ಇಂಗ್ಲಿಷ್ ಪದಗಳ ಮೂಲ ಯಾವುದು ಅಂತ ಕೊಂಚ ತಿಳಿದುಕೊಂಡರೆ ಅವುಗಳಿಗೆ ಸಂಬಂಧಿಸಿದ ಪದಗಳನ್ನು ನೆನಪಿಟ್ಟುಕೊಳ್ಳುವುದು ಸುಲಭವಾಗುತ್ತದೆ.
ವ್ಯಕ್ತಿತ್ವಕ್ಕೆ ಸಂಬಂಧಿಸಿದಂತೆ ಹತ್ತು ಪದಗಳನ್ನು ತಿಳಿಯುವುದಾದರೆ ಮೊತ್ತಮೊದಲನೆಯದ್ದು egoistic. ಪ್ರತಿಯೊಂದು ನಿರ್ಧಾರವನ್ನೂ “ತನ್ನ ಸ್ವಂತಕ್ಕೇನು ಲಾಭ? ತನಗೆ ಎಷ್ಟರ ಮಟ್ಟಿಗೆ ಹೊಗಳಿಕೆ ಸಿಗಬಹುದು?’ ಎಂಬ ಪ್ರಶ್ನೆಗೆ ಉತ್ತರಿಸುವ ಮೂಲಕವೇ ತೆಗೆದುಕೊಳ್ಳುವುದಾದರೆ ಅಂತಹ ವ್ಯಕ್ತಿ ಬಹಳ egoistic (ಅಹಂಭಾವಿ) ಎನ್ನುವುದುಂಟು. ಪ್ರತಿ ಮಾತಿನಲ್ಲಿ ತಮ್ಮನ್ನೇ ಹೊಗಳಿಕೊಳ್ಳುವವರನ್ನು ನೋಡಿರಬಹುದು. “ಓ ಅದಾ! ಅದು ಬಹಳ ಸುಲಭ. ನಾನೇ ಎಲ್ಲ ಕೆಲಸ ಮಾಡಿದ್ದು’ ಎನ್ನುವವರಿಗೆ egoistic ಎನ್ನುತ್ತಾರೆ. ಯಾರಿಗೇ ಆಗಲಿ, ಸಹಾಯ ಮಾಡುವುದರಲ್ಲೇ ಖುಷಿ ಕಾಣುವವರು. ತಮ್ಮ ಕೆಲಸ ಬದಿಗೊತ್ತಿ, ಅವರಿವರ ಕೆಲಸ ಮಾಡುವುದರಲ್ಲೇ ಖುಷಿ ಕಾಣುವವರಾದರೆ ಅವರು Altruist (ಲೋಕ ಚಿಂತನಾಸಕ್ತ) ಗಳು.
ಸುತ್ತಲಿನವರು ಮಾತಿನ ರಾಶಿಯನ್ನೇ ಪೇರಿಸುತ್ತಿದ್ದರೂ, ತಾನು ಮಾತ್ರ ಸುಮ್ಮನೇ ಇದ್ದುಬಿಡುವ, ತನ್ನೊಳಗೆ ಚಿಂತನೆಯನ್ನೋ, ಚಿಂತೆಯನ್ನೋ ಮಾಡುವವನು introvert (ಅಂತರ್ಮುಖಿ). ಅನಿಸಿದ್ದರ ಬಗ್ಗೆಲ್ಲಾ ಮಾತಿನ ಮಹಲು ಕಟ್ಟುವವರನ್ನು ಎಲ್ಲರೂ extrovert (ಬಹಿರ್ಮುಖಿ) ಎನ್ನುತ್ತಾರಷ್ಟೇ. ಎಷ್ಟು ಬೇಕೋ, ಅಷ್ಟು ಮಾತ್ರ ಮಾತನಾಡುವವರಿಗೂ ಒಂದು ಹೆಸರುಂಟು. ಅವರು ambivert (ಸಂತುಲಿತ ಮಾನಸ).
ಈ ಜಗತ್ತೇ ಸರಿ ಇಲ್ಲ, ಜನರೆಲ್ಲ ಕೆಟ್ಟು ಹೋಗಿದ್ದಾರೆ ಎಂದು ಸದಾ ಪ್ರಲಾಪಿಸುತ್ತ, ಕಂಡದ್ದರಲ್ಲೆಲ್ಲ ತಪ್ಪು ಹುಡುಕುತ್ತ ಇದ್ದರೆ ಅವರು ಖಂಡಿತ misanthrope (ಲೋಕ ವಿಮುಖಿ). ಇನ್ನು ಕೆಲವರು ಹಾಗಲ್ಲ. ಹೆಂಗಸರೆಲ್ಲ ಕೆಟ್ಟವರು ಎಂದು ಮೊದಲೇ ನಿರ್ಧಾರ ಮಾಡಿಬಿಟ್ಟಿರುತ್ತಾರೆ.
“ಮದುವೆ ಎಂಬುದೊಂದು ನಾಟಕ. ಅಂತರಂಗದಲ್ಲಿ ಬದ್ಧತೆ ಇದ್ದರಾಯಿತು’ ಎಂಬ ಭಾವನೆಯಲ್ಲಿ ಜೀವಿಸುವವರಿಗೆ misogamist (ವಿವಾಹ ದ್ವೇಷಿ) ಎಂದರೆ, ಧ್ಯಾನ, ಚಿಂತನೆ, ಸರಳವಾದ ಬದುಕು ಇವುಗಳನ್ನೇ ನೆಚ್ಚಿಕೊಂಡಿರುವಾತನಿಗೆ ascetic (ಜೀವನಪ್ರೇಮಿ).
ಇಷ್ಟೆಲ್ಲ ಪದಗಳಿಗೆ ಮೂಲ ಕಾರಣವಾದ ಈಗೋ ಎಂಬ ಪದಕ್ಕೆ ಮೂಲಕತೆಯೇನಾದರೂ ಇದೆಯೇ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.
ಸ್ವಯಂಪ್ರಭಾ ಕೆ.