ಮುದ್ದೇಬಿಹಾಳ: ಕೋವಿಡ್ ಸೋಂಕಿನ ಆತಂಕ ಮತ್ತು ತಾಲೂಕಾಡಳಿತ ಕಟ್ಟೆಚ್ಚರದ ನಡುವೆ ಗುರುವಾರ ಪಿಯು ದ್ವಿತೀಯ ವರ್ಷದ ಇಂಗ್ಲೀಷ್ ಪರೀಕ್ಷೆ ಯಶಸ್ವಿಯಾಗಿ ಮುಗಿದಿದೆ.
ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ಸೋಂಕಿನ ಪ್ರಕರಣ ಕಂಡುಬಂದಿಲ್ಲ. ಒಂದೆರಡು ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮುಖಕ್ಕೆ ಮಾಸ್ಕ್ ಧರಿಸಿದ್ದರಿಂದ ಉಸಿರುಗಟ್ಟಿದಂತಾಗಿ ತೊಂದರೆ ಉಂಟಾಗಿತ್ತು. ತಕ್ಷಣ ಕೇಂದ್ರದಲ್ಲಿದ್ದ ಆರೋಗ್ಯ ಸಿಬ್ಬಂದಿ ಅಂಥವರ ನೆರವಿಗೆ ಧಾವಿಸಿ ಮಾಸ್ಕ್ ತೆಗೆಸಿ ಉಸಿರಾಟ ಸರಾಗವಾಗುವಂತೆ ನೋಡಿಕೊಂಡು ಆತಂಕ ನಿವಾರಿಸಿದರು.
ಮುದ್ದೇಬಿಹಾಳ, ತಾಳಿಕೋಟೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 6 ಪರೀಕ್ಷಾ ಕೇಂದ್ರಗಳಿದ್ದು 3869 ವಿದ್ಯಾರ್ಥಿಗಳ ಪೈಕಿ 3659 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. 210 ವಿದ್ಯಾರ್ಥಿಗಳು ಗೈರಾಗಿದ್ದರು. ಪ್ರತಿಯೊಂದು ಕೇಂದ್ರದಲ್ಲಿ ತಲಾ ಇಬ್ಬರು ಉಪನ್ಯಾಸಕರನ್ನು ಥರ್ಮಲ್ ಸ್ಕ್ರೀನಿಂಗ್ ಗೆ, ಸ್ಯಾನಿಟರೈಸಿಂಗ್‌ಗೆ ಬಳಸಿಕೊಳ್ಳಲಾಗಿತ್ತು. ಝಿಗ್‌ಜಾಗ್ ಮಾದರಿಯಲ್ಲಿ ಆಸನಗಳ ವ್ಯವಸ್ಥೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು ಎಂದು ಸರ್ಕಾರಿ ಪಪೂ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್ .ಅಂಗಡಿ ಉದಯವಾಣಿಗೆ ಮಾಹಿತಿ ನೀಡಿದರು.
ಸ್ಕ್ರೀನಿಂಗ್ ಕಾರಣ ವಿದ್ಯಾರ್ಥಿಗಳು ಕೇಂದ್ರಗಳಿಗೆ ಸರದಿಯಲ್ಲಿ ಪ್ರವೇಶಿಸುವ ವ್ಯವಸ್ಥೆ ಮಾಡಿದ್ದರಿಂದ ಕೇಂದ್ರದ ಹೊರಗೆ ರಸ್ತೆಯಲ್ಲೂ ವಿದ್ಯಾರ್ಥಿಗಳ ಸರದಿ ಸಾಲು ಕಂಡು ಬಂದವು. ನಾಗರಬೆಟ್ಟ ಪರೀಕ್ಷಾ ಕೇಂದ್ರ ಸೇರಿದಂತೆ ರಸ್ತೆ ಪಕ್ಕದಲ್ಲಿರುವ ಕೇಂದ್ರಗಳ ಎದುರು ವಿದ್ಯಾರ್ಥಿಗಳನ್ನು ಕರೆತಂದಿದ್ದ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪರೀಕ್ಷೆಗೆ ಸಂಬಂಧಿ ಸಿದವರನ್ನು ಹೊರತುಪಡಿಸಿ ಉಳಿದವರನ್ನು ಕೇಂದ್ರದ ಒಳಗೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿತ್ತು.
ಸಿಪಿಐ ಆನಂದ ವಾಗಮೋಡೆ, ಪಿಎಸೈಗಳಾದ ಮಲ್ಲಪ್ಪ ಮಡ್ಡಿ, ವಸಂತ ಬಂಡಗಾರ ಪರೀಕ್ಷಾ ಕೇಂದ್ರದಲ್ಲಿ ಬಿಗಿಬಂದೋಬಸ್ತ್ ಉಸ್ತುವಾರಿ ನೋಡಿಕೊಂಡರು. ತಹಶೀಲ್ದಾರ್ ಜಿ.ಎಸ್. ಮಳಗಿ, ಬಿಇಒ ರೇಣುಕಾ ಕಲಬುರ್ಗಿ ಸೇರಿದಂತೆ ಪರೀಕ್ಷಾ ಉಸ್ತುವಾರಿ ಅಧಿಕಾರಿಗಳು ಎಲ್ಲೆಡೆ ಸಂಚರಿಸಿ ನಕಲು ತಡೆಗಟ್ಟಲು ಶ್ರಮಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸಿ.ಬಿ. ವಿರಕ್ತಮಠ, ತಂಗಡಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ದಶವಂತ ನೇತೃತ್ವದ ಆರೋಗ್ಯ ಸಿಬ್ಬಂದಿ ತಂಡ ಪ್ರತಿಯೊಂದು ಕೇಂದ್ರದಲ್ಲಿ ಬೀಡುಬಿಟ್ಟು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಿಗಾ ವಹಿಸಿತ್ತು.
ಸ್ಯಾನಿಟೈಸರ್-ಮಾಸ್ಕ್ ಬಳಕೆ: ಪರೀಕ್ಷೆ ಎದುರಿಸುವ ಎಲ್ಲ ವಿದ್ಯಾರ್ಥಿಗಳಿಗೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಉಚಿತವಾಗಿ ಪೂರೈಸಿದ್ದ ಮಾಸ್ಕ್, 100 ಎಂಎಲ್ ಸ್ಯಾನಿಟೈಸರ್ ಬಾಟಲ್‌ಗಳನ್ನು ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದಲ್ಲೇ ಹಂಚಿಕೆ ಮಾಡಲಾಗಿತ್ತು.