ಭಾಲ್ಕಿ: ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಅನುಭವ ಮಂಟಪ ಬರೀ ಕಟ್ಟಡವಲ್ಲ, ಅದು ಬದುಕಿಗೆ ಬೆಳಕು ನೀಡುವ ಅದ್ಭುತ ಮಂಟಪವಾಗಿದೆ ಎಂದು ರಾಜ್ಯಸಭೆ ಸದಸ್ಯ ಬಸವರಾಜ ಪಾಟೀಲ ಸೇಡಂ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ಸೋಮವಾರ ನಡೆದ ಸಿದ್ದೇಶ್ವರ ಸ್ವಾಮಿಗಳ ಪ್ರವಚನ ಕಾರ್ಯಕ್ರಮದಲ್ಲಿ ಹಿರೇಮಠ ಸಂಸ್ಥಾನ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಭಾಲ್ಕಿ ಹಿರೇಮಠದ ಲಿಂಗೈಕ್ಯ ಡಾ| ಚನ್ನಬಸವ ಪಟ್ಟದ್ದೇವರು ಕಲ್ಲು-ಮಣ್ಣು ಹೊತ್ತು ನಿರ್ಮಿಸಿದ ಅನುಭವ ಮಂಟಪದ ಜಾಗದಲ್ಲಿಯೇ ನೂತನ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ. ಅಂದು ಕೇವಲ 11 ಎಕರೆ ಭೂಮಿಯಲ್ಲಿದ್ದ ಅನುಭವ ಮಂಟಪಕ್ಕೆ ಈಗ 101 ಎಕರೆ ಜಾಗ ಲಭಿಸಿದೆ. ಈ ಸ್ಥಳದಲ್ಲಿ 6 ಅಂತಸ್ತಿನ 180 ಅಡಿ ಎತ್ತರದ ಭವ್ಯ ಮಂಟಪ ನಿರ್ಮಾಣ ಮಾಡಲಾಗುತ್ತಿದೆ. ಬರುವ ಐದು ವರ್ಷಗಳಲ್ಲಿ ಸುಮಾರು 5 ಸಾವಿರ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಅನುಕೂಲವಾಗುವಂತೆ ಅನುಭವ ಮಂಟಪ ನಿರ್ಮಿಸಲಾಗುತ್ತಿದೆ. ಬಸವಕಲ್ಯಾಣದ ಅನುಭವ ಮಂಟಪ ಆಧ್ಯಾತ್ಮಿಕ ಪಿಪಾಸುಗಳಿಗೆ ಜ್ಞಾನದ ದೇಗುಲವಾಗಿ ನಿರ್ಮಾಣವಾಗುತ್ತದೆ. ಈ ಅನುಭವ ಮಂಟಪದಲ್ಲಿ ಯಾತ್ರಾರ್ಥಿಗಳು 5 ರಿಂದ 6 ಗಂಟೆಗಳ ಕಾಲ ಧ್ಯಾನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯವಹಿಸಿ ಮಾತನಾಡಿ, ಬಸವರಾಜ ಪಾಟೀಲ ಸೇಡಂ ಅವರಿಗೆ ಗುರು ಬಸವಣ್ಣನವರು ತಮ್ಮ ಹೆಸರಿಟ್ಟು, ಬಸವಕಲ್ಯಾಣದಲ್ಲಿ ತಮ್ಮದೇಯಾದ ಬಿಟ್ಟು ಹೋದ ಕಾರ್ಯ ಮಾಡಲು ಕಳುಹಿಸಿಕೊಟ್ಟಿದ್ದಾರೆ. ಸೇಡಂ ಅವರು ತಮ್ಮ ಕಾಲಾವಧಿಯಲ್ಲಿ ಬಸವಕಲ್ಯಾಣದಲ್ಲಿ ಸುಂದರ ಅನುಭವ ಮಂಟಪ ನಿರ್ಮಿಸಿ ಇಲ್ಲಿಯ ಜನರಿಗೆ ಅನುಕೂಲ ಮಾಡಿಕೊಡಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಸೇರಿದಂತೆ ಇತರೆ ಅತಿಥಿ ಗಣ್ಯರನ್ನು ಸತ್ಕರಿಸಲಾಯಿತು. ಪ್ರೊ| ಶಂಭುಲಿಂಗ ಕಾಮಣ್ಣ ಸ್ವಾಗತಿಸಿದರು. ವೀರಣ್ಣಾ ಕುಂಬಾರ ನಿರೂಪಿಸಿದರು. ಚಂದ್ರಕಾಂತ ಬಿರಾದಾರ ವಂದಿಸಿದರು.