ಮ್ಯಾಂಚೆಸ್ಟರ್: ಒಂದು ಪಂದ್ಯದ ವಿರಾಮದ ಬಳಿಕ ಆಡಲಿಳಿದ ಸ್ಟೀವನ್ ಸ್ಮಿತ್, ಆ್ಯಶಸ್ ಸರಣಿಯ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಪ್ರಚಂಡ ದ್ವಿಶತಕ ಬಾರಿಸಿದ್ದಾರೆ. ಆಸ್ಟ್ರೇಲಿಯ 8 ವಿಕೆಟಿಗೆ 447 ರನ್ ಪೇರಿಸಿ ಎರಡನೇ ದಿನದ ಅಂತಿಮ ಅವಧಿಯ ಆಟ ಮುಂದುವರಿಸುತ್ತಿದೆ.
ಸ್ಟೀವನ್ ಸ್ಮಿತ್ 211 ಬಾರಿಸಿದರು.ನಾಯಕ ಟಿಮ್ ಪೇನ್ ಗಳಿಕೆ 58 ರನ್. 224ಕ್ಕೆ 5ನೇ ವಿಕೆಟ್ ಬಿದ್ದ ಬಳಿಕ ಇವರಿಬ್ಬರು ಸೇರಿಕೊಂಡು 145 ರನ್ ಜತೆಯಾಟ ನಿಭಾಯಿಸಿದರು.
ಇದು ಸ್ಮಿತ್ ಅವರ 26ನೇ ಟೆಸ್ಟ್ ಶತಕ. ಈ ಸರಣಿಯಲ್ಲಿ ಮೂರನೆ ಯದು. ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಅವರು ಕ್ರಮವಾಗಿ 144 ಮತ್ತು 142 ರನ್ ಹೊಡೆದಿದ್ದರು. ಲಾರ್ಡ್ಸ್‌ನಲ್ಲಿ ತಲೆಗೆ ಏಟು ತಿಂದ ಬಳಿಕವೂ 92 ರನ್ ಬಾರಿಸಿದ್ದರು.
319 ಎಸೆತಗಳನ್ನು ನಿಭಾಯಿಸಿದ ಸ್ಮಿತ್, 24 ಬೌಂಡರಿ, 2 ಸಿಕ್ಸರ್ ಬಾರಿಸಿ ಇಂಗ್ಲೆಂಡ್ ಬೌಲರ್‌ಗಳನ್ನು ಕಾಡಿದರು. ಮೊದಲ ದಿನ ಮಳೆಯಿಂದಾಗಿ ಕೇವಲ 44 ಓವರ್‌ಗಳ ಆಟವಷ್ಟೇ ಸಾಧ್ಯವಾಗಿತ್ತು. ಆಗ ಆಸ್ಟ್ರೇಲಿಯ 3 ವಿಕೆಟಿಗೆ 170 ರನ್ ಗಳಿಸಿತ್ತು. ಸ್ಮಿತ್ 60 ರನ್ ಮಾಡಿ ಆಡುತ್ತಿದ್ದರು. ದ್ವಿತೀಯ ದಿನದಾಟದಲ್ಲಿ ಹೆಡ್ 19, ವೇಡ್ 16 ರನ್ ಮಾಡಿ ನಿರ್ಗಮಿಸಿದರು. ಸ್ಟುವರ್ಟ್ ಬ್ರಾಡ್ 3 ವಿಕೆಟ್ ಉರುಳಿಸಿ ಹೆಚ್ಚಿನ ಯಶಸ್ಸು ಸಾಧಿಸಿದ್ದಾರೆ.