Advertisement
ಈ ವರ್ಷ ಕೇವಲ ಒಂದನೇ ತರಗತಿಯಲ್ಲಿ ಮಾತ್ರ ಇಂಗ್ಲಿಷ್ ಮಾಧ್ಯಮ ಇರಲಿದೆ. ಇದಕ್ಕಾಗಿ ಪತ್ರಿ ಶಾಲೆಗೆ ಒಬ್ಬರಂತೆ ವಿಶೇಷ ತರಬೇತಿ ಪಡೆದ ಶಿಕ್ಷಕರನ್ನು ನಿಯೋಜನೆ ಮಾಡುವ ಅಥವಾ ಆ ಶಾಲೆಯ ಒಬ್ಬ ಶಿಕ್ಷಕರನ್ನು ಆಯ್ಕೆ ಮಾಡಿ, ವಿಶೇಷ ತರಬೇತಿ ನೀಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ.
Related Articles
Advertisement
ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ನಾಲ್ಕು ಅಥವಾ ಐದು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ತೆರೆಯಲಾಗುತ್ತದೆ. ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಇದೆಯೇ ಅಥವಾ ಇಲ್ಲವೋ ಎನ್ನುವುದರ ಕುರಿತು ದಾಖಲಾತಿ ಸಂದರ್ಭದಲ್ಲಿ ಪಾಲಕ-ಪೋಷಕರಿಗೆ ಶಾಲೆಯಿಂದಲೇ ಮಾಹಿತಿ ನೀಡಲಾಗುತ್ತದೆ.
ಶಿಕ್ಷಕರಿಗೆ ತರಬೇತಿ: ಸರ್ಕಾರಿ ಶಾಲೆಯಲ್ಲಿ ಈಗ ಇರುವ ವ್ಯವಸ್ಥೆಯನ್ನೇ ಚೆನ್ನಾಗಿ ಉಪಯೋಗಿಸಿಕೊಂಡು, ಆಂಗ್ಲ ಮಾಧ್ಯಮ ತರಗತಿಗಳನ್ನು ತೆರೆಯಲಾಗುತ್ತಿದೆ. ಇದಕ್ಕಾಗಿ ಒಂದು ಸಾವಿರ ಶಿಕ್ಷಕರಿಗೆ ಇಂಗ್ಲಿಷ್ ಬೋಧನೆಯ ಕುರಿತು ವಿಶೇಷ ತರಬೇತಿ ನೀಡಲಾಗಿದೆ. ಮಾಸ್ಟರ್ ಆಫ್ ರಿಸೋರ್ಸ್ ಪರ್ಸನ್(ಎಂಆರ್‌ಪಿ) ತರಬೇತಿಯಡಿ ಸಾವಿರ ಶಿಕ್ಷಕರನ್ನು ಸಿದ್ಧಪಡಿಸಲಾಗಿದೆ.
ಇದು ರಾಜ್ಯಮಟ್ಟದ ತರಬೇತಿಯಾಗಿದ್ದು, ಜಿಲ್ಲಾಮಟ್ಟದಲ್ಲೂ ಈ ರೀತಿಯ ತರಬೇತಿ ನೀಡಲಾಗುತ್ತದೆ. ರಾಜ್ಯ ಪಠ್ಯಕ್ರಮದಂತೆ ಆಂಗ್ಲ ಮಾಧ್ಯಮದ ಬೋಧನೆ ಇರಲಿದ್ದು, ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿ ಮಗುವಿಗೆ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆಯೋ ಅದೇ ಮಾದರಿಯ ಶಿಕ್ಷಣವನ್ನು ಇಲ್ಲಿ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ನೋಡಲ್ ಅಧಿಕಾರಿ ನೇಮಕ: ಸರ್ಕಾರಿ ಶಾಲೆಗಳಲ್ಲಿ ಆರಂಭವಾಗುತ್ತಿರುವ ಆಂಗ್ಲ ಮಾಧ್ಯಮ ತರಗತಿಗಳ ನಿರ್ವಹಣೆ ಮತ್ತು ಶಿಕ್ಷಕರಿಗೆ ತರಬೇತಿ ನೀಡಲು ಜಿಲ್ಲೆಗೆ ಒಬ್ಬರಂತೆ ನೋಡಲ್ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಜಿಲ್ಲಾ ಡಯಟ್‌ನ ಹಿರಿಯ ಉಪನ್ಯಾಸಕ ಅಥವಾ ಉಪನ್ಯಾಸಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುತ್ತದೆ. ನೋಡಲ್ ಅಧಿಕಾರಿಗಳ ಸಭೆ ಮೇ 8ರಂದು ಬೆಂಗಳೂರಿನ ಜ್ಞಾನ ಭಾರತಿ ಆವರಣದ ಆರ್‌ಐಇಎಸ್‌ಐ ಸಂಸ್ಥೆಯಲ್ಲಿ ನಡೆಯಲಿದೆ.
ಇಂಗ್ಲಿಷ್ ಮಾಧ್ಯಮಕ್ಕೆ ವಿರೋಧ ಇತ್ತು!: ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೇಡ, ಇಂಗ್ಲಿಷ್‌ನ್ನು ಒಂದು ವಿಷಯವಾಗಿ ಬೋಧನೆ ಮಾಡಿದರೆ ಸಾಕು ಎಂಬುದು ಹಿಂದಿನ ಕಾಂಗ್ರೆಸ್ ಸರ್ಕಾರದ ನಿಲುವಾಗಿತ್ತು. ಅದರಂತೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದನೇ ತರಗತಿಯಿಂದ ಇಂಗ್ಲಿಷ್‌ನ್ನು ಒಂದು ವಿಷಯವಾಗಿ ಬೋಧಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು.
ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಶಾಲೆಯಲ್ಲೂ ಇಂಗ್ಲಿಷ್ ಮಾಧ್ಯಮ ಆರಂಭಿಸುತ್ತೇವೆ ಎಂಬ ಘೋಷಣೆ ಮಾಡಲಾಯಿತು. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ವಿರೋಧ ವ್ಯಕ್ತಪಡಿಸಿದರು. ಆದರೂ, ಮೈತ್ರಿ ಸರ್ಕಾರ ತನ್ನ ನಿಲುವಿನಲ್ಲಿ ಯಾವುದೇ ವ್ಯತ್ಯಾಸ ಮಾಡಿಕೊಂಡಿಲ್ಲ. ಒಂದು ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಒಂದು ಸಾವಿರ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ವಿಧಾನಸಭಾ ಕ್ಷೇತ್ರವಾರು ತಲಾ ನಾಲ್ಕೈದು ಶಾಲೆಯನ್ನು ಆಯ್ಕೆ ಮಾಡಿದ್ದೇವೆ. ಮಕ್ಕಳ ಸಂಖ್ಯೆ ಸಹಿತವಾಗಿ ಕೆಲವು ಮಾನದಂಡದ ಆಧಾರದಲ್ಲಿ ಶಾಲೆಯ ಆಯ್ಕೆ ಪ್ರಕ್ರಿಯೆ ನಡೆದಿದೆ.-ಎಸ್.ಜಯಕುಮಾರ್, ನಿರ್ದೇಶಕ, ಪ್ರಾಥಮಿಕ ಶಿಕ್ಷಣ ಇಲಾಖೆ. * ರಾಜು ಖಾರ್ವಿ ಕೊಡೇರಿ