Advertisement

ಆಂಗ್ಲ ಮಾಧ್ಯಮ; ಕನ್ನಡಿಗರಿಗೆ ಮಾಡಿದ ದ್ರೋಹ

12:46 AM Sep 12, 2019 | Lakshmi GovindaRaju |

ಬೆಂಗಳೂರು: ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷವೊಂದು ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ ಆರಂಭಿಸವ ಅವೈಜ್ಞಾನಿಕ ನಿರ್ಣಯದ ಮೂಲಕ ಕನ್ನಡಿಗರಿಗೆ ಹಾಗೂ ಪ್ರಾದೇಶಿಕತೆಗೆ ದ್ರೋಹ ಬಗೆದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

Advertisement

ಕನ್ನಡ ಕ್ರಿಯಾ ಸಮಿತಿ ಮೈಸೂರು ಹಾಗೂ ಕರ್ನಾಟಕ ವಿಕಾಸ ರಂಗವು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ “ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಆತಂಕ ಮತ್ತು ನಿವಾರಣೆ’ ಕುರಿತ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಭಾಷಾವಾರು ಪ್ರಾಂತ್ಯಕ್ಕೆ ಅನುಗುಣವಾಗಿ ಭಾಷಾನೀತಿ ಹಾಗೂ ಪ್ರಾಥಮಿಕ ಶಿಕ್ಷಣ ನೀತಿ ಇರಬೇಕು. ಪ್ರಾದೇಶಿಕ ಭಾಷೆಗಳು ಪ್ರಾಥಮಿಕ ಶಿಕ್ಷಣದಿಂದ ಮರೆಯಾದರೆ ಮುಂದೆ ಉನ್ನತ ಶಿಕ್ಷಣಕ್ಕೆ ಬರುವುದಿಲ್ಲ, ಆಡಳಿತದಲ್ಲಿರಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಮೂಲಕ ಇಂತಹ ದುಸ್ತಿತಿಗೆ ಇಲ್ಲಿನ ಪ್ರಾದೇಶಿಕ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷವು ನಾಂದಿ ಹಾಡಿದೆ.

ಇಂತಹ ಅವೈಜ್ಞಾನಿಕ ನಿರ್ಣಯದ ಮೂಲಕ ಪ್ರಾದೇಶಿಕತೆಗೆ ದ್ರೋಹ ಮಾಡಿದೆ ಎಂದರು. ಒಂದು ಸಾವಿರ ಇಂಗ್ಲಿಷ್‌ ಮಾಧ್ಯಮ ಶಾಲೆ ತೆರೆದರೆ ಎಷ್ಟು ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳು ಮುಚ್ಚುತ್ತವೆ ಎಂಬುದನ್ನು ಅವಲೋಕಿಸಬೇಕಿತ್ತು. ಯಾವುದೇ ತಯಾರಿ ಇಲ್ಲದೆ, ವಾಸ್ತವ ಅರ್ಥ ಮಾಡಿಕೊಳ್ಳದೆ, ಶಿಕ್ಷಣ ತಜ್ಞರ ಅಭಿಪ್ರಾಯ ಪಡೆಯದೆ ಇಂಗ್ಲಿಷ್‌ ಮಾಧ್ಯಮ ಆರಂಭಿಸಿದೆ. ಪರಿಣಾಮ, ಗ್ರಾಮೀಣ ಮಕ್ಕಳಿಗೆ ಮಾತೃಭಾಷೆ ಹೊರತಾದ ಶಿಕ್ಷಣ ದೊರೆಯುತ್ತದೆ.

ಇದರಿಂದ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಶಾಲೆ ಬಿಡುವ ಮಕ್ಕಳ ಸಂಖ್ಯೆ ಹೆಚ್ಚಾಗಲಿದ್ದು, ಕನ್ನಡದ ಉಳಿವಿನ ಜತೆಗೆ ಕಡ್ಡಾಯ ಶಿಕ್ಷಣ ನೀತಿಗೂ ಸಮಸ್ಯೆಯಾಗಲಿದೆ. ಇನ್ನು 2015ರಲ್ಲಿ ಕಾಂಗ್ರೆಸ್‌ ಸರ್ಕಾರ ಖಾಸಗಿ ಶಾಲೆಗಳಲ್ಲಿ ಕಡ್ಡಾಯ ಕನ್ನಡ ಎಂಬ ನಿಯಮ ಜಾರಿಗೆ ತಂದಿದ್ದು, ನಿಯಮ ಪಾಲನೆ ಬಗ್ಗೆ ಪರಿಶೀಲನೆ ಆಗಬೇಕು ಎಂದು ಒತ್ತಾಯಿಸಿದರು. ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, 2010-11ರಲ್ಲಿ ಸರ್ಕಾರಿ ಶಾಲೆಯಲ್ಲಿ 54 ಲಕ್ಷ ಮಕ್ಕಳಿದ್ದರು. 2018-19ರಲ್ಲಿ 43 ಲಕ್ಷ ಮಕ್ಕಳಿದ್ದಾರೆ.

Advertisement

ಇದೇ ವೇಳೆ ಖಾಸಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ 28 ಲಕ್ಷದಿಂದ 44 ಲಕ್ಷಕ್ಕೆ ಏರಿಕೆಯಾಗಿದೆ. ಸದ್ಯ ಸರ್ಕಾರವು ಜಿಡಿಪಿಯಲ್ಲಿ ಶೇ.1ಕ್ಕಿಂತ ಕಡಿಮೆ ಖರ್ಚು ಮಾಡುತ್ತಿದೆ. ಬದಲಾಗಿ ಶೇ.5ರಷ್ಟು ಖರ್ಚು ಮಾಡಿದರೆ ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೇರುತ್ತವೆ. ಸಂವಿಧಾನದ ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿ ಮೂಲಕ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಉಳಿಸಬಹುದು. ಈ ಕುರಿತು ಸಂಸದರಿಬ್ಬರು ಅಧಿವೇಶನದಲ್ಲಿ ವಿಚಾರ ಮಂಡಿಸಿದ್ದು, ಮರು ಪರಿಶೀಲನೆ ಮಾಡಿ ಜಾರಿಗೆ ತರುವ ಪ್ರಯತ್ನವನ್ನು ಸರ್ಕಾರ ಮಾಡಬೇಕು ಎಂದರು.

ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಮಾತನಾಡಿ, ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿಯ ಕರಡಿನಲ್ಲಿ ಮಾತೃಭಾಷೆ ಶಿಕ್ಷಣ ನೀಡಬೇಕು ಎಂಬ ನಿಯಮವಿದೆ. ಜತೆಗೆ ಎಲ್ಲಾ ಮಾದರಿಯ ಶಾಲೆಗಳಲ್ಲೂ ಸಮಾನ ಪಠ್ಯ ಮಾತೃಭಾಷೆಯಲ್ಲಿರಬೇಕು ಎಂಬ ನಿಯಮ ಬರಬೇಕು. ರಾಜ್ಯ ಸರ್ಕಾರವು ದೆಹಲಿ ಸರ್ಕಾರ ಮಾದರಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡಬೇಕು ಎಂದರು.

ಹಿರಿಯ ಸಂಶೋಧಕ ಡಾ.ಚಿದಾನಂದ ಮೂರ್ತಿ, ಕನ್ನಡ ಪುಸ್ತಕ ಪ್ರಾಧಿಕಾರ ಮಾಜಿ ಅಧ್ಯಕ್ಷೆ ವಸುಂಧರಾ ಭೂಪತಿ, ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪದ್ಮರಾಜ್‌ ದಂಡಾವತಿ, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಸಾಹಿತಿಗಳು, ಕನ್ನಡ ಹೋರಾಟಗಾರರು ಉಪಸ್ಥಿತರಿದ್ದರು.

ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸಿ ನಾಡಿನ ಭಾಷೆ, ಸಂಸ್ಕೃತಿ, ಜೀವನ ವಿಧಾನಕ್ಕೆ ಕೊಡಲಿ ಪೆಟ್ಟು ನೀಡುವ ಕೆಲಸವನ್ನು ಹಿಂದಿನ ಸರ್ಕಾರ ಮಾಡಿದೆ. ಇಂಗ್ಲಿಷ್‌ ಮಾಧ್ಯಮಕ್ಕೆ ಅವಕಾಶ ನೀಡಿ ಪೋಷಕರ ದಾರಿ ತಪ್ಪಿಸಲಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು.
-ಸಿದ್ದಲಿಂಗಯ್ಯ, ಕವಿ

Advertisement

Udayavani is now on Telegram. Click here to join our channel and stay updated with the latest news.

Next