Advertisement

ಅಂಕಗಳಿಕೆಗೆ ಪೂರಕವಾಗಿರಲಿ ಇಂಗ್ಲಿಷ್‌ ಭಾಷಾ ಪರೀಕ್ಷೆ

09:29 AM Feb 28, 2020 | mahesh |

ಪ್ರಿಯ ವಿದ್ಯಾರ್ಥಿಗಳೇ,
ಎಸೆಸೆಲ್ಸಿಯಲ್ಲಿ ಇಂಗ್ಲಿಷ್‌ ದ್ವಿತೀಯ ಭಾಷೆಯಾಗಿದೆ. ಭಾಷಾ ವಿಷಯ ಎಂಬ ನಿರ್ಲಕ್ಷ್ಯದಿಂದ ನೋಡದೆ ಚೆನ್ನಾಗಿ ಗಮನಹರಿಸಿ ಅಧ್ಯಯನ ಮಾಡಿದರೆ ಅದು ಕೂಡ ಉತ್ತಮ ಅಂಕ ಗಳಿಸಲು ಮತ್ತು ಪರೀಕ್ಷೆಯ ಒಟ್ಟಾರೆ ಶೇಕಡಾವಾರು ಸ್ಕೋರ್‌ ಉತ್ತಮವಾಗಲು ಸಹಾಯವಾಗುತ್ತದೆ. ಇಂಗ್ಲಿಷ್‌ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಅನುಸರಿಸಬೇಕಾದ ಸೂತ್ರಗಳು ಇಲ್ಲಿವೆ.

Advertisement

ವ್ಯವಸ್ಥಿತವಾಗಿ ಅಧ್ಯಯನ ಮಾಡಿ
ನೀವು ಇಂಗ್ಲಿಷ್‌ ಪರೀಕ್ಷೆಗಾಗಿ ಕ್ರಿಯಾತ್ಮಕವಾಗಿ ಅಭ್ಯಾಸ ಮಾಡಬೇಕು. ಪಾಠ ಮತ್ತು ಪದ್ಯಗಳನ್ನು ಓದುವುದರ ಜತೆಗೆ ಅವುಗಳ ಥೀಮ್‌ ಮತ್ತು ಪಾತ್ರಗಳನ್ನು ಅರ್ಥ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಉಪಯೋಗವೆಂದರೆ, ಪಠ್ಯದ ಸಂಪೂರ್ಣ ಸಾರಾಂಶ ನಿಮ್ಮ ಮನಸ್ಸಿನಲ್ಲಿರುತ್ತದೆ ಮತ್ತು ಪ್ರತೀ ವಿವರಕ್ಕೂ ಪುಸ್ತಕ ಬಿಡಿಸಿ ಓದಬೇಕಾದ ಅಗತ್ಯವಿರುವುದಿಲ್ಲ. ಇದರಿಂದ ಆಯಾ ಪಾಠಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗೆ ಗೊಂದಲವಿಲ್ಲದೆ ಸ್ವಂತ ಉತ್ತರಗಳನ್ನು ರೂಪಿಸಲು ನಿಮಗೆ ಸಾಧ್ಯವಾಗುತ್ತದೆ.

 ಪಾತ್ರಗಳು ಅತ್ಯಂತ ಮುಖ್ಯ
ಇಂಗ್ಲಿಷ್‌ನಂತಹ ಭಾಷಾ ವಿಷಯದ ಪರೀಕ್ಷೆ ಎದುರಿಸಲು ತಯಾರಾಗುವ ಪ್ರತೀ ವಿದ್ಯಾರ್ಥಿ ಅನುಭವಿಸುವ ಸಮಸ್ಯೆಯೆಂದರೆ, ವಿವಿಧ ಪಾಠ ಮತ್ತು ಪದ್ಯಗಳಲ್ಲಿರುವ ಅಸಂಖ್ಯ ಪಾತ್ರಗಳ ಹೆಸರುಗಳ ಗೊಂದಲ. ಪ್ರತೀ ಪಾತ್ರವನ್ನು ಅರ್ಥ ಮಾಡಿ ನೆನಪಿನಲ್ಲಿ ಇರಿಸಿಕೊಳ್ಳಲು ನೀವು ಕತೆಯನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಬೇಕು ಮತ್ತು ಆಯಾ ಪಾತ್ರಕ್ಕೆ ಆ ಕತೆಯಲ್ಲಿರುವ ಮಹತ್ವ ನಿಮಗೆ ಮನದಟ್ಟಾಗಬೇಕು. ನಿಮಗೆ ಬೇಕಿದ್ದರೆ ಆಯಾ ಪಾಠಗಳಲ್ಲಿ ಬರುವ ಪಾತ್ರಗಳನ್ನು ಒಂದು ಕಡೆ ಬರೆದಿಟ್ಟುಕೊಳ್ಳಿ; ಆದರೆ ಕಥೆಯ ಸಾರಾಂಶದ ಜತೆಗೆ ಆ ಪಾತ್ರವನ್ನೂ ನೀವು ಅರ್ಥ ಮಾಡಿಕೊಂಡಿರಬೇಕು.

 ಉತ್ತರಿಸುವ ಶೈಲಿಯನ್ನು ತಯಾರಿಸಿಕೊಳ್ಳಿ
ಇಂಗ್ಲಿಷ್‌ ಪರೀಕ್ಷೆಯಲ್ಲಿ ಉತ್ತರ ಬರೆಯುವಾಗ ಪ್ರತೀ ವಿದ್ಯಾರ್ಥಿಯು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ, ಪ್ರಶ್ನೆಪತ್ರಿಕೆಯ ಪ್ಯಾಟರ್ನ್ಗೆ ಅನುಗುಣವಾಗಿ ಉತ್ತರಗಳನ್ನು ಬರೆಯಲು ಸಮಯದ ಅಭಾವ ಎದುರಾಗುವುದು. ಇದಕ್ಕಾಗಿ ದೀರ್ಘ‌ ಉತ್ತರ ಬಯಸುವ ಪ್ರಶ್ನೆಗಳನ್ನು ಆರಂಭದಲ್ಲಿಯೇ ಉತ್ತರಿಸಲು ಪ್ರಯತ್ನಿಸಿ. ಇದರಿಂದಾಗಿ ಪ್ರಶ್ನೆಪತ್ರಿಕೆಯ ಕ್ರಿಯೇಟಿವ್‌ ರೈಟಿಂಗ್‌ ವಿಭಾಗಗಳನ್ನು ಕೈಗೆತ್ತಿಕೊಂಡಾಗ ನಿಮ್ಮ ಮನಸ್ಸಿನ ಭಾರ ಸ್ವಲ್ಪ ಕಡಿಮೆಯಾಗಿ, ಆಲೋಚಿಸಿ ಉತ್ತರಿಸಲು ಸುಲಭವಾಗುತ್ತದೆ.

 ವ್ಯಾಕರಣ ತಪ್ಪು (ಗ್ರೆಮೆಟಿಕಲ್‌ ಎರರ್‌)ಗಳ ಬಗ್ಗೆ ಎಚ್ಚರವಿರಲಿ
ಭಾಷಾ ವಿಷಯಗಳ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ವಿವಿಧ ಪ್ರಶ್ನೆಗಳನ್ನು ಉತ್ತರಿಸುವಾಗ ಮಾಡುವ ಪುಟ್ಟ ಪುಟ್ಟ ವ್ಯಾಕರಣ ತಪ್ಪುಗಳು (ಗ್ರೆಮೆಟಿಕಲ್‌ ಎರರ್‌) ಅಂಕಗಳನ್ನು ಕಳೆದುಕೊಳ್ಳಲು ಕಾರಣವಾಗುವುದು ಸರ್ವ ಸಾಮಾನ್ಯ. ಇದನ್ನು ತಪ್ಪಿಸುವ ಒಂದು ಮಾರ್ಗವೆಂದರೆ, ಉತ್ತರ ಬರೆದಾದ ಬಳಿಕ ಒಂದು ಬಾರಿ ಓದಿಕೊಳ್ಳುವುದು. ಆದ್ದರಿಂದ ಉತ್ತರಗಳನ್ನು ಬರೆದಾದ ಬಳಿಕ ಒಂದು ಬಾರಿ ಕೂಲಂಕಷವಾಗಿ ಓದಿಕೊಳ್ಳಲು ಸಮಯ ಸಿಗುವಂತೆ ಪ್ಲ್ರಾನ್‌ ಮಾಡಿ ಉತ್ತರಿಸಿ.

Advertisement

 ಫಾಮ್ಯಾಟ್‌ ನೆನಪಿಟ್ಟುಕೊಳ್ಳಿ
ಪ್ರಶ್ನೆಪತ್ರಿಕೆಯಲ್ಲಿ ಬರುವ ಪ್ರತೀ ಸೆಕ್ಷನ್‌ನಲ್ಲಿಯೂ ದೀರ್ಘ‌ ಉತ್ತರ ಬಯ ಸುವ ಲೆಟರ್‌ ರೈಟಿಂಗ್‌ ಪ್ರಶ್ನೆಗಳಿರುತ್ತವೆ. ಇಲ್ಲಿ ಬರುವ ಫಾರ್ಮಲ್‌ ಲೆಟರ್‌, ಇನ್‌ಫಾರ್ಮಲ್‌ ಲೆಟರ್‌ಗಳ ನಡುವಣ ವ್ಯತ್ಯಾಸವನ್ನು ನೀವು ನೆನಪಿನಲ್ಲಿಡಬೇಕು. ಅಂಕ ಗಳಿಸಲು ಅದು ಬಹಳ ಮುಖ್ಯ.

“ರೀಡ್‌ ವಾಟ್‌ ಯು ರೈಟ್‌, ರೈಟ್‌ ವಾಟ್‌ ಯು ರೀಡ್‌’
ಇಂಗ್ಲಿಷ್‌ ಪರೀಕ್ಷೆಯಲ್ಲಿ ಅತ್ಯಂತ ಪ್ರಾಮುಖ್ಯ ವಿಚಾರವೆಂದರೆ ಓದು. ಪಠ್ಯಪುಸ್ತಕವನ್ನು ಮನದಟ್ಟಾಗುವಂತೆ ಓದಿಕೊಳ್ಳುವುದರಿಂದ ಹಿಡಿದು, ಪರೀಕ್ಷೆಯಲ್ಲಿ ಉತ್ತರ ಬರೆದಾದ ಬಳಿಕ ವ್ಯಾಕರಣ ಮತ್ತು ಇತರ ತಪ್ಪುಗಳನ್ನು ಕಂಡುಹಿಡಿಯಲು ಓದುವುದರ ತನಕ ಓದು ಬಹಳ ಗಮನವಿರಿಸಿ ನಡೆಯಬೇಕು. ಪರಿಣಾಮಕಾರಿ ಓದು ಪರಿಣಾಮಕಾರಿ ಬರವಣಿಗೆಗೆ ದಾರಿ ಮಾಡಿಕೊಡುತ್ತದೆ.

ಪದ್ಯ (ಪೋಯಮ್‌) ಕಂಠಪಾಠಕ್ಕೆ ಟಿಪ್ಸ್‌
1 ಪದ್ಯದ ಅನುಭವ, ಲಯ ಮತ್ತು ಪ್ರಾಸ
((feel of the poem, the rhyme and rhythem)) ಉಂಟಾಗಲು ಕೆಲವು ಬಾರಿ ಗಟ್ಟಿಯಾಗಿ ಓದಿಕೊಳ್ಳಿ.

2 ಪದ್ಯದ ಕಥಾಸಾರಾಂಶ ಅಥವಾ ಸಾರವನ್ನು
ನಿಮ್ಮ ಮಿದುಳಿನಲ್ಲಿ ಸ್ಥಾಪಿಸಿಕೊಳ್ಳಿ.

3 ಪ್ರತಿಯೊಂದು ವರ್ಸ್‌ (verse)ಗಳ ನಡುವೆ ಇರುವ ಸಂಬಂಧ ವನ್ನು ಮನಸ್ಸಿನಲ್ಲಿ ಸ್ಥಾಪಿಸಿಕೊಳ್ಳಿ. ಅದರಲ್ಲೂ ಹೊಸ ಸಾಲಿನೊಂದಿಗೆ ಆರಂಭವಾಗುವ ವರ್ಸ್‌ಗಳನ್ನು ಇನ್ನೂ ಚೆನ್ನಾಗಿ ನೆನಪಿಡಿ.

4 ಒಂದು ಇನ್ನೊಂದರ ಜತೆಗೆ ಪ್ರಾಸವಾಗುವ (rhyme with one another) ಪದಗಳನ್ನು ನೆನಪಿರಿಸಿಕೊಳ್ಳಿ.

5 ಪದ್ಯದ ಪ್ರತೀ ಹೊಸ ಸಾಲನ್ನು ಕಂಠಪಾಠ ಮಾಡುವುದಕ್ಕಾಗಿ ಎತ್ತಿಕೊಳ್ಳುವಾಗ ಪದ್ಯದ ಪ್ರಾರಂಭದಿಂದಲೇ ಆರಂಭಿಸಿ.


Advertisement

Udayavani is now on Telegram. Click here to join our channel and stay updated with the latest news.

Next