Advertisement
ಬೆಳಗಾವಿ ಅಂದರೆ ಕಬ್ಬಿನ ರಾಜಧಾನಿ ಅಂತಾರೆ. ವಾಸ್ತವ ಹೀಗಿದ್ದರೂ, ಹುಕ್ಕೇರಿ ತಾಲೂಕಿನ ಯಮಕನ ಮರಡಿ ಗ್ರಾಮದ ಬಸವರಾಜ ಮಲ್ಲಪ್ಪ ಗಜಬರೆ ಪೇರಲೆ ಕೃಷಿಯ ಹಿಂದೆ ಬಿದ್ದು ಲಾಭ ಮಾಡುತ್ತಿದ್ದಾರೆ.
ಪಾರಂಪರಿಕವಾಗಿ ಬೆಳೆದುಕೊಂಡು ಬಂದಿದ್ದ ಕಬ್ಬು ಕೃಷಿಯನ್ನು ತೊರೆದಿದ್ದು ಇವರು ಬುದ್ದಿ ಬಂದಾಗ ಮಾಡಿದ ಮೊದಲ ಕೆಲಸ. ತರಕಾರಿ ಕೃಷಿಗೆ ಒಂದೆಕರೆಯನ್ನು ಪಳಗಿಸಿದರು. ಅಲ್ಲಿ ಟೊಮೆಟೊ, ಬದನೆ, ಸೌತೆ ಮತ್ತಿತರ ಬೆಳೆಗಳನ್ನು ಬೆಳೆದು ಉತ್ತಮ ಫಸಲು ಪಡೆದುಕೊಂಡರು. ತರಕಾರಿ ಬೆಳೆದ ಕಾರಣದಿಂದ, ಅದುವರೆಗೂ ಕಬ್ಬಿನಿಂದ ವಾರ್ಷಿಕವಾಗಿ ದೊರೆಯುತ್ತಿದ್ದ ಮೊತ್ತದ ಬದಲಿಗೆ ದಿನ ನಿತ್ಯ ಕಾಸು ಸಿಗಲಾರಂಭಿಸಿತು. ಹೊಸ ಪ್ರಯೋಗಕ್ಕೆ ತೆರೆದುಕೊಂಡ ಇವರು, ಪೇರಲೆ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡು 2016 ರ ಜೂನ್ ತಿಂಗಳಿನಲ್ಲಿ ಮಹಾರಾಷ್ಟ್ರದಿಂದ ‘ಜಿ ಲಾಸ್’ ತಳಿಯ ಪೇರಲೆ ಗಿಡಗಳನ್ನು ತಂದು ಮೂವತ್ತು ಗುಂಟೆಯಲ್ಲಿ ನಾಟಿ ಮಾಡಿದ್ದಾರೆ. ಗಿಡದಿಂದ ಗಿಡಕ್ಕೆ ಐದು ಅಡಿ ಸಾಲಿನ ನಡುವೆ ಹತ್ತು ಅಡಿ ಕಾಯ್ದುಕೊಂಡಿದ್ದಾರೆ. ಒಂದು ಅಡಿ ಘನ ಗಾತ್ರದ ಗುಣಿ ತೆಗೆದು ಪ್ರತೀ ಗುಣಿಗೆ ಎರಡು ಬುಟ್ಟಿಯಂತೆ ಕಾಂಪೋಸ್ಟ ಗೊಬ್ಬರ ತುಂಬಿಸಿ ಗಿಡ ನಾಟಿ ಮಾಡಿದ್ದಾರೆ.
Related Articles
Advertisement
ಮೂರು ದಿನಕ್ಕೊಮ್ಮೆ ಪೇರಲೆ ಕಾಯಿಗಳ ಕಟಾವು. ತಂಪು ಹವಾಮಾನವಿದ್ದರೆ ಎರಡು ದಿನಕ್ಕೆ ಕತ್ತರಿಸುತ್ತಾರೆ. ಒಂದು ಕೊಯ್ಲಿಗೆ 80-100 ಕೆ.ಜಿ ಪೇರಲ ಕಾಯಿಗಳು ಸಿಗುತ್ತವೆ. ಟೊಂಗೆಯಲ್ಲಿನ ಕಾಯಿ ಬಲಿತಿರುವಾಗ ಇನ್ನೊಂದು ಹೆರೆಯಲ್ಲಿ ಮಿಡಿಗಳು ಬೆಳವಣಿಗೆಯ ಹಂತದಲ್ಲಿರುತ್ತವೆ. ಕೊಯ್ಲಿಗೆ ಸಿದ್ದಗೊಂಡ ಪೇರಲೆಯನ್ನು ಕತ್ತರಿಸಿದ ನಂತರ, ಅದು ಬೆಳೆದಿದ್ದ ಟೊಂಗೆಯ ಮೇಲ್ಭಾಗವನ್ನು ಕತ್ತರಿಸಿ ಬಿಡುತ್ತಾರೆ. ಕತ್ತರಿಸಿದ ಸ್ಥಳದ ಕೆಳ ಭಾಗದಲ್ಲಿ ಪುನಃ ಹೊಸ ಎಲೆಗಳು ಹುಟ್ಟಿಕೊಳ್ಳುತ್ತವೆ. ಬೆಳವಣಿಗೆ ಪ್ರಕ್ರಿಯೆಗೊಳಪಟ್ಟ ಹೂವು ನೆರೆಯುತ್ತದೆ. ಮಿಡಿ ಕಾಯಿ ಕಾಣಿಸಿಕೊಳ್ಳುತ್ತದೆ. ಸಣ್ಣ ಕಾಯಿಂದ ಕೊಯ್ಲಿಗೆ ಬರುವಷ್ಟು ದೊಡ್ಡದಾಗಲು ಇಪ್ಪತ್ತು ದಿನದ ಅವಧಿಯನ್ನು ಪೇರಲೆ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ಬಸವರಾಜ್.
ಮಾರುಕಟ್ಟೆಯಲ್ಲಿ ಪೇರಲೆ ಹಣ್ಣಿಗೆ ಬೇಡಿಕೆ, ದರ ಹೆಚ್ಚಿದ್ದರೆ ಗಿಡಗಳಿಗೆ ಉಣ್ಣಿಸುವ ರಸಗೊಬ್ಬರ ಪ್ರಮಾಣವನ್ನು ಜಾಸ್ತಿಗೊಳಿಸುತ್ತಾರೆ. ಎರಡೇ ವಾರದಲ್ಲಿ ಕಾಯಿ ಕಟಾವಿಗೆ ಸಿದ್ದಗೊಳ್ಳುತ್ತದೆ. ಪೇರಲೆಗೆ ರೋಗ ಬಾಧೆ ಕಡಿಮೆ. ಇದುವರೆಗೆ ರೋಗ ನಿರ್ವಣೆಗೆಂದು ಔಷಧಿ ಸಿಂಪಡಿಸಿದ ಉದಾಹರಣೆಯೇ ಇಲ್ಲ ಎನ್ನುತ್ತಾರೆ ಮಲ್ಲಪ್ಪ. ಹನ್ನೆರಡು ತಿಂಗಳೂ ಕಾಯಿ ಲಭ್ಯವಿರುತ್ತದೆ.
ಪೇರಲೆ ಕಾಯಿಗಳ ಗಾತ್ರ ಎಂಥಹವರನ್ನೂ ತನ್ನತ್ತ ಸೆಳೆಯವ ರೀತಿಯಲ್ಲಿದೆ. ಮೂರು ಕಾಯಿಗಳನ್ನು ಇಟ್ಟರೆ ಒಂದು ಕೆಜಿ ತೂಗುತ್ತದೆ. ಬಸವರಾಜ್ ಇದುವರೆಗೆ ಎರಡು ಟನ್ ಪೇರಲೆ ಮಾರಾಟ ಮಾಡಿದ್ದಾರೆ. ಕಿಲೋಗ್ರಾಂ ಪೇರಲೆಗೆ ನಲವತ್ತು ರೂ. ದರ ಸಿಗುತ್ತಿದೆ. ಒಮ್ಮೆ ನಾಟಿ ಮಾಡಿದರೆ ಈ ಗಿಡಗಳಿಂದ ಹತ್ತು ವರ್ಷಗಳ ವರೆಗೆ ಇಳುವರಿ ಪಡೆಯಬಹುದು. ಹತ್ತು ವರ್ಷಗಳ ನಂತರ ಗಿಡವನ್ನು ಬುಡದಿಂದ ಒಂದು ಅಡಿ ಮೇಲ್ಭಾಗದಲ್ಲಿ ಕತ್ತರಿಸಿದರೆ ಪುನಃ ಹೊಸ ಉತ್ಸಾಹದಿಂದ ಚಿಗಿತುಕೊಳ್ಳುತ್ತದೆ. ಇಳುವರಿ ಸಿಗುವ ಸಮಯ ಪುನಃ ಹತ್ತು ವರ್ಷಕ್ಕೆ ಏರಿಕೆಯಾಗುತ್ತದೆ.
ವರ್ಷಕ್ಕೆ ಸಿಗುವ ಕಬ್ಬಿನ ಹಣಕ್ಕಿಂತ ಪೇರಲೆ ಗಳಿಸಿಕೊಡುವ ದಿನ ನಿತ್ಯದ ಆದಾಯ ಇವರನ್ನು ಸಂತೃಪ್ತಿಗೊಳಿಸಿದೆ. ಬೇರೆಯವರ ಭೂುಯನ್ನು ಲಾವಣಿ ಪಡೆದು ಇನ್ನು ಎರಡು ಸಾವಿರ ಪೇರಲೆ ಗಿಡಗಳನ್ನು ನಾಟಿ ಮಾಡುವ ಆಲೋಚನೆ ಮನಸ್ಸಿನಲ್ಲಿ ತುಂಬಿಕೊಂಡಿದ್ದಾರೆ
ಕೋಡಕಣಿ ಜೈವಂತ ಪಟಗಾರ