Advertisement

ಆಂಗ್ಲ ಮಾಧ್ಯಮ: ಇಲಾಖೆಗೆ ಮಾಹಿತಿಯೇ ಇಲ್ಲ

10:28 AM Jan 03, 2019 | Team Udayavani |

ಕೋಲಾರ: ರಾಜ್ಯ ಸರ್ಕಾರ ಮುಂದಿನ ಶೈಕ್ಷಣಿಕ ಸಾಲಿನಿಂದ ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆ ಆರಂಭಿಸಲು ಚಿಂತನೆ ನಡೆಸುತ್ತಿರುವುದು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಗಮನಕ್ಕೆ ಬಂದಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಖುದ್ದು ಈ ವಿಚಾರವನ್ನು ಪ್ರಶ್ನೋತ್ತರ ಸಂದರ್ಭದಲ್ಲಿ ಬಹಿರಂಗಪಡಿಸಿದ್ದರು. ಈ ವಿಚಾರಕ್ಕೆ ಮಾಜಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ರಾಜ್ಯಾದ್ಯಂತ ಕನ್ನಡ ಸಾಹಿತಿಗಳ ವಲಯದಲ್ಲಿ ತೀವ್ರ ಟೀಕೆಯೂ ವ್ಯಕ್ತವಾಗಿತ್ತು. ಆದರೂ, ಆಡಳಿತಾರೂಢ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಸೇರಿ ಹಲವು ಮುಖಂಡರು ಆಂಗ್ಲ ಮಾಧ್ಯಮ ಬೋಧನೆಯನ್ನು ಸಮರ್ಥಿಸಿಕೊಂಡಿದ್ದರು.

Advertisement

ಒಂದು ಮೂಲದ ಪ್ರಕಾರ ಆಂಗ್ಲ ಮಾಧ್ಯಮ ಬೋಧನೆಗೆ ಇಲಾಖೆಯಲ್ಲಿ ಸಿದ್ಧತೆ ನಡೆಸುವಂತೆ 8 ಅಂಶಗಳ ಮಾರ್ಗಸೂಚಿ ಆದೇಶವನ್ನು ಕಳೆದ ಅಕ್ಟೋಬರ್‌ನಲ್ಲಿಯೇ ಶಿಕ್ಷಣ ಇಲಾಖೆ ಹೊರಡಿಸಿದೆ. ಆದರೆ, ಬೆಂಗಳೂರಿಗೆ ಅತಿ ಹತ್ತಿರದ ಕೋಲಾರ ಜಿಲ್ಲೆಯ
ಸಾರ್ವಜನಿಕ ಶಿಕ್ಷಣ ಇಲಾಖೆಗೆ ಈ ಕುರಿತು ಇದುವರೆಗೂ ಮಾಹಿತಿ ತಲುಪಿಲ್ಲ. ಈ ಗೊಂದಲ ಗಮನಿಸಿದರೆ ಆಂಗ್ಲ ಮಾಧ್ಯಮ ಬೋಧನೆ ಕುರಿತಂತೆ ಶಿಕ್ಷಣ ಇಲಾಖೆ ಹಂತದಲ್ಲಿಯೇ ಗೊಂದಲ ಇರುವುದು ಸ್ಪಷ್ಟವಾಗುತ್ತದೆ.

ಆಂಗ್ಲ ಮಾಧ್ಯಮ ಶಾಲೆಗಳು: ಜಿಲ್ಲೆಯಲ್ಲಿ ಸದ್ಯಕ್ಕೆ ಆಂಗ್ಲ ಮಾಧ್ಯಮ ಬೋಧಿಸುವ ಸರ್ಕಾರಿ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಇಲ್ಲವಾದರೂ, ಸ್ಥಳೀಯರ ಬೇಡಿಕೆಗನುಗುಣವಾಗಿ ಆಂಗ್ಲ ಮಾಧ್ಯಮದಲ್ಲಿ ಬೋಧಿಸುವ ತರಗತಿಗಳನ್ನು ಈಗಾಗಲೇ ಆರಂಭಿಸಲಾಗಿದೆ. ಕೋಲಾರ ಜಿಲ್ಲೆಯ 11 ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಇಲಾಖೆ ಅನುಮತಿ ಪಡೆದು ಆಂಗ್ಲ
ಮಾಧ್ಯಮದಲ್ಲಿ ಬೋಧನೆ ಆರಂಭಿಸಲಾಗಿದೆ. ಮುಳಬಾಗಿಲು ಬಾಂಗ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀನಿವಾಸಪುರ ತಾಲೂಕಿನ ಗೌಡತಾತನಗುಡ್ಡ, ಕೋಲಾರ ತಾಲೂಕಿನ ಕೆಂಬೋಡಿ, ಕ್ಯಾಲನೂರಿನ ಉರ್ದು ಮತ್ತು ಕನ್ನಡ ಶಾಲೆ, ಮಾಲೂರು ತಾಲೂಕಿನ ದಿನ್ನಹಳ್ಳಿ, ಎಂ.ಸಿ.ಹಳ್ಳಿ, ಕುಡಿಯನೂರು, ಅರಳೇರಿ, ಸಂಪಂಗೆರೆ, ಬಂಗಾರಪೇಟೆ ತಾಲೂಕಿನ ಕಾಮ ಸಮುದ್ರ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದು ತರಗತಿಯನ್ನು 6 -8ನೇ ತರಗತಿವರೆಗೂ ಆಂಗ್ಲ ಮಾಧ್ಯಮವನ್ನು ಬೋಧಿಸಲಾಗುತ್ತಿದೆ.

ಪ್ರೌಢಶಾಲೆಗಳಲ್ಲಿ ಆಂಗ್ಲ ಮಾಧ್ಯಮ: ಜಿಲ್ಲೆಯ ಒಟ್ಟು 124 ಸರ್ಕಾರಿ ಪ್ರೌಢಶಾಲೆಗಳ ಪೈಕಿ ಪದವಿ ಪೂರ್ವ ಕಾಲೇಜುಗಳಿಗೆ ಹೊಂದಿಕೊಂಡಂತಿರುವ ಪ್ರೌಢಶಾಲೆಗಳಲ್ಲಿ ಮತ್ತು ಇನ್ನಿತರ ಪ್ರೌಢಶಾಲೆ ಸೇರಿ ಒಟ್ಟು 23 ಶಾಲೆಗಳಲ್ಲಿ ಪೋಷಕರ ಬೇಡಿಕೆ ಮತ್ತು ಶಾಲೆ ಸಂಪನ್ಮೂಲ ಆಧರಿಸಿ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಸಲುವಾಗಿ 1 ತರಗತಿಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡಲಾಗುತ್ತಿದೆ.

ಬಂಗಾರಪೇಟೆ ಬಾಲಕಿಯರ-ಬಾಲಕರ ಪ್ರೌಢಶಾಲೆ, ಆದರ್ಶ ಶಾಲೆ, ಕೆಜಿಎಫ್ನ ಬಾಲಕಿಯರ-ಬಾಲಕರ ಪ್ರೌಢಶಾಲೆ, ಕಾಮಸಮುದ್ರ, ಕೋಲಾರ ಜೂನಿಯರ್‌ ಕಾಲೇಜು, ಕೋಲಾರ ಬಾಲಕರ ಜೂನಿಯರ್‌ ಕಾಲೇಜಿನ ಪ್ರೌಢಶಾಲೆ, ನರಸಾಪುರ ಪ್ರೌಢಶಾಲೆ, ವೇಮಗಲ್‌, ಕ್ಯಾಲನೂರು, ಅರಾಭಿಕೊತ್ತನೂರು, ನೂತನ ಸರ್ಕಾರಿ ಪ್ರೌಢಶಾಲೆ, ಮಾಸ್ತಿ, ಮಾಲೂರು ಬಾಲಕರ ಪ್ರೌಢಶಾಲೆ, ಮಾಲೂರು ಪದವಿ ಪೂರ್ವ ಕಾಲೇಜು, ಮುಳಬಾಗಿಲಿನ ಬಾಲಕಿಯರ-ಬಾಲಕರ ಪದವಿ ಪೂರ್ವ ಕಾಲೇಜು, ಆವಣಿ ಪಿಯು ಕಾಲೇಜು, ಶ್ರೀನಿವಾಸಪುರ ಬಾಲಕರ – ಬಾಲಕಿಯರ ಪದವಿ ಪೂರ್ವ ಕಾಲೇಜುಗಳು, ಶ್ರೀನಿವಾಸಪುರ ಆದರ್ಶ ಕಾಲೇಜು, ದಳಸನೂರು ಜೂನಿಯರ್‌ ಕಾಲೇಜಿನಲ್ಲಿಯೂ ಅಂಗ್ಲ ಮಾಧ್ಯಮ ತರಗತಿ ಆರಂಭಿಸಲಾಗಿದೆ.

Advertisement

ಇದಲ್ಲದೆ ಕೋಲಾರ ಜಿಲ್ಲೆಯ 3 ಆದರ್ಶ ಶಾಲೆಗಳು, 11 ಮೊರಾರ್ಜಿ ದೇಸಾಯಿ ಶಾಲೆ, 3 ಕಿತ್ತೂರು ಚೆನ್ನಮ್ಮ ಶಾಲೆ, 1 ಏಕಲವ್ಯ ಶಾಲೆಯಲ್ಲಿಯೂ ಆಂಗ್ಲ ಮಾಧ್ಯಮದ ತರಗತಿ ನಡೆಸಲಾಗುತ್ತಿದೆ.

ಶಿಕ್ಷಕರ ಸಮಸ್ಯೆಇಲ್ಲ: ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮ ಬೋಧನೆ ಆರಂಭಿಸಲು ಸದ್ಯಕ್ಕೆ ಶಿಕ್ಷಕರ ಕೊರತೆ ಇಲ್ಲವೆಂದು ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸರ್ಕಾರ-ಶಿಕ್ಷಣ ಇಲಾಖೆಯಲ್ಲಿನ ಗೊಂದಲ ನಿವಾರಿಸಿ, ಪರ ವಿರೋಧ ಶಮನಗೊಳಿಸಿ ಸರ್ಕಾರ ಏಕಮುಖದಲ್ಲಿ ಆಂಗ್ಲ ಮಾಧ್ಯಮ ಬೋಧನೆ ಆರಂಭಿಸಿದರೆ ಕೋಲಾರದಂತಹ ಗ್ರಾಮೀಣ ವಿದ್ಯಾರ್ಥಿಗಳು ಖಾಸಗಿ ಶಾಲೆಗೆ ಸೇರ್ಪಡೆಯಾಗುವುದು, ಸ್ಪರ್ಧಾತ್ಮ ಜಗತ್ತು ಎದುರಿಸಲು ಅನುಕೂಲವಾಗುತ್ತದೆ ಎಂದು ಎಂಬುದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ದಶಕಗಳ ಹಿಂದೆಯೇ ಆಂಗ್ಲ ಶಾಲೆ ಶುರು ಕರ್ನಾಟಕ ಸರ್ಕಾರ ಈಗ ಒಂದು ಸಾವಿರ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಬೋಧಿಸಲು ಸಿದ್ಧತೆ ನಡೆಸುತ್ತಿದ್ದರೆ, ಕೋಲಾರ ಜಿಲ್ಲೆ ಹಲವು ವರ್ಷಗಳಿಂದಲೂ ಆಂಗ್ಲ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಯೊಂದನ್ನು ಹೊಂದಿರುವುದು ವಿಶೇಷ. ಕೋಲಾರ ಜಿಲ್ಲೆಯ ಬಹು ಭಾಷಿಕರ ಚಿನ್ನದ ಗಣಿ ಪ್ರದೇಶ, ಬೆಮೆಲ್‌ ಕಾರ್ಖಾನೆ ಹೊಂದಿರುವ ಕೆಜಿಎಫ್ನ ಬೆಮೆಲ್‌ ನಗರದಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯನ್ನು ದಶಕಗಳಿಂದಲೂ ನಡೆಸಲು ಪರವಾನಗಿ ನೀಡಲಾಗಿದೆ. ಒಂದು ಅಂದಾಜಿನ ಪ್ರಕಾರ ಇದು ಇಡೀ ರಾಜ್ಯದಲ್ಲಿಯೇ ಮೊಟ್ಟ ಮೊದಲ ಸರ್ಕಾರಿ ಆಂಗ್ಲ
ಮಾಧ್ಯಮ ಶಾಲೆಯಾಗಿದೆ. ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗಾಗಿಯೇ ಪ್ರೌಢ ಶಾಲೆಯನ್ನು ಆಂಗ್ಲ ಮಾಧ್ಯಮದಲ್ಲಿಯೇ ಬೋಧಿಸುವ ಶಾಲೆಯೂ ಕೆಜಿಎಫ್ ಭಾಗದಲ್ಲಿರುವುದು ವಿಶೇಷ.

ಇಲಾಖೆಯಿಂದ ಯಾವುದೇ ಆದೇಶ ನಮಗೆ ಬಂದಿಲ್ಲ ಆಂಗ್ಲ ಮಾಧ್ಯಮ ಬೋಧನೆ ಶಾಲೆ ಆರಂಭಿಸುವ ಕುರಿತಂತೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಸರ್ಕಾರ-ಇಲಾಖೆ ಆದೇಶಗಳು ಬಂದ ನಂತರ ಮಾರ್ಗಸೂಚಿ ಆಧಾರದ ಮೇಲೆ ಆಂಗ್ಲ ಮಾಧ್ಯಮ ಬೋಧನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೋಲಾರ ಡಿಡಿಪಿಐ ಕೆ.ರತ್ನಯ್ಯ ತಿಳಿಸಿದ್ದಾರೆ. 

ಸರ್ಕಾರ ಆಂಗ್ಲ ಮಾಧ್ಯಮ ಬೋಧನೆ ಶಾಲೆ ಆರಂಭಿಸುವುದು ಸ್ವಾಗತಾರ್ಹ. ಶಿಕ್ಷಣ ಇಲಾಖೆ ಪರಿಣಿತ ಶಿಕ್ಷಕರನ್ನು ನೇಮಕ
ಮಾಡಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಕಾಟಾಚಾರದಿಂದ ಆಂಗ್ಲ ಬೋಧನೆ ಆರಂಭಿಸುವುದು ಸರಿಯಲ್ಲ.
  ಕೆ.ರಾಮಮೂರ್ತಿ, ಜನಾಧಿಕಾರ ಸಂಘಟನೆ, ಕೋಲಾರ

ಜಿಲ್ಲೆಗೆಷ್ಟು ಆಂಗ್ಲ ಮಾಧ್ಯಮ ಶಾಲೆ?
ರಾಜ್ಯ ಸರ್ಕಾರ 1 ಸಾವಿರ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆ ಆರಂಭಿಸುವ ಚಿಂತನೆ ನಡೆಸುತ್ತಿದ್ದು, ಇದರ ಅಂದಾಜಿನ ಪ್ರಕಾರ ಪ್ರತಿ ಜಿಲ್ಲೆಗೂ ಸರಿಸಮನಾದ ಶಾಲೆ ದೊರೆತಲ್ಲಿ ಕೋಲಾರ ಜಿಲ್ಲೆಗೆ 30 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆ ಆರಂಭಿಸಬೇಕಾಗುತ್ತದೆ. ಒಂದು ವೇಳೆ ಚಿಕ್ಕ ಜಿಲ್ಲೆಗಳಿಗೆ ಕಡಿಮೆ ಶಾಲೆ ದೊರೆತಲ್ಲಿ ಕೋಲಾರ ಜಿಲ್ಲೆಗೆ 50 -60 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಬೋಧನೆಗೆ ಅವಕಾಶ ಸಿಗಲಿದೆ. ಶಿಕ್ಷಣ ಇಲಾಖೆ ಪ್ರಕಾರ ಈಗಾಗಲೇ ತರಗತಿ ಯೊಂದರಲ್ಲಿ ಆಂಗ್ಲ ಮಾಧ್ಯಮ ಬೋಧಿಸುತ್ತಿರುವ ಶಾಲೆಗಳಿಗೆ ಮೊದಲ ಆದ್ಯತೆ ನೀಡಿ, ನಂತರ ಹೆಚ್ಚು ವಿದ್ಯಾರ್ಥಿಗಳಿರುವ ಪ್ರೌಢಶಾಲೆಗಳನ್ನು ಆಂಗ್ಲ ಮಾಧ್ಯಮ ಬೋಧನೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೋಲಾರ ಜಿಲ್ಲೆಯ 6 ತಾಲೂಕುಗಳಿಗೂ ತಲಾ ಐದರಿಂದ ಹತ್ತು ಶಾಲೆ ಹೀಗೆ ಆಯ್ಕೆಯಾಗುವ ಸಾಧ್ಯತೆಗಳಿವೆ. ಇಲಾಖೆಯಿಂದ ಸ್ಪಷ್ಟವಾದ ಮಾರ್ಗದರ್ಶನ ಬಂದ ನಂತರ ಶಾಲೆಗಳ ಪಟ್ಟಿ ಪ್ರಕಟಿಸಲಾಗುತ್ತದೆ.

 ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next