Advertisement

ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಸಕಲ ಸಿದ್ಧತೆ

10:27 AM May 29, 2019 | Suhan S |
ಗದಗ: ಸರಕಾರ ಆಯ್ದ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಆರಂಭಿಸುತ್ತಿದ್ದು, ಜಿಲ್ಲೆಯಲ್ಲಿ ತಮ್ಮ ಮಕ್ಕಳ ದಾಖಲಾತಿಗಾಗಿ ಸಾರ್ವಜನಿಕರು ಮುಗಿಬಿದ್ದಿದ್ದಾರೆ. ಶೈಕ್ಷಣಿಕ ವರ್ಷದ ಶಾಲಾ ಪುನಾರಂಭಕ್ಕೂ ಮುನ್ನವೇ ಜಿಲ್ಲೆಯಲ್ಲಿ ಸುಮಾರು 70ಕ್ಕೂ ಅಧಿಕ ಮಕ್ಕಳ ಪ್ರವೇಶ ಪಡೆದಿದ್ದಾರೆ. ಇನ್ನು, ಖಾಸಗಿ ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳತ್ತ ಮುಖ ಮಾಡಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಾಕ್‌ ನೀಡಿವೆ.

ಹೌದು. ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಬೇಕು. ಸರಕಾರಿ ಶಾಲೆಯ ಮಕ್ಕಳೂ ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುತ್ತಿದೆ. ಅದಕ್ಕಾಗಿ ಜಿಲ್ಲೆಯ 6 ಕರ್ನಾಟಕ ಪಬ್ಲಿಕ್‌ ಶಾಲೆಗಳು ಸೇರಿದಂತೆ ಒಟ್ಟು 17 ಸರಕಾರಿ ಇಂಗ್ಲಿಷ್‌ ಮಾಧ್ಯಮ ಆರಂಭವಾಗುತ್ತಿದೆ. ಅದಕ್ಕಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಗತ್ಯ ಪೂರ್ವ ಸಿದ್ಧತೆಯಲ್ಲಿ ತೊಡಗಿದೆ.

Advertisement

ಎಲ್ಲೆಲ್ಲಿ ಇಂಗ್ಲಿಷ್‌ ಶಾಲೆಗಳು?: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರವಾರು ನಾಲ್ಕೈದು ಶಾಲೆಗಳಂತೆ ಒಟ್ಟು 17 ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಆರಂಭಿಸಲಾಗುತ್ತಿದೆ. ಗದಗ ಶಹರ ವಲಯದ ಗದುಗಿನ ಆಶ್ರಯ ಕಾಲೋನಿಯ ಶಾಲೆ ನಂ. 12, ಗದಗ ಗ್ರಾಮೀಣ ವಲಯದ ನಾಗಾವಿ, ಮುಳಗುಂದ, ಸೊರಟೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ(ಕೆಪಿಎಸ್‌) 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆ ತೆರೆಯಲಿದೆ.

ನರಗುಂದ ವಲಯದ ನರಗುಂದ ಪಟ್ಟಣದ ಶಾಲೆ ನಂ. 1, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹುಣಸಿಕಟ್ಟಿ, ಚಿಕ್ಕನರಗುಂದ(ಕೆಪಿಎಸ್‌), ಬನಹಟ್ಟಿ(ಕೆಪಿಎಸ್‌), ಮುಂಡರಗಿ ವಲಯದ ಚಿಕ್ಕವಡ್ಡಟ್ಟಿ, ಡೋಣಿ(ಕೆಪಿಎಸ್‌) ಹಾಗೂ ರೋಣ ವಲಯದ ದಿಂಡೂರ, ರೋಣ, ಮುಶಿಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಕೆಪಿ ಎಸ್‌)ಯಲ್ಲಿ ಹೊಸದಾಗಿ ಆಂಗ್ಲ ಮಾಧ್ಯಮ ಶಾಲೆ ತಲೆ ಎತ್ತಲಿದೆ. ಜಿಲ್ಲೆಯ 17 ಶಾಲೆಗಳ ತಲಾ ಓರ್ವ ಶಿಕ್ಷಕರಿಗೆ ಈಗಾಗಲೇ ಡಯಟ್ ಸಂಸ್ಥೆ ಮೂಲಕ 15 ದಿನಗಳ ಕಾಲ ತರಬೇತಿ ನೀಡಿ ಸಿದ್ಧಗೊಳಿಸಿದೆ.

ಶಿರಹಟ್ಟಿ ವಲಯದಲ್ಲಿ ಕಡಕೋಳ(ಕೆಪಿಎಸ್‌), ಮ್ಯಾಗೇರಿ, ಬೆಳ್ಳಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ(ಕೆಪಿಎಸ್‌) ಮತ್ತು ಚಬ್ಬಿ ಆರ್‌ಎಂಎಸ್‌ಎ ಶಾಲಾ ಆವರ ಣದಲ್ಲಿ ನೂತನವಾಗಿ 1ನೇ ತರಗತಿಯಿಂದ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಆರಂಭಗೊಳ್ಳಿವೆ. ಈಗಾಗಲೇ ಪ್ರವೇಶ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಮಕ್ಕಳ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

100 ವಿದ್ಯಾರ್ಥಿಗಳು ದಾಖಲು: ಮುಂಡರಗಿ ತಾಲೂಕಿನ ಜಿಎಚ್ಪಿಎಸ್‌ ಶಾಲೆಯಲ್ಲಿ ಆರಂಭಿಸಿರುವ ಎಲ್ಕೆಜಿ ಹಾಗೂ ಆಂಗ್ಲ ಮಾಧ್ಯಮ 1ನೇ ತಗರತಿಗೆ ತಲಾ 30, ನಾಗಾವಿಯಲ್ಲಿ 1ನೇ ತರಗತಿಗೆ 14, ಗದಗಿನ ಎಸ್‌ಎಂ ಕೃಷ್ಣಾ ನಗರ ಶಾಲೆಯಲ್ಲಿ 5, ಶಿರಹಟ್ಟಿಯ ಮೆಗೇರಿ ಜಿಎಚ್ಪಿಎಸ್‌ನಲ್ಲಿ 12, ಕಡಕೋಳ ಜಿಎಚ್ಪಿಎಸ್‌ನಲ್ಲಿ 8 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇನ್ನು ರೋಣ ತಾಲೂಕಿನ ಮುಶಿಗೇರಿಯಲ್ಲಿ ಸುಮಾರು 10 ವಿದ್ಯಾರ್ಥಿಗಳ ಪೋಷಕರು ಪ್ರವೇಶ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇನ್ನುಳಿದ ಶಾಲೆಗಳಲ್ಲಿ ಮೇ 29ರಿಂದ ಮಕ್ಕಳ ದಾಖಲಾತಿ ಆರಂಭವಾಗಲಿದ್ದು, ಪ್ರತೀ ಶಾಲೆಯಲ್ಲಿ ಕನಿಷ್ಠ 30 ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆಯಿದೆ ಎಂಬುದು ಇಲಾಖೆಯ ಮೂಲಗಳ ಹೇಳಿಕೆ.

Advertisement

ಸರಕಾರಿ ಶಾಲೆಗಳ ಪ್ರಚಾರ ಜೋರು: ಜಿಲ್ಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಗೊಳ್ಳುವ ಸರಕಾರಿ ಶಾಲೆಗಳ ಪೈಕಿ ಕೆಲ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ ಕರ ಪತ್ರಗಳನ್ನು ಮುದ್ರಿಸಿದ್ದಾರೆ. ಶಾಲೆಯಲ್ಲಿ ಲಭ್ಯವಿರುವ ಪೀಠೊಪಕರಣ, ಆಟದ ಮೈದಾನ, ನುರಿತ ಶಿಕ್ಷಕ ವರ್ಗ ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ಉಲ್ಲೇಖೀಸುವ ಮೂಲಕ ಸಾರ್ವಜನಿಕರ ಆಕರ್ಷಣೆಗೆ ಒತ್ತು ನೀಡಿದ್ದಾರೆ. ಅದರೊಂದಿಗೆ ಶಾಲಾ ನಿರ್ವಹಣಾ ನಿಧಿಯಡಿ ಶಾಲಾ ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಹೇಳಲಾಗಿದೆ.

•ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next