ಕೋಸ್ಟಲ್‌ವುಡ್‌ನ ಸ್ಟಾರ್ ಡೈರೆಕ್ಟರ್ ಎಂಬ ಮಾನ್ಯತೆ ಪಡೆದ ಸೂರಜ್ ಶೆಟ್ಟಿ ನಿರ್ದೇಶನದ ಉದ್ಯಮಿ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ನಿರ್ಮಾಣದ “ಇಂಗ್ಲಿಷ್’ ಸಿನೆಮಾದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದೆ. ಸದ್ಯ ಎರಡು ಹಾಡುಗಳ ಶೂಟಿಂಗ್ ಮಾತ್ರ ಬಾಕಿ ಇದೆ. ಎಲ್ಲವೂ ಅಂದುಕೊಂಡಂತೆಯಾದರೆ ಆಗಸ್ಟ್‌ನಲ್ಲಿ “ಇಂಗ್ಲಿಷ್’ ತೆರೆಕಾಣಲಿದೆ. ವಾಮಂಜೂರು, ಉಡುಪಿ ಸೇರಿದಂತೆ ಮಂಗಳೂರು ಭಾಗದಲ್ಲಿ ಸುಮಾರು 34 ದಿನ ಶೂಟಿಂಗ್ ಕಂಡಿರುವ ಈ ಸಿನೆಮಾದ ಹಾಡುಗಳ ಶೂಟಿಂಗ್ ಇನ್ನಷ್ಟೇ ನಡೆಯಬೇಕಿದೆ. ಪೂರ್ಣ ಸಿನೆಮಾ ಕಾಮಿಡಿಯಾಗಿ ಮೂಡಿಬಂದಿದ್ದು ಹೊಸ ನಿರೀಕ್ಷೆ ಮೂಡಿಸಿದೆ.
ಬಹುಭಾಷಾ ನಟ ಅನಂತ್‌ನಾಗ್ ಈ ಚಿತ್ರ ದ ಮೂಲಕ ಕೋಸ್ಟಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವುದೇ ಚಿತ್ರದ ಪ್ರಮುಖ ಹೈಲೈಟ್.
ಹುಡುಗನೊಬ್ಬ ಮಾಲ್ ಒಂದರಲ್ಲಿ ಗೊಂಬೆ ವೇಷ ಹಾಕಿ ಕುಣಿಯುವ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿಗೆ ಹುಡುಗಿಯೊಬ್ಬಳು ತನ್ನ ಗೆಳತಿ ಜತೆ ಬರುತ್ತಿರುತ್ತಾಳೆ. ಆ ಹುಡುಗನಿಗೆ ಹುಡುಗಿ ಮೇಲೆ ಇಷ್ಟವಾಗುತ್ತದೆ. ಒಂದು ದಿನ ಆ ಹುಡುಗ ಅಲ್ಲಿಗೆ ಬರುವ ಹುಡುಗಿಗೆ ತನ್ನ ಪ್ರೀತಿಯ ವಿಷಯ ತಿಳಿಸುತ್ತಾನೆ. ಹುಡುಗನಿಗೆ ಇಂಗ್ಲಿಷ್ ಬರುವುದಿಲ್ಲ ಎಂಬ ಕಾರಣಕ್ಕೆ ಆಕೆ ಆತನ ಪ್ರೀತಿ ನಿರಾಕರಿಸುತ್ತಾಳೆ. ನಾನು ಮದುವೆ ಆಗುವುದಾದೆ ಇಂಗ್ಲಿಷ್ ಗೊತ್ತಿದ್ದವನನ್ನು ಎಂದು ಹುಡುಗಿ ಹೇಳುತ್ತಾಳೆ. ಅಂದಿನಿಂದ ಆತ ತನ್ನ ಫ್ರೆಂಡ್ಸ್ ಜತೆ ಸೇರಿ ಇಂಗ್ಲಿಷ್ ಕಲಿಯಲು ಶುರು ಮಾಡುತ್ತಾನೆ. ಹುಡುಗ ಕಷ್ಟಪಟ್ಟು ಇಂಗ್ಲಿಷ್ ಕಲಿಯುವುದನ್ನು ನೋಡಿ ಆ ಹುಡುಗಿಗೆ ಆತನ ಮೇಲೆ ಇಷ್ಟವಾಗುತ್ತದೆ. ಇಬ್ಬರ ನಡುವೆ ಫ್ರೆಂಡ್‌ಶಿಪ್ ಶುರುವಾಗುತ್ತದೆ. ಇದು ಪ್ರೀತಿಗೆ ಬದಲಾಗುತ್ತದೆ. ಹುಡುಗಿ ತನ್ನ ಪ್ರೀತಿಯ ವಿಷಯ ಮನೆಯವರಲ್ಲಿ ತಿಳಿಸುತ್ತಾಳೆ. ಆದರೆ ಮನೆಯವರು ಆತನನ್ನು ಒಪ್ಪಿಕೊಳ್ಳುವುದಿಲ್ಲ. ಕೊನೆಗೆ ಹುಡುಗ ತನ್ನಂತೆಯೇ ಇತರರಿಗೂ ಇಂಗ್ಲಿಷ್ ಕಲಿಸಬೇಕು ಎನ್ನುವ ಉದ್ದೇಶದಿಂದ ಇಂಗ್ಲಿಷ್ ಸ್ಪಿಕಿಂಗ್ ಕ್ಲಾಸ್ ಪ್ರಾರಂಭಿಸುತ್ತಾನೆ.
ಈ ಸಾಧನೆಯನ್ನು ಕಂಡು ಹುಡುಗಿ ಮನೆಯವರಿಗೆ ಆತನ ಮೇಲೆ ಹೆಮ್ಮೆಯಾಗುತ್ತದೆ. ಬಳಿಕ ನಡೆಯುವ ಕಥೆಯೇ “ಇಂಗ್ಲಿಷ್’.
ಕೃಷ್ಣ ಸಾರಥಿ ಛಾಯಾಗ್ರಹಣ- ಸಂಕಲನ ಮನು ಶೇರಿಗಾರ್, ಸಂಗೀತ ಮಣಿಕಾಂತ್ ಕದ್ರಿ, ಸಾಹಿತ್ಯ ಶಶಿರಾಜ್ ಕಾವೂರು, ಅರ್ಜುನ್ ಲೂಯಿಸ್. ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಕೆ. ಸೂರಜ್ ಶೆಟ್ಟಿ ಅವರದ್ದು. ತಾರಾಗಣದಲ್ಲಿ ಪೃಥ್ವಿ ಅಂಬರ್, ನವ್ಯಾ ಪೂಜಾರಿ, ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ ವಾಮಂಜೂರು, ವಿಸ್ಮಯ ವಿನಾಯಕ್, ದೀಪಕ್ ರೈ ಪಾಣಾಜೆ, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಪ್ರಸನ್ನ ಬೈಲೂರು, ರವಿರಾಮ ಕುಂಜ ಬಣ್ಣಹಚ್ಚಿದ್ದಾರೆ.