ಬ್ಯಾಡಗಿ: ಆಂಗ್ಲ ಭಾಷೆ ಗೊತ್ತಿಲ್ಲದವರನ್ನು ಅನಕ್ಷರಸ್ಥರಂತೆ ಕಾಣಲಾಗುತ್ತಿದೆ. ವ್ಯವಹಾರಿಕ ಭಾಷೆಯಾಗಿದ್ದ ಆಂಗ್ಲ ಇತ್ತೀಚಿನ ದಿನಗಳಲ್ಲಿ ಬದುಕಿನ ಭಾಷೆಯಾಗಿ ಪರಿವರ್ತನೆಯಾಗುತ್ತಿದೆ. ಎಚ್ಚೆತ್ತುಕೊಂಡ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿದ್ದು ಇನ್ನಾದರೂ ಪಾಲಕರು ದುಬಾರಿ ಶುಲ್ಕ ಕೊಟ್ಟು ಖಾಸಗಿ ಶಾಲೆಗಳತ್ತ ಮುಖಮಾಡದಂತೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮನವಿ ಮಾಡಿದರು.
ಶನಿವಾರ ಪಟ್ಟಣದ ಎಸ್‌ಜೆಜೆಎಂ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಆಂಗ್ಲ ಮಾಧ್ಯಮ ಶಾಲಾ ಉದ್ಘಾಟಿಸಿ ಅವರು ಮಾತನಾಡಿದರು. ಆಂಗ್ಲ ಭಾಷಾ ವಿಷಯದ ಶಾಲೆಗಳತ್ತ ಮುಖ ಮಾಡಿದ ಪಾಲಕರಿಂದ ಕ್ರಮೇಣವಾಗಿ ಕನ್ನಡ ಮಾಧ್ಯಮ ಶಾಲೆಗಳು ಅವಸಾನದತ್ತ ಸಾಗಿದವು. ಈ ನಿಟ್ಟಿನಲ್ಲಿ ಚಿಂತನೆ ನಡೆಸಿದ ರಾಜ್ಯ ಸರ್ಕಾರ ಶಾಲೆ ಹಾಗೂ ಭಾಷೆ ಎರಡೂ ಉಳಿಯುವಂತೆ ಮಾಡಲು ದಿಟ್ಟ ನಿರ್ಧಾರ ತೆಗೆದುಕೊಂಡು ಪ್ರಥಮ ಹಂತದಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದೆ ಎಂದರು.
ಕನ್ನಡಕ್ಕಾಗದು ಧಕ್ಕೆ: ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದರಿಂದ ಕನ್ನಡ ಭಾಷೆಗೆ ಧಕ್ಕೆಯಾಗುತ್ತಿದೆ ಎಂದು ಕೆಲವರ ಆರೋಪವಿದೆ. ಆದರೆ, ದ್ವಿತೀಯ ಭಾಷೆಯಾಗಿ ಕನ್ನಡ ಕಡ್ಡಾಯವಾಗಿರುವುದರಿಂದ ನಮ್ಮಲ್ಲಿರುವ ಮಕ್ಕಳು ಕನ್ನಡ ಬಿಟ್ಟು ಬೇರೆ ಭಾಷೆ ಕಲಿಯಲು ಸಾಧ್ಯವಿಲ್ಲ. ಅದೇನಿದ್ದರೂ ಗಡಿಭಾಗಗಳಲ್ಲಿರುವ ಮೆಟ್ರೋಪಾಲಿಟಿನ್ ನಗರಗಳಲ್ಲಿ ಕನ್ನಡ ಭಾಷೆ ತೊಂದರೆಯಾಗಲು ಸಾಧ್ಯವೇ ಹೊರತು ನಮ್ಮಲ್ಲಿರುವ ಮಕ್ಕಳಿಗೆ ಕನ್ನಡ ಭಾಷೆಯ ಮೇಲಿರುವ ಅಭಿಮಾನ ಕಡಿಮೆಯಾಗಲು ಸಾಧ್ಯವಿಲ್ಲ ಎಂದರು.
ಖಾಸಗಿ ಶಾಲೆಗಳ ಬಾಗಿಲು ತಟ್ಟಬೇಡಿ: ಬಡ ಕುಟುಂಬದ ಹಿನ್ನೆಲೆಯುಳ್ಳ ಪಾಲಕರು ಇನ್ನು ಮುಂದೆ ಎಂದಿಗೂ ಖಾಸಗಿ ಶಾಲೆಗಳತ್ತ ಮುಖ ಮಾಡಬೇಡಿ. ತಮ್ಮ ಮಕ್ಕಳಿಗೆ ಸರ್ಕಾರ ಆಂಗ್ಲ ಮಾಧ್ಯಮ ಶಿಕ್ಷಣದ ಉಚಿತವಾಗಿ ನೀಡುವ ಜತೆಗೆ ಎಲ್ಲ ಸೌಲಭ್ಯವೂ ಒದಗಿಸುತ್ತಿದೆ. ನಮ್ಮ ಶಾಲೆಗಳಲ್ಲಿನ ಶಿಕ್ಷಕರ ಮೇಲೆ ವಿಶ್ವಾಸವಿಟ್ಟು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ, ತಾಲೂಕು ಬಿಜೆಪಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಮುಖಂಡ ರಾದ ಶಿವಬಸಪ್ಪ ಕುಳೇನೂರ, ಸುರೇಶ ಯತ್ನಳ್ಳಿ, ರಾಜು ಹೊಸಕೇರಿ, ಸೋಮು ಮಾಳಗಿ, ವಿಜಯ ಮಾಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಮುನಿ, ದೈಹಿಕ ಶಿಕ್ಷಣಾಧಿಕಾರಿ ಬಿಎಚ್ಎನ್ ರಾವಳ, ಪ್ರಾಚಾರ್ಯ ಬಿ.ಎಂ. ಕಾಡಪ್ಪನವರ, ಉಪಪ್ರಾಚಾರ್ಯ ಎಸ್.ಬಿ. ಇಮ್ಮಡಿ, ಐ.ಎಸ್. ಅಕ್ಕಿ ಸ್ವಾಗತಿಸಿ ವಂದಿಸಿದರು.