ಸ್ಕ್ರೀನ್ ಮುಂಭಾಗದಲ್ಲಿಯೇ ನೆಲದ ಮೇಲೆ ಕೂರುತ್ತಿದ್ದೆವು. ವಿಷ್ಣು ದಾದಾ ಎಂಟ್ರಿ ಕೊಡುವಾಗ, ನಮ್ಮ ಉಮೇಶ ಆಯ್ದು ತಂದಿದ್ದ ಲಾಟರಿಗಳನ್ನೆಲ್ಲಾ ಸ್ಕ್ರೀನ್ ಕಡೆ ತೂರಿ, ಶಿಳ್ಳೆ ಹೊಡೆದು ಕುಣಿಯುತ್ತಿದ್ದ. ಅವನು “ವಿಷ್ಣು ದಾದಾನಿಗೆ’ ಎಂದಾಗ ನಾವು ಜೈಕಾರ ಹಾಕುತ್ತಿದ್ದೆವು. ಇದೂ ಕೂಡ ಕಂಡೀಷನ್ ಆಗಿತ್ತು. ಸ್ವಲ್ಪ ಸಮಯದ ನಂತರ ತೂರಿದ್ದ ಲಾಟರಿಗಳನ್ನೆಲ್ಲಾ ನಾವು ಪುನಃ ಕೂಡಿಡುತ್ತಿದ್ದೆವು. ಮತ್ತೆ ಸಾಹಸ ದೃಶ್ಯವೋ, ಚಿತ್ರಗೀತೆಯೋ ಶುರುವಾದಾಗ ತೂರಬೇಕಿತ್ತಲ್ಲಾಅದಕ್ಕೆ!
ನಾನಾಗ ತುಂಬಾ ಚಿಕ್ಕವನು. ನಾವಿದ್ದದ್ದು ಸಣ್ಣದೊಂದು ಹಳ್ಳಿಯಲ್ಲಿ. ಬೇಸಿಗೆ ಮತ್ತು ದಸರಾ ರಜೆಯಲ್ಲಿ ದೂರದ ಅಜ್ಜಿ ಊರಿಗೆ ಬಂದು ರಜೆಯ ಮಜಾ ಅನುಭವಿಸುವುದು ವಾಡಿಕೆ. ನಮ್ಮ ಹಳ್ಳಿಯಲ್ಲಿ ಸಿನಿಮಾ ಟಾಕೀಸ್ ಇರಲಿ, ಊರಲ್ಲೆಲ್ಲಾ ಹುಡುಕಾಡಿದರೂ ಪೋರ್ಟಬಲ್ ಬ್ಲ್ಯಾಕ್ ಅಂಡ್ ವೈಟ್ ಟಿ.ವಿ.ಯೂ ಇರಲಿಲ್ಲ. ರಜೆಗೆ ಅಜ್ಜಿ ಮನೆಗೆ ಬಂದಾಗ ಅಲ್ಲಿದ್ದ ಟೂರಿಂಗ್ ಟಾಕೀಸ್‌ನಲ್ಲಿ ಸಿನಿಮಾ ನೋಡುವುದೇ ನಮಗೆಲ್ಲಾ ದೊಡ್ಡ ಹಬ್ಬ. ಹಗಲು ಪ್ರದರ್ಶನವಿಲ್ಲದ ಕಾರಣ, ಸಿನಿಮಾ ಬಂದಾಗ ರಾತ್ರಿಯಾಗುವುದನ್ನೇ ಬಕಪಕ್ಷಿಯಂತೆ ಕಾಯುತ್ತಿದ್ದೆವು. ನಾನು ಮತ್ತು ನಮ್ಮಣ್ಣ ಚಿಕ್ಕವರಾದ್ದರಿಂದಾಗಿ, ನಮಗಿಂತಲೂ ನಾಲ್ಕೈದು ವರ್ಷದೊಡ್ಡವನಾದ ದೊಡ್ಡಮ್ಮನ ಮಗ ಉಮೇಶನೊಂದಿಗೆ ನಮ್ಮನ್ನು ಸಿನಿಮಾ ನೋಡಲು ಕಳುಹಿಸಿ ಕೊಡುತ್ತಿದ್ದರು. ನನಗೂ, ಅಣ್ಣನಿಗೂ ಸೇರಿ ಒಂದೇ ಟಿಕೆಟ್ ಸಾಕಾದರೆ, ಉಮೇಶನಿಗೆ ಪೂರ್ತಿಒಂದು ಟಿಕೆಟ್ ತೆಗೆದುಕೊಳ್ಳುತ್ತಿದ್ದರು.
ನಮ್ಮ ಉಮೇಶನೋ ವಿಷ್ಣು ದಾದಾನ ದೊಡ್ಡಅಭಿಮಾನಿ. ತನ್ನ ಹ್ಯಾಟಿನ ಮೇಲೆ “ವಿಷ್ಣುಪ್ರಿಯ’ ಎಂದು ಬರೆಸಿಕೊಳ್ಳುವಷ್ಟು ಅಭಿಮಾನ. ವಿಷ್ಣುವರ್ಧನ್ ಚಿತ್ರಗಳನ್ನಷ್ಟೇ ಅವನು ನೋಡುತ್ತಿದ್ದದ್ದು. ಸಿನಿಮಾಗಳಿಗೆ ಅವನೇ ನಮ್ಮನ್ನ ಕರೆದುಕೊಂಡು ಹೋಗಬೇಕಾದ್ದರಿಂದ, ಅವನೇನಾದರೂ ನಿರಾಕರಿಸಿದನೆಂದರೆ ನಮ್ಮ ಸಿನಿಮಾ ನೋಡುವ ಕನಸು ಕೈತಪ್ಪುತ್ತಿತ್ತು. ಅದಕ್ಕಾಗಿ ನಾವು ಅವನ ಮರ್ಜಿಗೆ ಸದಾ ಒಳಗಾಗುತ್ತಲೇ ಇರಬೇಕಾಗಿತ್ತು. ನಮ್ಮನ್ನು ಸಿನಿಮಾಗೆ ಕರೆದೊಯ್ಯಲು ಅವನದ್ದೊಂದು ಷರತ್ತು ಬೇರೆ. ಏನೆಂದರೆ, ಸಿನಿಮಾಗೆ ಹೋಗುವ ದಿನ ನಾವು ಸಿಂಗಲ್ ನಂಬರ್ ಲಾಟರಿ ಮಾರುವ ಬಜಾರ್‌ಗೆ ಹೋಗಿ, ಠೇವಣಿ ಕಳೆದುಕೊಂಡು ಬಿದ್ದಿರುತ್ತಿದ್ದ ಲಾಟರಿ ಟಿಕೆಟುಗಳನ್ನೆಲ್ಲಾ ಸಾಧ್ಯವಾದಷ್ಟು ಕೂಡಿಟ್ಟುಕೊಳ್ಳಬೇಕಿತ್ತು. ಅಲ್ಲದೇ, ಅವುಗಳನ್ನೆಲ್ಲಾ ರಾತ್ರಿ ಸಿನಿಮಾಗೂ ಕೊಂಡೊಯ್ಯಬೇಕಿತ್ತು. ನಮ್ಮ ಟಾಕೀಸಿನಲ್ಲಿ ಎರಡು ವಿಭಾಗವಿತ್ತು. ಒಂದು ನೆಲ ಅದು ಮುಂದಿನದ್ದು, ಮತ್ತೂಂದು ಖುರ್ಚಿ ಅದು ಹಿಂದಿನದ್ದು. ಕಡಿಮೆ ದರವಾದ್ದರಿಂದ ನಾವು ನೆಲದ ಟಿಕೆಟ್ ಕೊಳ್ಳುತ್ತಿದ್ದೆವು.
ಸಿನಿಮಾ ಪ್ರಾರಂಭವಾದಾಗ ಸ್ಕ್ರೀನ್ ಮುಂಭಾಗದಲ್ಲಿಯೇ ನೆಲದ ಮೇಲೆ ಕೂರುತ್ತಿದ್ದೆವು. ವಿಷ್ಣು ದಾದಾ ಎಂಟ್ರಿ ಕೊಡುವಾಗ, ನಮ್ಮ ಉಮೇಶ ಆಯ್ದು ತಂದಿದ್ದ ಲಾಟರಿಗಳನ್ನೆಲ್ಲಾ ಸ್ಕ್ರೀನ್ ಕಡೆ ತೂರಿ, ಶಿಳ್ಳೆ ಹೊಡೆದು ಕುಣಿಯುತ್ತಿದ್ದ. ಅವನು “ವಿಷ್ಣು ದಾದಾನಿಗೆ’ ಎಂದಾಗ ನಾವು ಜೈಕಾರ ಹಾಕುತ್ತಿದ್ದೆವು. ಇದೂ ಕೂಡ ಕಂಡೀಷನ್ ಆಗಿತ್ತು. ಸ್ವಲ್ಪ ಸಮಯದ ನಂತರ ತೂರಿದ್ದ ಲಾಟರಿಗಳನ್ನೆಲ್ಲಾ ನಾವು ಪುನಃ ಕೂಡಿಡುತ್ತಿದ್ದೆವು. ಮತ್ತೆ ಸಾಹಸ ದೃಶ್ಯವೋ, ಚಿತ್ರಗೀತೆಯೋ ಶುರುವಾದಾಗ ತೂರಬೇಕಿತ್ತಲ್ಲಾ, ಅದಕ್ಕೆ;
ಉಮೇಶನ ಆಜ್ಞೆಯನ್ನು ಪಾಲಿಸಿ ಹೀಗೆಲ್ಲಾ ಮಾಡುವಾಗ, ಸಹ ವೀಕ್ಷಕರು ಬೈದು ಶಾಪ ಹಾಕಿದ್ದೂ ಇದೆ. ಕೆಲವೊಮ್ಮೆ ಟಾಕೀಸಿನವರೇ ಬಂದು ಬೈಯ್ದು, ಲಾಟರಿ ಕಿತ್ತುಕೊಂಡು ನಮ್ಮನ್ನು ಸುಮ್ಮನಿರಿಸಿದ್ದೂ ಇದೆ. ಇದಕ್ಕೆ ತದ್ವಿರುದ್ಧವಾಗಿ ಭಾವನಾತ್ಮಕ ಅಥವಾ ದುಃಖಮಯ ಸನ್ನಿವೇಶಗಳಲ್ಲಿ ಉಮೇಶ ಗೋಳ್ಳೋ ಎಂದು ಅಳುತ್ತಾ ಕಣ್ಣೀರು ಸುರಿಸುತ್ತಿದ್ದ. ಅವನನ್ನು ನೋಡಿ ನಾವು ಜೋರಾಗಿ ನಕ್ಕು ಬೈಸಿಕೊಂಡ ಘಟನೆಗಳೂ ನಡೆದಿವೆ. ಹೀಗೆ, ಟೂರಿಂಗ್ ಟಾಕೀಸ್‌ನಲ್ಲಿ ಕುಳಿತು ಹತ್ತಾರು ವಿಷ್ಣು ವರ್ಧನ್ ಸಿನಿಮಾಗಳ ಮಜಾ ಅನುಭವಿಸಿದ್ದೇವೆ.
ಈಗೆಲ್ಲಾ, ನಿರ್ಧರಿಸಿದ ನಂಬರಿನ ಸೀಟಿನಲ್ಲಿ ಕುಳಿತು, ತುಟಿ ಪಿಟಕ್ ಎನ್ನದೆ ಸಿನಿಮಾ ವೀಕ್ಷಿಸುವಾಗ ಹಳೆಯದೆಲ್ಲಾ ನೆನಪಾಗಿ ನಗು ಬರುತ್ತದೆ..
-ಪ.ನಾ.ಹಳ್ಳಿ.ಹರೀಶ್ ಕುಮಾರ್