ಬೆಳ್ತಂಗಡಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ತಾಲೂಕಿನ ಪ್ರಥಮ ನೃತ್ಯ ಗುರು, ಪಡ್ಡಿರೆ ನಿವಾಸಿ ಪಿ. ಕಮಲಾಕ್ಷ ಆಚಾರ್ (78) ಜ.14ರಂದು ಮಂಗಳೂರಿನಲ್ಲಿ ನಿಧನ ಹೊಂದಿದರು.
ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 2022ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಅವರು 1976ರಲ್ಲಿ ಬೆಳ್ತಂಗಡಿಯಲ್ಲಿ “ನೃತ್ಯನಿಕೇತನ’ವೆಂಬ ನೃತ್ಯ ಸಂಸ್ಥೆಯನ್ನು ಪ್ರಾರಂಭಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ತರಬೇತಿ ನೀಡಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮುಖ್ಯ ಶಿಕ್ಷಕರಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. 1986ರಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನೃತ್ಯ ಪರೀಕ್ಷಕರಾಗಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, “ನೃತ್ಯ ವಿದ್ಯಾನಿಧಿ’ ಬಿರುದು-ಸಮ್ಮಾನ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಸಹಿತ ಹಲವಾರು ಪ್ರಶಸ್ತಿ, ಗೌರವಗಳಿಗೆ ಭಾಜನರಾಗಿದ್ದರು.
ಜಿಲ್ಲಾ ಸಾಲಿಯಾನ್ ಪ್ರತಿಷ್ಠಾನದ ಕಾರ್ಯದರ್ಶಿಯಾಗಿ, ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಸ್ಥಾಪಕಾಧ್ಯಕ್ಷರಾಗಿ 2009ರಿಂದ ಸೇವೆ, 1986ರಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನೃತ್ಯಪರೀಕ್ಷಕನಾಗಿ ಸಲಹೆಗಾರನಾಗಿ ಸೇವೆ ಸಲ್ಲಿಸಿದ್ದರು.
1967ರಲ್ಲಿ ಪ್ರೌಢ ಶಾಲಾ ಶಿಕ್ಷಕನಾಗಿ ಸರಕಾರಿ ಶಾಲೆಗೆ ಸೇರ್ಪಡೆಗೊಂಡ ಅವರು ಮಂಗಳೂರಿನಲ್ಲಿ ಟಿ.ಸಿ.ಎಚ್ ಶಿಕ್ಷಕ ತರಬೇತಿ ಪಡೆಯುತ್ತಿರುವಾಗ ಕದ್ರಿ ನೃತ್ಯ ವಿದ್ಯಾನಿಲಯದ ನಾಟ್ಯಾಚಾರ್ಯ ಯು.ಎಸ್. ಕೃಷ್ಣರಾಯರ ಬಳಿ ನೃತ್ಯಾಭ್ಯಾಸ ಆರಂಭಿಸಿದ್ದರು. ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ಸಮಯ ಸರಕಾರದ ಶಿಕ್ಷಣ ಇಲಾಖೆಯಿಂದಲೇ ನಿಯೋಜನೆಗೊಂಡು ಬೆಂಗಳೂರಿನ ಸನಾತನ ಕಲಾ ಕ್ಷೇತ್ರದಲ್ಲಿ ಗುರು ವಿ.ಎಸ್. ಕೌಶಿಕ್ ಅವರಲ್ಲಿ ತರಬೇತಿ ಪಡೆದು ನೃತ್ಯದಲ್ಲಿ ಡಿಪ್ಲೋಮಾ ಗಳಿಸಿದ್ದರು.