Advertisement

ಡೆಸ್ಕ್ ಮೇಲೆ ಇಂಗ್ಲೀಷ್‌

05:07 PM Jul 11, 2017 | Team Udayavani |

ಆವತ್ತು ಪದವಿಯ ಮೂರನೇ ಸೆಮಿಸ್ಟರ್‌ ಪರೀಕ್ಷೆಗಳು ನಡೆಯುತ್ತಿದ್ದವು. ನಮಗೆ ಬೇರೆಲ್ಲಾ ವಿಷಯಗಳಿಗಿಂತ ಇಂಗ್ಲೀಷ್‌ ಎಂದರೆ ತುಂಬ ಕಷ್ಟದ ವಿಷಯ. ಆದ್ದರಿಂದ ಇಡೀ ರಾತ್ರಿ ಓದಿಕೊಂಡು ಹೋಗಿದ್ದೆವು. ಪರೀಕ್ಷೆಗೆ ಹಾಜರಾಗುವ ಮುನ್ನ ನಮ್ಮ ರೂಂ ನಂಬರ್‌, ಯಾವ ಡೆಸ್ಕ್ ಎಂದು ನೋಡಿಕೊಂಡು ಹೊರಬಂದೆವು. ಮೇಲ್ವಿಚಾರಕರು ಇನ್ನೂ ಬಂದಿರಲಿಲ್ಲ. ಪರೀಕ್ಷೆ ಶುರುವಾಗಲು ಇನ್ನೂ ಐದ್ಹತ್ತು ನಿಮಿಷ ಸಮಯ ಇತ್ತು. 

Advertisement

ಸ್ನೇಹಿತರೊಡನೆ ಮಾತನಾಡುತ್ತಿದ್ದಾಗಲೇ ಮೇಲ್ವಿಚಾರಕರು ಬಂದರು. ಎಲ್ಲರೂ ಗಡಿಬಿಡಿಯಿಂದ ಕ್ಲಾಸ್‌ ಒಳಕ್ಕೆ ನುಗ್ಗಿದೆವು. ನನ್ನ ಸ್ಥಳದಲ್ಲಿ ಬೇರೊಬ್ಬ ಕುಳಿತಿದ್ದ. “ಇದು ನನ್ನ ಡೆಸ್ಕ್. ಇಲ್ಲೇಕೆ ಕುಳಿತುಕೊಂಡಿದ್ದೀಯಾ?’ ಎಂದು ಕೇಳಿದೆ. ಅವನು ತುಂಬ ಗಾಬರಿಯಾಗಿ “ಇದು ನನ್ನ ಡೆಸ್ಕಪ್ಪಾ’ ಎಂದು ವಾದಿಸತೊಡಗಿದ. ನನಗೆ ಅಚ್ಚರಿ ಅನಿಸಿತು ಇವನ್ಯಾಕೆ ಇಷ್ಟು ಸಿಟ್ಟಾಗುತ್ತಿದ್ದಾನೆ ಅಂತ. ಅಷ್ಟರಲ್ಲಿ ಪರೀಕ್ಷೆ ಮೇಲ್ವಿಚಾರಕರು ಬಂದ್ರು. ವಿಷಯ ತಿಳಿದು ಇಬ್ಬರದೂ ಹಾಲ್‌ಟಿಕೆಟ್‌ ಪರೀಕ್ಷಿಸಿದರು. ಅವನು ಕೂತಿದ್ದ ಡೆಸ್ಕ್ ನನ್ನದೇ ಆಗಿತ್ತು. ಅವನು ಗೊಣಗಿಕೊಂಡೇ ಅಲ್ಲಿಂದ ಎದ್ದು ಅವನ ಜಾಗಕ್ಕೆ ಹೋದ.

ಅವನು ಅವಸರದಲ್ಲಿ ರಿಜಿಸ್ಟರ್‌ ನಂಬರ್‌ ಕನ್‌ಫ್ಯೂಸ್‌ ಮಾಡಿಕೊಂಡಿದ್ದಾನೆ ಅಂತ ಕಡೆಗೂ ನನ್ನ ಜಾಗದಲ್ಲಿ ಕೂತೆ. ಪರೀಕ್ಷೆ ಸ್ವಲ್ಪ ಕಷ್ಟಕರವಾಗಿಯೇ ಇತ್ತು. ಹೇಗೋ ಭಗವಂತನ ಹೆಸರು ಹೇಳಿಕೊಂಡು ಪರೀಕ್ಷೆ ಬರೆದೆ. ಪರೀಕ್ಷೆ ಮುಗಿಯಿತು. ಉತ್ತರಪತ್ರಿಕೆಯನ್ನು ಶಿಕ್ಷಕರಿಗೆ ದಾಟಿಸಿ ಹೊರಬರುವಷ್ಟರಲ್ಲಿ ಹುಡುಗರ ದಂಡೇ ಅಲ್ಲಿ ನೆರೆದಿತ್ತು. ಅವರು “ಹೊಡೆದೆಯಲ್ಲಾ ಜಾಕ್‌ಪಾಟ್‌’ ಎಂದು ಸಂಭ್ರಮಿಸಿದರು. ನಾನು ಏನೊಂದೂ ಗೊತ್ತಿಲ್ಲದವನಂತೆ ಅವರ ಮುಖಗಳನ್ನು ಮಿಕಿ ಮಿಕಿ ನೋಡಿದೆ. ಅವರ ಜೊತೆ ನನ್ನ ಸೀಟಿನಲ್ಲಿ ಕೂತಿದ್ದ ಸಹಪಾಠಿಯೂ ಇದ್ದ. 

ಆಮೇಲೆ ವಿಷಯ ಗೊತ್ತಾಯಿತು. ಆ ಮಹಾಶಯ ಪರೀûಾ ಹಾಲ್‌ಗೆ  ಶಿಕ್ಷಕರು ಬರುವುದಕ್ಕಿಂತ 10 ನಿಮಿಷ ಮೊದಲೇ ತರಗತಿಗೆ ಹೋಗಿ ಡೆಸ್ಕಿನ ಮೇಲೆ ಇಂಪಾರ್ಟೆಂಟ್‌ ಪಾಯಿಂಟುಗಳನ್ನು ಪೆನ್ಸಿಲ್‌ನಲ್ಲಿ ಬರೆದಿಟ್ಟಿದ್ದ. ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ತಿಳಿಯುವಂತಿತ್ತು ಅವು. ಆದರೆ ಅವನ ದುರಾದೃಷ್ಟಕ್ಕೆ ಕೊನೆಯ ಘಳಿಗೆಯಲ್ಲಿ ಬೆಂಚುಗಳ ಬದಲಾವಣೆಗೊಂಡು ಅವನು ಉತ್ತರಗಳನ್ನು ಬರೆದಿದ್ದ ಸೀಟು ನನಗೆ ಸಿಕ್ಕಿತ್ತು. ಅವನು ಆ ಜಾಗ ಬಿಟ್ಟು ಕದಲದಿದ್ದುದಕ್ಕೆ ಕಾರಣ ಆಗ ನನಗೆ ಗೊತ್ತಾಯಿತು. 

ಅವನು ನನ್ನನ್ನು ಕೇಳಿದ “ಪ್ರಶ್ನೆಪತ್ರಿಕೆಯಲ್ಲಿದ್ದ ಬಹುತೇಕ ಪ್ರಶ್ನೆಗಳಿಗೆ ಉತ್ತರಗಳನ್ನು ನಾನು ಬೆಂಚಿನ ಮೇಲೆ ಬರೆದಿಟ್ಟಿದ್ದೆ. ನನಗಂತೂ ಅದೃಷ್ಟವಿರಲಿಲ್ಲ, ನೀನಾದರೂ ಕಾಪಿ ಹೊಡೆದೆಯಾ?’. ಈಗ ಅದೃಷ್ಟವನ್ನು ಹಳಿಯುವ ಸರದಿ ನನ್ನದಾಯಿತು. ಅವನು ಹೋಗುವ ಮುನ್ನ ಹೇಳಿದ್ದರಲ್ಲವೇ ನನಗೆ ಗೊತ್ತಾಗೋಕೆ. ಅಟ್‌ಲೀಸ್ಟ್‌ ಒಂದು ಸನ್ನೆ ಮಾಡಿದರೂ ಸಾಕಿತ್ತು! ಈಗ ಅದರ ಬಗ್ಗೆ ಏನು ಮಾತಾಡಿದರೂ ಪ್ರಯೋಜನವಿಲ್ಲವೆಂದು ಇಬ್ಬರೂ ಬೇಜಾರಿನಿಂದಲೇ ಅಲ್ಲಿಂದ ಜಾಗ ಖಾಲಿ ಮಾಡಿದೆವು.

Advertisement

– ರಾಘವೇಂದ್ರ ಜಂಗ್ಲಿ, ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next