Advertisement

ಬೆಳೆ ವಿಮೆ ನೋಂದಣಿ ಕಾರ್ಯ ಚುರುಕುಗೊಳಿಸಿ

11:28 AM Jun 09, 2019 | Suhan S |

ಹಾವೇರಿ: ಮುಂಗಾರು ಹಂಗಾಮಿನ ಬೆಳೆ ವಿಮೆ ನೋಂದಣಿ ಕಾರ್ಯವನ್ನು ಚುರುಕುಗೊಳಿಸಬೇಕು. ವಿಮಾ ನೋಂದಣಿಗೆ ಬರುವ ರೈತರಿಗೆ ಮೂಲ ಆರ್‌ಟಿಸಿ (ಪಹಣಿ) ಬೇಡಿಕೆ ಸಲ್ಲಿಸದೆ ಝರಾಕ್ಸ್‌ ಪ್ರತಿ ಮಾನ್ಯ ಮಾಡುವಂತೆ ಜಿಲ್ಲೆಯ ವಿವಿಧ ವಾಣಿಜ್ಯ ಬ್ಯಾಂಕ್‌, ಸಹಕಾರಿ ಬ್ಯಾಂಕ್‌ ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚಿಸಿದರು.

Advertisement

ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ(ವಿಮಾ) ಯೋಜನೆಯಡಿ ಬೆಳೆವಿಮೆ ನೋಂದಣಿ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ತಹಶೀಲ್ದಾರ, ಕೃಷಿ, ತೋಟಗಾರಿಕೆ, ಬ್ಯಾಂಕ್‌ ಹಾಗೂ ವಿಮಾ ಕಂಪನಿ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ರೈತರಿಗೆ ಯಾವುದೇ ತರದ ಅನಾನುಕೂಲ ಆಗದಂತೆ ಬೆಳೆ ನೋಂದಣಿಗೆ ಸರಳವಾಗಿ ರೈತರು ನೋಂದಾಯಿಸಿಕೊಳ್ಳಲು ಬ್ಯಾಂಕ್‌ ಅಧಿಕಾರಿಗಳು ಸಹಕರಿಸುವಂತೆ ಸೂಚಿಸಿದರು.

ಬೆಳೆವಿಮೆ ನೋಂದಣಿಗೆ ರೈತರ ಬ್ಯಾಂಕ್‌ ಖಾತೆ ಪುಸ್ತಕದ ಪ್ರತಿ, ಆಧಾರ್‌ ಕಾರ್ಡ್‌ ಜೊತೆಗೆ ಆರ್‌ಟಿಸಿ(ಪಹಣಿ) ಸಲ್ಲಿಸುವುದು ಕಡ್ಡಾಯ. ಆದರೆ ಬ್ಯಾಂಕರ್ಗಳು ತಹಶೀಲ್ದಾರ್‌ರ ಸಹಿ ಹಾಗೂ ಮುದ್ರೆ ಇರುವ ಆರ್‌ಟಿಸಿ ಪ್ರತಿಯನ್ನೇ ಸಲ್ಲಿಸುವಂತೆ ರೈತರಿಗೆ ಒತ್ತಾಯ ಮಾಡಬಾರದು. ಹಾಗೂ ಬೆಳೆ ದೃಢೀಕರಣ ಪತ್ರವು ಅಗತ್ಯವಿಲ್ಲ. ಆರ್‌ಟಿಸಿಯ ಮೂಲ ಪ್ರತಿಯ ಬದಲು ಝರಾಕ್ಸ್‌ ಪ್ರತಿ ಅಥವಾ ಆನ್‌ಲೈನ್‌ ಪ್ರತಿಯನ್ನು ಸಲ್ಲಿಸಿದರೆ ಅದನ್ನು ಸ್ವೀಕರಿಸಿ ಮಾನ್ಯ ಮಾಡಬೇಕು. ಹೆಚ್ಚುವರಿ ಹಣ ವಸೂಲಿ, ರೈತರಿಗೆ ಅನಗತ್ಯ ದಾಖಲೆಗಳ ಬೇಡಿಕೆ ಸಲ್ಲಿಸದೆ ಅವರಲ್ಲಿ ಯಾವುದೇ ಗೊಂದಲ ಉಂಟು ಮಾಡದೆ ಹೆಚ್ಚು ರೈತರು ಕಾಲಮಿತಿಯೊಳಗೆ ಬೆಳೆ ವಿಮೆ ನೋಂದಣಿಗೆ ಪ್ರೋತ್ಸಾಹಿಸುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಹಾಗೂ ನೋಂದಣಿ ಏಜೆನ್ಸಿಗಳಿಗೆ ಸೂಚನೆ ನೀಡಿದರು.

ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ(ವಿಮಾ) ಯೋಜನೆಯಡಿ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ 36 ಬೆಳೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮೆಕ್ಕೆಜೋಳ ಹಾಗೂ ಸವಣೂರ ತಾಲೂಕಿನಲ್ಲಿ ಮೆಕ್ಕೆಜೋಳದ ಜೊತೆಗೆ ನೆಲಗಡಲೆ, ಹಾನಗಲ್ಲ ತಾಲೂಕಿನಲ್ಲಿ ಮೆಕ್ಕೆಜೋಳದ ಜೊತೆಯಲ್ಲಿ ನೀರಾವರಿ ಭತ್ತ ಹಾಗೂ ವಾಣಿಜ್ಯ ಬೆಳೆಗಳ ವಿಮೆ ನೋಂದಣಿಗೆ ಅಧಿಸೂಚಿತ ಬೆಳೆಯಾಗಿ ಪರಿಗಣಿಸಲಾಗಿದೆ ಎಂದು ತಿಳಿಸಿದರು.

ಬೆಳೆ ವಿಮೆ ನೋಂದಣಿಗೆ ಜುಲೈ 30ಕೊನೆಯ ದಿನವಾಗಿದೆ. ಸೂರ್ಯಕಾಂತಿ ಬೆಳೆಗೆ ವಿಮೆ ಮಾಡಿಸಲು ಆಗಸ್ಟ್‌ 14 ಕೊನೆಯ ದಿನಾಂಕವಾಗಿದೆ. ಮುಂಗಾರು ಹಂಗಾಮಿನಲ್ಲಿ ವಿವಿಧ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ನಿಗದಿಪಡಿಸಿದ ವಿಮಾ ಮೊತ್ತಕ್ಕೆ ಶೇ. 2ರಷ್ಟು ಕಂತುಗಳನ್ನು ಪಾವತಿಸಬೇಕಾಗುತದೆ. ವಾಣಿಜ್ಯ ಬೆಳೆಗಳಿಗೆ ಶೇ.5ರಷ್ಟು ವಿಮಾ ಕಂತನ್ನು ಪಾವತಿಸಬೇಕಾಗುತ್ತದೆ. ಬೆಳೆವಾರು ವಿಮಾ ಮೊತ್ತ ಹಾಗೂ ಇಂಡೆಮ್ನಿಟಿ ಮಟ್ಟ ಹಾಗೂ ವಿಮಾ ಕಂತಿನ ವಿವರನ್ನು ಈಗಾಗಲೇ ಕೃಷಿ ಇಲಾಖೆ ಮೂಲಕ ರೈತರಿಗೆ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿದರು.

Advertisement

ಬೆಳೆಸಾಲ ಮಾಡಿದ ರೈತರು ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ಸಾಲ ಮಾಡದ ಇತರ ರೈತರು ಬೆಳೆವಿಮೆ ಮಾಡಿಸಲು ಪ್ರೋತ್ಸಾಹಿಸಬೇಕು. ಬ್ಯಾಂಕ್‌ ಅಧಿಕಾರಿಗಳು ಸಾಲಮಾಡದ ರೈತರು ನೋಂದಣಿಗೆ ಬಂದಾಗ ಸಹಕರಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ 2.80 ಲಕ್ಷ ರೈತರು ಮುಂಗಾರು ಹಂಗಾಮಿನ ಕೃಷಿ ಹಿಡುವಳಿದಾರರಿದ್ದು ಇದರಲ್ಲಿ ಕನಿಷ್ಠ ಶೇ.40ರಷ್ಟು ರೈತರಾದರೂ ಬೆಳೆ ವಿಮೆ ವ್ಯಾಪ್ತಿಗೆ ಒಳಪಡಬೇಕು. ತಾಲೂಕುವಾರು ಗುರಿ ನಿಗಧಿಪಡಿಸಿ ಕಾಲಮಿತಿಯೊಳಗೆ ನೋಂದಣಿಗೆ ಕ್ರಮವಹಿಸಲು ತಹಶೀಲ್ದಾರ್‌, ಕೃಷಿ, ತೋಟಗಾರಿಕೆ ಹಾಗೂ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಬೆಳೆವಿಮೆ ಕುರಿತಂತೆ ರೈತರಿಗೆ ಮಾಹಿತಿ ನೀಡಲು ವ್ಯಾಪಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಕೃಷಿ, ತೋಟಗಾರಿಕೆ ಹಾಗೂ ವಿಮಾ ಕಂಪನಿಗಳಿಗೆ ಸೂಚಿಸಿದರು.

ಬಿತ್ತನೆ ಪೂರ್ವದಲ್ಲೂ ವಿಮಾ ನೋಂದಾಯಿಸಿಕೊಳ್ಳಬಹುದು. ಬಿತ್ತನೆ ಸಂದರ್ಭದಲ್ಲಿ ಬೆಳೆಗಳು ಬದಲಾದರೆ ಬೆಳೆ ದೃಢೀಕರಣ ಪತ್ರ ನೀಡಿ ತಿದ್ದುಪಡಿ ಮಾಡಿ ಪರಿಷ್ಕೃತ ವಿಮಾ ಕಂತನ್ನು ರೈತರು ಪಾವತಿಸಬೇಕಾಗುತ್ತದೆ. ಹೆಚ್ಚುವರಿ ಹಣ ನೀಡಿದರೆ ವಾಪಸ್‌ ನೀಡಬೇಕಾಗುತ್ತದೆ. ಈ ವರ್ಷ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಳಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ನ್ಪೋಟ್, ಗುಡುಗು-ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಬೆಳೆ ಹಾನಿಗೂ ನಷ್ಟದ ನಿರ್ಧಾರ ಮಾಡಿ ನಷ್ಟ ಪರಿಹಾರ ಇತ್ಯರ್ಥಪಡಿಸಲು ಮಂಜೂರಾತಿ ನೀಡಲಾಗಿದೆ. ಕಟಾವಿನ ನಂತರ ಒಣಗಲು ಬಿಟ್ಟ ಫಸಲು ಪ್ರಾಕೃತಿಕ ವಿಕೋಪದಿಂದ ಹಾನಿಯಾದರೆ ಎರಡು ವಾರದಲ್ಲಿ ನಷ್ಟ ಪರಿಹಾರ ನಿರ್ಧರಿಸಲು ಕಂಪನಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ವಿವಿಧ ತಾಲೂಕಿನ ತಹಶೀಲ್ದಾರ್‌ಗಳು, ಬ್ಯಾಂಕ್‌ ಅಧಿಕಾರಿಗಳು ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next