್ಥಿಕೆ ಸಮಿತಿಯನ್ನು ನೇಮಕ ಮಾಡಿತ್ತು. ಆದರೆ ಸಂಧಾನ ಮಾತುಕತೆ ವಿಫಲವಾಗಿತ್ತು. ನಂತರ ಸಮಿತಿ ಸುಪ್ರೀಂಕೋರ್ಟ್ ಗೆ ವರದಿಯನ್ನು ಸಲ್ಲಿಸಿತ್ತು.
ಇಂದು ಸಂಜೆ 5ಗಂಟೆಯೊಳಗೆ ಈ ವಿಚಾರಣೆ ಅಂತ್ಯಗೊಳ್ಳಬೇಕು. ಈ ವಿಚಾರಣೆ ಸಾಕು ಎಂದು ಸಿಜೆಐ ಗೋಗೊಯಿ ತಿಳಿಸಿದ್ದಾರೆ. ಜಸ್ಟೀಸ್ ಗಳಾದ ಎಸ್.ಎ ಬೋಬ್ಡೆ, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್ ಎ ನಝೀರ್ ಅವರನ್ನೊಳಗೊಂಡ ಪೀಠ 40ನೇ ದಿನದ ವಿಚಾರಣೆ ನಂತರ ಕೊನೆಯ ಪ್ರಕ್ರಿಯೆ ಆರಂಭಿಸಲಿದೆ ಎಂದು ವರದಿ ತಿಳಿಸಿದೆ.
ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಅತೀ ಸೂಕ್ಷ್ಮವಾಗಿರುವ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣದ ವಿವಾದದ ವಿಚಾರಣೆ ಅಕ್ಟೋಬರ್ 16ರಂದು ಮುಕ್ತಾಯಗೊಳ್ಳಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯಿ ಅವರು ನವೆಂಬರ್ 17ರಂದು ಸೇವೆಯಿಂದ ನಿವೃತ್ತಿಯಾಗಲಿದ್ದು, ಅದಕ್ಕೂ ಮುನ್ನ ಐತಿಹಾಸಿಕ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಹಲವು ವರದಿಗಳು ವಿಶ್ಲೇಷಿಸಿವೆ.
ಕಳೆದ ತಿಂಗಳ ವಿಚಾರಣೆ ಸಂದರ್ಭದಲ್ಲಿ ಅಯೋಧ್ಯೆ ವಿವಾದದ ವಿಚಾರಣೆಯನ್ನು ಅಕ್ಟೋಬರ್ 18ರೊಳಗೆ ಮುಕ್ತಾಯಗೊಳಿಸುವಂತೆ ಉಭಯ ಪಕ್ಷಗಳ ವಕೀಲರಿಗೆ ಸಿಜೆಐ ಗೋಗೊಯಿ ಸೂಚನೆ ನೀಡಿದ್ದರು. ಒಂದು ವೇಳೆ ಅಗತ್ಯವಿದ್ದರೆ ಪ್ರತಿ ದಿನ ಒಂದು ಗಂಟೆ ಹೆಚ್ಚುವರಿ ವಿಚಾರಣೆ ನಡೆಸಲು ಸಿದ್ಧ ಎಂದು ಸುಪ್ರೀಂ ಪೀಠ ಅಭಿಪ್ರಾಯವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.