ಸ್ಟೇಟ್‌ಬ್ಯಾಂಕ್: ಈ ಶೈಕ್ಷಣಿಕ ವರ್ಷದಿಂದ ರಾಜ್ಯದ ಆಯ್ದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸುವುದಾಗಿ ರಾಜ್ಯ ಸರಕಾರ ಪ್ರಕಟಿಸಿದೆ. ಮುಂದಿನ ಸಾಲಿನಿಂದ ಇನ್ನೂ ಹಲವಾರು ಶಾಲೆಗಳಲ್ಲಿ ವಿಸ್ತರಿಸುವುದಾಗಿ ತಿಳಿಸಿದೆ. ಹೀಗೆ ಮುಂದುವರಿದು ರಾಜ್ಯದ ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವಾದರೆ, ಕನ್ನಡ, ಪ್ರಾದೇಶಿಕ ಸಂಸ್ಕೃತಿ ಅಳಿದು ಹೋಗಬಹುದು ಎಂದು ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಸದಸ್ಯ ವಾಸುದೇವ ಉಚ್ಚಿಲ ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆರಂಭಿ ಸುವುದನ್ನು ವಿರೋಧಿಸಿ ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ವತಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನ ಪ್ರದರ್ಶನವನ್ನು ಉದ್ದೇಶಿಸಿ ಅವರು ಸೋಮವಾರ ಮಾತನಾಡಿದರು.
ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಸರಕಾರದ ಈ ಯೋಜನೆಯಿಂದ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಐಸಿಡಿಎಸ್ ಕಾರ್ಯ ಕ್ರಮಕ್ಕೆ ಬಾಧೆ ಉಂಟಾಗಲಿದೆ. ಪೌಷ್ಟಿಕ ಆಹಾರ, ಆರೋಗ್ಯ ರಕ್ಷಣೆಯಂತಹ ಅಗತ್ಯ ಕಾರ್ಯಕ್ರಮ ಗಳಿಂದ ಮಕ್ಕಳು ಶಾಲೆಯ ಎಲ್‌ಕೆಜಿಗಳಿಗೆ ಸೇರಿಕೊಳ್ಳುವುದರಿಂದ ವಂಚಿತರಾಗುವರು. ಆದುದರಿಂದ ಎಲ್‌ಕೆಜಿ ಯುಕೆಜಿಗಳನ್ನು ಅಂಗನವಾಡಿಗಳಲ್ಲೇ ಆರಂಭಿಸಿ ಐಸಿಡಿಎಸ್ ಯೋಜನೆಯನ್ನೂ ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದರು.
ಸಿಪಿಐ(ಎಂ) ಜಿಲ್ಲಾ ಮುಖಂಡರಾದ ಯು. ಬಿ. ಲೋಕಯ್ಯ, ಕೃಷ್ಣಪ್ಪ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ವಂದಿಸಿದರು.