ದಾವಣಗೆರೆ: ಕೋವಿಡ್ ವೈರಸ್ ದಾಳಿ ಹಿನ್ನೆಲೆ, ಲಾಕ್‌ಡೌನ್‌ನಿಂದ ಮುಂದೂಡಲ್ಪಟ್ಟಿದ್ದ ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆ ಜೂ. 18 ರಂದು ನಡೆಯಲಿದ್ದು, ಜಿಲ್ಲೆಯ 16,081 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
ಮಾ. 4 ರಿಂದ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ಮಾ. 23 ರಂದು ನಿಗದಿಯಾಗಿದ್ದ ಇಂಗ್ಲಿಷ್ ವಿಷಯ ಪರೀಕ್ಷೆಗೆ ಒಂದು ದಿನದ ಮುನ್ನ ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಇಂಜಿನಿಯರಿಂಗ್, ವೈದ್ಯಕೀಯ, ಪಶು ವೈದ್ಯಕೀಯ ಒಳಗೊಂಡಂತೆ ಇತರೆ ವೃತ್ತಿಪರ ಕೋರ್ಸ್‌ಗೆ ಸೇರುವ ಗುರಿ ಹೊಂದಿರುವ ವಿದ್ಯಾರ್ಥಿಗಳು ಆಂಗ್ಲ ಭಾಷೆಯ ಪರೀಕ್ಷೆ ಬರೆಯದೆ ಪರೀಕ್ಷೆಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಈಗ ಪರೀಕ್ಷೆಗೆ ಕಾಲ ಕೂಡಿ ಬಂದಿದೆ.
ಲಾಕ್‌ಡೌನ್ ತೆರವಿನ ನಂತರ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಹೆಚ್ಚಳದ ನಡುವೆಯೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದೆ. ಕೋವಿಡ್-19 ನಿಯಂತ್ರಣದ ನಿಟ್ಟಿನಲ್ಲಿ ವಿದ್ಯಾರ್ಥಿìಗಳ ಕ್ಷೇಮಕ್ಕಾಗಿ ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಜಿಲ್ಲಾಡಳಿತ ಸಹಕಾರದಿಂದ ಸ್ವತ್ಛತೆ ಮತ್ತು ಸ್ಯಾನಿಟೇಷನ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸಾಮಾಜಿಕ ಅಂತರ ಕಾಯ್ದಿರಿಸಲು 1 ಮೀಟರ್ ಅಂತರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗದು ಎಂಬ ಉದ್ದೇಶದಿಂದ ಎಲ್ಲಾ ಗ್ರಾಮೀಣ ಪ್ರದೇಶಗಳಿಂದ ಸಾರಿಗೆ ವ್ಯವಸ್ಥೆಯನ್ನು 14 ಮಾರ್ಗವಾಗಿ ಕಲ್ಪಿಸಲಾಗಿದೆ. ದಾವಣಗೆರೆ ತಾಲೂಕಿನಲ್ಲಿ ಒಟ್ಟಾರೆ 9,375, ಹರಿಹರದಲ್ಲಿ 1,797, ಜಗಳೂರಿನಲ್ಲಿ 1,286, ಹೊನ್ನಾಳಿಯಲ್ಲಿ 1,620, ಚನ್ನಗಿರಿಯಲ್ಲಿ 1,932 ವಿದ್ಯಾರ್ಥಿಗಳು ಆಂಗ್ಲ ಭಾಷಾ ಪರೀಕ್ಷೆ ಬರೆಯಲಿದ್ದಾರೆ.
ದಾವಣಗೆರೆ ನಗರದಲ್ಲಿ 16, ತಾಲೂಕಿನ ಆನಗೋಡು ಗ್ರಾಮದಲ್ಲಿ ಒಂದು ಪರೀಕ್ಷಾ ಕೇಂದ್ರ ಒಳಗೊಂಡಂತೆ ಒಟ್ಟು 17 ಕೇಂದ್ರಗಳಿವೆ. ಜಿಲ್ಲೆಯಲ್ಲಿ ಮೊದಲು 31 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ 5 ವಿಷಯಗಳ ಪರೀಕ್ಷೆ ನಡೆಸಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕಾದ ಹಿನ್ನೆಲೆಯಲ್ಲಿ 15 ಬ್ಲಾಕ್ ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಲಾಗಿದೆ. ಕೊರೊನಾ, ಲಾಕ್‌ಡೌನ್ ಮುನ್ನ 31 ಪರೀಕ್ಷಾ ಕೇಂದ್ರಗಳಲ್ಲಿ 794 ಕೊಠಡಿ ನಿಗದಿಪಡಿಸಲಾಗಿತ್ತು. ಈಗ ಹೆಚ್ಚುವರಿಯಾಗಿ 145 ಕೊಠಡಿ ನಿಗದಿ ಮಾಡಲಾಗಿದೆ. ಒಟ್ಟಾರೆ 939 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. ಕೋವಿಡ್-19 ಹಿನ್ನೆಲೆಯಲ್ಲಿ ತಮ್ಮ ಮೂಲ ಜಿಲ್ಲೆ, ಸ್ಥಳಗಳಲ್ಲಿ ಪರೀಕ್ಷೆ ಬರೆಯುವುದಾಗಿ 384 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆ ಎಲ್ಲರೂ ಮತ್ತೆ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಕೋವಿಡ್ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ, ಕೈಗೊಂಡಿರುವ ಅಗತ್ಯ ಸುರಕ್ಷಾ ಕ್ರಮಗಳ ನಡುವೆಯೇ ದ್ವಿತೀಯ ಪಿಯು ವಿದ್ಯಾರ್ಥಿಗಳು ಆಂಗ್ಲ ಭಾಷಾ ವಿಷಯದ ಪರೀಕ್ಷೆಗೆ ಸಜ್ಜಾಗಿದ್ದಾರೆ. ಜಿಲ್ಲಾಡಳಿತ, ಪಿಯು ಶಿಕ್ಷಣ ಮಂಡಳಿ ಯಾವುದೇ ಭಯಕ್ಕೆ ಆಸ್ಪದ ಇಲ್ಲದೆ ಯಶಸ್ವಿಯಾಗಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಂಡಿವೆ.
-ರಾ. ರವಿಬಾಬು