ದೋಹಾ: “ಅಲ್ ಬೈತ್ ಸ್ಟೇಡಿಯಂ’ನಲ್ಲಿ ಶುಕ್ರವಾರ ನಡೆದ ಇಂಗ್ಲೆಂಡ್-ಅಮೆರಿಕ ನಡುವಿನ ಪಂದ್ಯ ಕೂಡ ಡ್ರಾದಲ್ಲಿ ಮುಗಿಯಿತು. ಈ ಮುಖಾಮುಖಿಯಲ್ಲಿ ಎರಡೂ ತಂಡಗಳು ಗೋಲು ಬಾರಿಸಲು ವಿಫಲವಾದವು.
ಇರಾನ್ ವಿರುದ್ಧ 6-2ರಿಂದ ಗೆದ್ದು ಹಾರಾಡುತ್ತಿದ್ದ ಇಂಗ್ಲೆಂಡ್ ಪಡೆ “ಯಂಗ್ ಅಮೆರಿಕನ್ ಟೀಮ್’ಗೆ
ಸಾಟಿಯಾಗಲಿಲ್ಲ. ಅದು ಈ ಪಂದ್ಯವನ್ನು ಉಳಿಸಿಕೊಂಡು ಒಂದಂಕ ಗಳಿಸಿದ್ದೇ ದೊಡ್ಡ ಸಾಧನೆ ಎನಿಸಿತು. ಅಮೆರಿಕದ ಆಟಗಾರ ಕ್ರಿಸ್ಟಿಯನ್ ಪುಲಿಸಿಕ್ ಮೊದಲಾರ್ಧದಲ್ಲಿ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇ ಆದರೆ ಇಂಗ್ಲೆಂಡ್ ದೊಡ್ಡ ಗಂಡಾಂತರ ಎದುರಿಸಬೇಕಿತ್ತು.
ಇಂಗ್ಲೆಂಡ್ ಒಮ್ಮೆಯಷ್ಟೇ ಗೋಲಿಗೆ ಹತ್ತಿರವಾಗಿತ್ತು. ಮೊದಲಾರ್ಧದಲ್ಲಿ ಮಾಸನ್ ಮೌಂಟ್ ಸಾಧ್ಯತೆಯೊಂದನ್ನು ತೆರೆದಿರಿಸಿದ್ದರು. ಆದರೆ ಅವರ ಪ್ರಯತ್ನ ಫಲ ನೀಡಲಿಲ್ಲ.
ಡ್ರಾ ಫಲಿತಾಂಶದ ಹೊರತಾಗಿಯೂ ಇಂಗ್ಲೆಂಡ್ “ಬಿ’ ವಿಭಾಗದ ಅಗ್ರಸ್ಥಾನ ಕಾಯ್ದುಕೊಂಡಿದೆ (4 ಅಂಕ). ಅಮೆರಿಕದ ಎರಡೂ ಪಂದ್ಯಗಳು ಡ್ರಾಗೊಂಡಿದ್ದು, ಅದು 2 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದೆ. ದ್ವಿತೀಯ ಸ್ಥಾನದಲ್ಲಿರುವ ಇರಾನ್ ವಿರುದ್ಧ ಅಮೆರಿಕ ಕೊನೆಯ ಪಂದ್ಯ ಆಡಲಿದ್ದು, ಗೆದ್ದರೆ ನಾಕೌಟ್ ಅವಕಾಶ ಎದುರಾಗಲಿದೆ.