Advertisement

ಇಂಗ್ಲೆಂಡನ್ನು ಗೆಲ್ಲಿಸಿದ ರೂಟ್‌

09:16 AM Jun 16, 2019 | Team Udayavani |

ಸೌತಾಂಪ್ಟನ್‌: ರೂಟ್‌ ಅವರ ಅಜೇಯ ಶತಕ ಹಾಗೂ ಬೇರ್‌ಸ್ಟೋ ಮತ್ತು ಕ್ರಿಸ್‌ ವೋಕ್ಸ್‌ ಅವರ ಭರ್ಜರಿ ಆಟದಿಂದಾಗಿ ಆತಿಥೇಯ ಇಂಗ್ಲೆಂಡ್‌ ಮತ್ತೆ ಭರ್ಜರಿ ಆಟವಾಡಿ ವಿಜೃಂಭಿಸಿದೆ. ವೆಸ್ಟ್‌ ಇಂಡೀಸ್‌ ಮೊತ್ತವನ್ನು 212 ರನ್ನಿಗೆ ನಿಯಂತ್ರಿಸಲು ಯಶಸ್ವಿಯಾದ ಇಂಗ್ಲೆಂಡ್‌ ಬ್ಯಾಟಿಂಗ್‌ನಲ್ಲೂ ಮಿಂಚಿ 33.1 ಓವರ್‌ಗಳಲ್ಲಿ ಕೇವಲ 2 ವಿಕೆಟ್‌ ನಷ್ಟದಲ್ಲಿ ಗುರಿ ತಲುಪಿ ಜಯಭೇರಿ ಬಾರಿಸಿದೆ. ಈ ಗೆಲುವಿನಿಂದ ಇಂಗ್ಲೆಂಡ್‌ ತಾನಾಡಿದ ನಾಲ್ಕು ಪಂದ್ಯಗಳಿಂದ ಮೂರರಲ್ಲಿ ಗೆಲುವು ಪಡೆದು ಆರಂಕದೊಂದಿಗೆ ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.

Advertisement

ಗೆಲ್ಲಲು 213 ರನ್‌ ಗಳಿಸುವ ಗುರಿ ಪಡೆದ ಇಂಗ್ಲೆಂಡಿಗೆ ಜಾನಿ ಬೇರ್‌ಸ್ಟೋ ಮತ್ತು ಜೋ ರೂಟ್‌ ಉತ್ತಮ ಆರಂಭ ಒದಗಿಸಿದರು. ವಿಂಡೀಸ್‌ ದಾಳಿಯನ್ನು ನಿರ್ದಾಕ್ಷೀಣ್ಯವಾಗಿ ದಂಡಿಸಿದ ಅವರಿಬ್ಬರು ಮೊದಲ ವಿಕೆಟಿಗೆ 14.4 ಓವರ್‌ಗಳಲ್ಲಿ 95 ರನ್‌ ಪೇರಿಸಿ ತಂಡದ ಗೆಲುವು ಖಚಿತಪಡಿಸಿದ್ದರು. ಉತ್ತಮವಾಗಿ ಆಡುತ್ತಿದ್ದ ಬೇರ್‌ಸ್ಟೋ 46 ರನ್‌ ಗಳಿಸಿ ಔಟಾದರು.

ರೂಟ್‌ ಅಜೇಯ ಶತಕ
ರೂಟ್‌ ಅವರನ್ನು ಸೇರಿಕೊಂಡ ಕ್ರಿಸ್‌ ವೋಕ್ಸ್‌ ಭರ್ಜರಿಯಾಗಿ ಆಡಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು. ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ಅವರಿಬ್ಬರು ಚೆಂಡನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದರು. ಓವರಿಗೆ ಆರರಂತೆ ರನ್‌ ಪೇರಿಸಿದರು. ದ್ವಿತೀಯ ವಿಕೆಟಿಗೆ 104 ರನ್‌ ಪೇರಿಸಿದ ಬಳಿಕ ಗೆಲ್ಲಲು 14 ರನ್‌ಗಳಿರುವಾಗ ಬೇರ್ಪಟ್ಟರು. ಈ ಜೋಡಿಯನ್ನು ಗ್ಯಾಬ್ರಿಯೆಲ್‌ ಮುರಿಯಲು ಯಶಸ್ವಿಯಾದರು.

ವೋಕ್ಸ್‌ 40 ರನ್‌ ಗಳಿಸಿ ಔಟಾದರೆ ರೂಟ್‌ ಸರಿಯಾಗಿ 100 ರನ್‌ ಗಳಿಸಿ ಅಜೆಯರಾಗಿ ಉಳಿ ದರು. 94 ಎಸೆತ ಎದುರಿಸಿದ ಅವರು 11 ಬೌಂಡರಿ ಬಾರಿಸಿದರು. ಬೆನ್‌ ಸ್ಟೋಕ್ಸ್‌ ಬೌಂಡರಿ ಬಾರಿಸಿ ತಂಡದ ಗೆಲುವು ಸಾರಿದರು.

ನಿಧಾನಗತಿಯ ಆರಂಭ
ಬಿಗ್‌ ಗನ್‌ ಗೈಲ್‌ ಎಂದಿನಂತೆ ಸ್ಫೋಟಕ ಆಟ ಆಡಿಲ್ಲ. ಎವಿನ್‌ ಲೆವಿಸ್‌ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಕಂಡರು. ಆದರೆ ನಿಕೋಲಸ್‌ ಪೂರನ್‌ ಮತ್ತು ಶಿಮ್ರನ್‌ ಹೆಟ್‌ಮೈರ್‌ ಅವರ ತಾಳ್ಮೆಯ ಆಟದಿಂದಾಗಿ ವೆಸ್ಟ್‌ಇಂಡೀಸ್‌ ಸಾಧಾರಣ ಮೊತ್ತ ದಾಖಲಿಸಿತು.

Advertisement

ಗೇಲ್‌ 36 ರನ್‌ ಗಳಿಸಿದರೂ ಅದರಲ್ಲಿ ಮಿಂಚು ಕಾಣಲಿಲ್ಲ. ಲೆವಿಸ್‌ ಬೇಗನೇ ಔಟಾದ ಕಾರಣ ಸ್ವಲ್ಪಮಟ್ಟಿಗೆ ಒತ್ತಡಕ್ಕೆ ಒಳಗಾದ ಗೇಲ್‌ ನಿಧಾನಗತಿಯಲ್ಲಿ ಆಡಿದರು. ಗೇಲ್‌ ಮತ್ತು ಹೋಪ್‌ ಇಂಗ್ಲೆಂಡ್‌ ದಾಳಿಯೆದುರು ರನ್‌ ಗಳಿಸಲು ಒದ್ದಾಡಿದರು. ಹೋಪ್‌ 11 ರನ್‌ ಗಳಿಸಲು 30 ಎಸೆತ ತೆಗೆದುಕೊಂಡರು. ಗೇಲ್‌ 41 ಎಸೆತಗಳಿಂದ 36 ರನ್‌ ಹೊಡೆದರು. 13ನೇ ಓವರಿನಲ್ಲಿ ಗೇಲ್‌ ಔಟ್‌ ಆದಾಗ ವೆಸ್ಟ್ಂಡೀಸ್‌ 54 ರನ್‌ ಗಳಿಸಿತ್ತು.

ಪೂರನ್‌ ಚೊಚ್ಚಲ ಅರ್ಧಶತಕ
ಯುವ ಆಟಗಾರ ಪೂರನ್‌ ಅವರ ತಾಳ್ಮೆಯ ಆಟದಿಂದಾಗಿ ವಿಂಡೀಸ್‌ ಚೇತರಿಕೆ ಕಂಡಿತು. ಹೆಟ್‌ಮೈರ್‌ ಜತೆ ನಾಲ್ಕನೇ ವಿಕೆಟಿಗೆ 89 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡ ಪೂರನ್‌ ರನ್ನಿಗಾಗಿ ಪರದಾಡುತ್ತಿದ್ದ ತಂಡಕ್ಕೆ ಬಲ ತುಂಬಿದರು. 78 ಎಸೆತ ಎದುರಿಸಿದ ಪೂರನ್‌ 63 ರನ್‌ ಗಳಿಸಿದರು. ಇದು ಅವರ ಚೊಚ್ಚಲ ಅರ್ಧಶತಕವಾಗಿದೆ. 3 ಬೌಂಡರಿ ಬಾರಿಸಿದ ಅವರು 1 ಸಿಕ್ಸರ್‌ ಸಿಡಿಸಿದರು. ಹೆಟ್‌ಮೈರ್‌ 39 ರನ್‌ ಹೊಡೆದರು.

ಹಠಾತ್‌ ಕುಸಿತ
ಪೂರನ್‌-ಹೆಟ್‌ಮೈರ್‌ ಜೋಡಿ ಮುರಿದ ಬಳಕ ವಿಂಡೀಸ್‌ ಮತ್ತೆ ಹಠಾತ್‌ ಕುಸಿತ ಕಂಡಿತು. 68 ರನ್‌ ಅಂತರದಲ್ಲಿ ತಂಡ ಕೊನೆಯ 7 ವಿಕೆಟ್‌ ಕಳೆದುಕೊಂಡಿತು. ಹೋಲ್ಡರ್‌, ರಸೆಲ್‌, ಬ್ರಾತ್‌ವೇಟ್‌ ಮತ್ತೆ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದರು. 144 ರನ್ನಿಗೆ 3 ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌ 212 ರನ್‌ ತಲುಪುವಷ್ಟರಲ್ಲಿ ಆಲೌಟಾಯಿತು.

ಆರ್ಚರ್‌, ವುಡ್‌ ತಲಾ 3 ವಿಕೆಟ್‌
ಇಂಗ್ಲೆಂಡಿನ ವೇಗಿಗಳ ಪಡೆ ಮತ್ತೆ ಮಾರಕ ದಾಳಿ ಸಂಘಟಿಸಿ ವಿಂಡೀಸ್‌ ಆಟಗಾರರನ್ನು ಕಟ್ಟಿಹಾಕಲು ಯಶಸ್ವಿಯಾದರು. ಆರ್ಚರ್‌, ಮಾರ್ಕ್‌ ವುಡ್‌, ವೋಕ್ಸ್‌ ಮತ್ತು ಪ್ಲಂಕೆಟ್‌ ಉತ್ತಮ ದಾಳಿ ನಡೆಸಿ ವಿಂಡೀಸ್‌ಗೆ ಪ್ರಬಲ ಹೊಡೆತ ನೀಡಿದರು. ಆರ್ಚರ್‌ ಮತ್ತು ವುಡ್‌ ತಲಾ ಮೂರು ವಿಕೆಟ್‌ ಕಿತ್ತರೆ ರೂಟ್‌ 2 ವಿಕೆಟ್‌ ಪಡೆದು ಮಿಂಚಿದರು.

ಸ್ಕೋರ್‌ ಪಟ್ಟಿ
ವೆಸ್ಟ್‌ ಇಂಡೀಸ್‌
ಕ್ರಿಸ್‌ ಗೇಲ್‌ ಸಿ ಬೇರ್‌ಸ್ಟೊ ಬಿ ಪ್ಲಂಕೆಟ್‌ 36
ಎವಿನ್‌ ಲೆವಿಸ್‌ ಬಿ ವೋಕ್ಸ್‌ 2
ಶೈಹೋಪ್‌ ಎಲ್‌ಬಿಡಬ್ಲ್ಯು ಬಿ ವುಡ್‌ 11
ನಿಕೋಲಸ್‌ ಪೂರನ್‌ ಸಿ ಬಟ್ಲರ್‌ ಬಿ ಆರ್ಚರ್‌ 63
ಶಿಮ್ರಾನ್‌ ಹೆಟ್‌ಮೈರ್‌ ಸಿ ಮತ್ತು ಬಿ ರೂಟ್‌ 39
ಜಾಸನ್‌ ಹೋಲ್ಡರ್‌ ಸಿ ಮತ್ತು ಬಿ ರೂಟ್‌ 9
ಆ್ಯಂಡ್ರೆ ರಸೆಲ್‌ ಸಿ ವೋಕ್ಸ್‌ ಬಿ ವುಡ್‌ 21
ಕಾರ್ಲೊಸ್‌ ಬ್ರಾತ್‌ವೇಟ್‌ ಸಿ ಬಟ್ಲರ್‌ ಬಿ ಆರ್ಚರ್‌ 14
ಶೆಲ್ಡನ್‌ ಕಾಟ್ರೆಲ್‌ ಎಲ್‌ಬಿಡಬ್ಲ್ಯು ಬಿ ಆರ್ಚರ್‌ 0
ಒಶೇನ್‌ ಥಾಮಸ್‌ ಔಟಾಗದೆ 0
ಶಾನನ್‌ ಗ್ಯಾಬ್ರಿಯಲ್‌ ಬಿ ವುಡ್‌ 0
ಇತರ 17
ಒಟ್ಟು ( 44.4 ಓವರ್‌ಗಳಲ್ಲಿ ಆಲೌಟ್‌) 212
ವಿಕೆಟ್‌ ಪತನ: 4-1, 2-54, 3-55, 4-144, 5-156, 6-188, 7-202, 8-202, 9-211.
ಬೌಲಿಂಗ್‌:
ಕ್ರಿಸ್‌ ವೋಕ್ಸ್‌ 5-2-16-1
ಜೋಫ‌Å ಆರ್ಚರ್‌ 9-1-30-3
ಲಿಯಮ್‌ ಪ್ಲಂಕೆಟ್‌ 5-0-30-1
ಮಾರ್ಕ್‌ ವುಡ್‌ 6.4-0-18-3
ಬೆನ್‌ ಸ್ಟೋಕ್ಸ್‌ 4-0-25-0
ಆದಿಲ್‌ ರಶೀದ್‌ 10-0-61-0
ಜೋ ರೂಟ್‌ 5-0-27-2
ಇಂಗ್ಲೆಂಡ್‌
ಜಾನಿ ಬೇರ್‌ಸ್ಟೊ ಸಿ ಬ್ರಾತ್‌ವೇಟ್‌ ಬಿ ಗ್ಯಾಬ್ರಿಯಲ್‌ 45
ಜೋ ರೂಟ್‌ ಔಟಾಗದೆ 100
ಕ್ರಿಸ್‌ ವೋಕ್ಸ್‌ ಸಿ ಅಲೆನ್‌ ಬಿ ಗ್ಯಾಬ್ರಿಯಲ್‌ 40
ಬೆನ್‌ ಸ್ಟೋಕ್ಸ್‌ ಔಟಾಗದೆ 10
ಇತರ 18
ಒಟ್ಟು( 33.1 ಓವರ್‌ಗಳಲ್ಲಿ 2 ವಿಕೆಟಿಗೆ) 213
ವಿಕೆಟ್‌ ಪತನ:1-95, 2-199.
ಬೌಲಿಂಗ್‌
ಶೆಲ್ಡನ್‌ ಕಾಟ್ರೆಲ್‌ 3-0-17-0
ಒಶೇನ್‌ ಥಾಮಸ್‌ 6-0-43-0
ಶಾನನ್‌ ಗ್ಯಾಬ್ರಿಯಲ್‌ 7-0-49-2
ಆಂಡ್ರೆ ರಸೆಲ್‌ 2-0-14-0
ಜಾಸನ್‌ ಹೋಲ್ಡರ್‌ 5.1-0-31-0
ಕಾರ್ಲೊಸ್‌ ಬ್ರಾತ್‌ವೇಟ್‌ 5-0-35-0
ಕ್ರಿಸ್‌ ಗೇಲ್‌ 5-0-22-0

Advertisement

Udayavani is now on Telegram. Click here to join our channel and stay updated with the latest news.

Next