Advertisement

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನಲ್ಲಿ ಆಂಗ್ಲ ಮಾಧ್ಯಮ

07:56 PM Jun 08, 2019 | mahesh |

ಪುಂಜಾಲಕಟ್ಟೆ: ವಿದ್ಯಾರ್ಥಿಗಳ ಉನ್ನತ ಭವಿಷ್ಯ ರೂಪಿಸಲು ಸರಕಾರ ಕೈಗೊಂಡ ಯೋಜನೆಯನ್ವಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗೆ ಆಯ್ಕೆಯಾದ ಬೆಳ್ತಂಗಡಿ ತಾಲ|ನ ಕುಕ್ಕಳ ಗ್ರಾಮದ ಪುಂಜಾಲಕಟ್ಟೆ ಸ.ಹಿ.ಪ್ರಾ. ಶಾಲೆಯಲ್ಲಿ ಪ್ರಸಕ್ತ ವರ್ಷದಿಂದ 1ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಸೇರ್ಪಡೆಯಾಗಿದೆ.

Advertisement

ಬೆಳ್ತಂಗಡಿ – ಬಂಟ್ವಾಳ ತಾ|ನ ಗಡಿ ಭಾಗವಾಗಿರುವ ಪುಂಜಾಲಕಟ್ಟೆಯಲ್ಲಿ, ಪೇಟೆಯ ಹೃದಯ ಭಾಗದಿಂದ ದೂರ ವಾಗಿ, ರಾಷ್ಟ್ರೀಯ ಹೆದ್ದಾರಿ ಪಕ್ಕ ಈ ಶಾಲೆ ಕಾರ್ಯಾಚರಿಸುತ್ತಿದ್ದು, ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ಅಮೃತ ಮಹೋತ್ಸವ
1927ರಲ್ಲಿ ಸ್ಥಾಪನೆಯಾದ ಈ ಶಾಲೆ 2004ರಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದು, ವಿದ್ಯಾಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಹೊಂದಿದೆ. ವಿಶಾಲ ಮೈದಾನದ ಪ್ರದೇಶದಲ್ಲಿ 1ರಿಂದ 8ನೇ ತರಗತಿಯವರೆಗೆ ಪ್ರಾ. ವಿಭಾಗವಾಗಿದ್ದು, ಇದೇ ಸಂಕೀರ್ಣದಲ್ಲಿ ಪ್ರೌಢಶಾಲೆ, ಪದವಿ ಪೂರ್ವ ತರಗತಿಗಳನ್ನು ಹೊಂದಿದೆ.

ಕಂಪ್ಯೂಟರ್‌ ಶಿಕ್ಷಣ
ಪ್ರಸ್ತುತ ಪ್ರಾಥಮಿಕ ವಿಭಾಗದಲ್ಲಿ 450 ವಿದ್ಯಾರ್ಥಿಗಳಿದ್ದು, 6ರಿಂದ 8ನೇ ತರಗತಿಯವರೆಗೆ ಒಂದು ವಿಭಾಗ ಆಂಗ್ಲ ಮಾಧ್ಯಮವಾಗಿದೆ. ಪ್ರಸ್ತುತ ವರ್ಷ ದಿಂದ ಎಲ್‌ಕೆಜಿ ಮತ್ತು ಒಂದನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭವಾಗಿದೆ. ಎಲ್‌ಕೆಜಿ, ಯು ಕೆಜಿಗೆ ದಾನಿಗಳ ಸಹಕಾರದಿಂದ ನೂತನ ಕಟ್ಟಡ ನಿರ್ಮಾಣಗೊಂಡಿದೆ. ಎಲ್ಲ ವಿದ್ಯಾರ್ಥಿಗಳಿಗೆ ಕಂಪ್ಯೂಟರ್‌ ಶಿಕ್ಷಣವನ್ನು ನೀಡಲಾಗುತ್ತಿದೆ. ಪ್ರೊಜೆಕ್ಟರ್‌ ಬಳಸಿ ನೂತನ ತಂತ್ರಜ್ಞಾನದಲ್ಲಿ ಪಠ್ಯಬೋಧನೆ ಮಾಡಲಾಗುತ್ತಿದೆ.

ಶಾಲೆ ವಿಶಾಲವಾದ ಆಟದ ಮೈದಾನ ಹೊಂದಿದ್ದು, ಉತ್ತಮ ಕ್ರೀಡಾಪಟುಗಳನ್ನು ಮುಖ್ಯವಾಹಿನಿಗೆ ತರುತ್ತಿದೆ. ಶಾಲೆಯಲ್ಲಿ ಕಬ್‌, ಬುಲ್‌ ಬುಲ್‌ ಮತ್ತು ಸೇವಾದಳ ಮುಂತಾದ ಸಂಘಗಳಿದ್ದು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಿದೆ. ಪ್ರಸ್ತುತ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು, ಒಂದನೇ ತರಗತಿ ಆಂಗ್ಲ ಮಾಧ್ಯಮಕ್ಕೆ 31 ವಿದ್ಯಾರ್ಥಿಗಳು, ಕನ್ನಡ ಮಾಧ್ಯಮಕ್ಕೆ 22 ವಿದ್ಯಾರ್ಥಿಗಳು ದಾಖಲಾಗಿದ್ದು, ಉಳಿದ ತರಗತಿಗಳಿಗೆ 100ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

Advertisement

ಬೇಡಿಕೆಗಳು
ಶಾಲೆಯು ಕೆಲವೊಂದು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸುಮಾರು 10 ತರಗತಿ ಕೊಠಡಿಗಳು, ಸುಸಜ್ಜಿತವಾದ ಅಡುಗೆ ಕೋಣೆ, ಸುಸಜ್ಜಿತ ಗ್ರಂಥಾಲಯ, ಪ್ರಯೋಗಾಲಯಗಳು, ಕಂಪ್ಯೂಟರ್‌ ಲ್ಯಾಬ್‌ಗಳ ಕೊರತೆ ಇದೆ. ಸೂಕ್ತವಾದ ಶಾಲಾ ಆವರಣಗೋಡೆಯ ಅಗತ್ಯವಿದೆ.

ಉತ್ತಮ ದಾಖಲಾತಿ
ಪುಂಜಾಲಕಟ್ಟೆ ಪಬ್ಲಿಕ್‌ ಸ್ಕೂಲ್‌ ಸರಕಾರದ ಅನುದಾನದೊಂದಿಗೆ ಜನಪ್ರತಿನಿಧಿಗಳ ನೆರವಿನಿಂದ, ಊರ-ಪರವೂರ ದಾನಿಗಳ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುವಂತಾಗಿದೆ. ಈ ಬಾರಿ ಆಂಗ್ಲ ಮಾಧ್ಯಮದೊಂದಿಗೆ ಕನ್ನಡ ಮಾಧ್ಯಮ ತರಗತಿಗೂ ಉತ್ತಮ ದಾಖಲಾತಿಯಾಗಿದೆ. ಮುಂದಕ್ಕೆ ಅಗತ್ಯ ಸವಲತ್ತುಗಳನ್ನು ಪೂರೈಸಿದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ.
– ಮೋನಪ್ಪ ಕೆ., ಶಾಲಾ ಮುಖ್ಯ ಶಿಕ್ಷಕರು, ಪ್ರಾ. ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next