ನಮ್ಮ ಮನಸ್ಸು ಒಂದು ಚೌಕಟ್ಟಿನಂತೆ. ಅದರಲ್ಲಿ ಬೇಡದ, ಮನ ನೋಯಿಸುವ ವಿಚಾರಗಳು , ಆಗಿ ಹೋದ ಕಹಿ ಘಟನೆಗಳು ಕಪ್ಪು ಚುಕ್ಕೆಯಂತೆ ತುಂಬಿಕೊಳ್ಳುತ್ತವೆ.
ನಮ್ಮ ವಿಜಯತ್ತೆ ಅನುಭವಿ. ದೇಶ ವಿದೇಶ ಸುತ್ತಿದವರು. ಅನೇಕ ಪುಸ್ತಕಗಳನ್ನು ಓದಿದವರು. ತಮಗೆ ಸರಿ ಅನಿಸಿದ್ದನ್ನು ಆತ್ಮೀಯವಾದ ಭಾಷೆಯಲ್ಲಿ ಹೇಳಬಲ್ಲವರು. ಅವರು ಆಗಾಗ ಕೆಲವು ಹಿತನುಡಿಗಳನ್ನು ಹೇಳುತ್ತಾರೆ. ಅದನ್ನು ನಾನು, ವಿಜಯತ್ತೆಯ ವಿವೇಕವಾಣಿ ಎಂದು ಪಾಲಿಸುತ್ತೇನೆ.
ಮೊನ್ನೆ ಸಹೋದ್ಯೋಗಿಯೊಬ್ಬರ ಮಾತುಗಳಿಂದ ಬೇಜಾರಾಗಿದ್ದೆ. ಯಾವತ್ತೂ ಉದ್ಯೋಗದ ಟೆನ್ಸ್ ನ್‌ಗಳನ್ನು ಮನೆಗೆ ತರದ ನಾನು, ಆವತ್ತು ಸಪ್ಪೆ ಮುಖ ಹೊತ್ತು ತಿರುಗುತ್ತ ಮನೆಯವರಿಂದ, ಮಗನಿಂದ ಬೈಸಿಕೊಂಡಿದ್ದೆ. ವಿಜಯತ್ತೆ, ಏನಾಯಿತು ಅಂತ ಕೇಳಿದಾಗ- ಸಹೋದ್ಯೋಗಿಯ ನುಡಿಗಳು ಮತ್ತೆ ಮತ್ತೆ ನೆನಪಾಗಿ, ಮನಸ್ಸನ್ನು ಕೊರೆಯುತ್ತಿದೆ ಅಂತ ಹೇಳಿದೆ. ಆಗ ಅವರು ಹೇಳಿದ್ದು- ನಮ್ಮ ಮನಸ್ಸು ಒಂದು ಚೌಕಟ್ಟಿನಂತೆ. ಅದರಲ್ಲಿ ಬೇಡದ, ಮನ ನೋಯಿಸುವ ವಿಚಾರಗಳು , ಆಗಿ ಹೋದ ಕಹಿ ಘಟನೆಗಳು ಕಪ್ಪು ಚುಕ್ಕೆಯಂತೆ ತುಂಬಿಕೊಳ್ಳುತ್ತವೆ. ಬೇರೆಯವರು ನಮ್ಮನ್ನು ನೋಯಿಸಿದಾಗ ಅದನ್ನು ಮರೆತು ಬಿಡಲು ಸಾಧ್ಯವಾಗುವುದಿಲ್ಲ .ಆದರೆ, ಚೌಕಟ್ಟನ್ನು ಹಿಗ್ಗಿಸಿದರೆ ಆ ಕಪ್ಪು ಚುಕ್ಕೆ ಒಂದು ಮೂಲೆಗೆ ಸರಿಯುತ್ತದೆ. ಅಂದರೆ, ನಮ್ಮ ಮನಸ್ಸನ್ನು ವಿಶಾಲ ಮಾಡಿಕೊಂಡರೆ ಇಂಥ ಮನ ನೋಯಿಸುವ ಮಾತುಗಳು ಪಕ್ಕಕ್ಕೆ ಹೋಗಿ, ಸುವಿಚಾರಗಳಿಗೆ ಮನಸ್ಸಿನಲ್ಲಿ ಸ್ಥಳ ದೊರೆಯುತ್ತದೆ.
ಆ ಮಾತು ಕೇಳಿ, ನನ್ನ ದುಗುಡವೆಲ್ಲಾ ಮಾಯವಾಗಿ, ಮನಸ್ಸು ತಿಳಿಯಾಯಿತು.
-ಉಷಾ ರಮೇಶ್