Advertisement

ನಾಯಕನಾದ ಮೊದಲ ಪಂದ್ಯದಲ್ಲೇ ಜೋ ರೂಟ್‌ ದಾಖಲೆ

03:45 AM Jul 08, 2017 | Team Udayavani |

ಲಂಡನ್‌: ಟೆಸ್ಟ್‌ ನಾಯಕತ್ವ ವಹಿಸಿದ ಮೊದಲ ಪಂದ್ಯದಲ್ಲೇ ಜೋ ರೂಟ್‌ ನೂತನ ದಾಖಲೆ ಸ್ಥಾಪಿಸಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯದಲ್ಲಿ ರೂಟ್‌ 190 ರನ್‌ ಬಾರಿಸಿದ್ದು, ಇಂಗ್ಲೆಂಡ್‌ 458 ರನ್ನಿಗೆ ಮೊದಲ ಇನ್ನಿಂಗ್ಸ್‌ ಮುಗಿಸಿದೆ. 

Advertisement

ದ್ವಿತೀಯ ದಿನದ ಬ್ಯಾಟಿಂಗ್‌ ಮುಂದುವರಿಸುತ್ತಿರುವ ದಕ್ಷಿಣ ಆಫ್ರಿಕಾ 17ಕ್ಕೆ 2, 76ಕ್ಕೆ 4 ಎಂಬ ಸ್ಥಿತಿಯಲ್ಲಿದ್ದ ಇಂಗ್ಲೆಂಡನ್ನು ಆಧರಿಸತೊಡಗಿದ ಜೋ ರೂಟ್‌ ನಾಯಕತ್ವದ ಒತ್ತಡವನ್ನು ಮೆಟ್ಟಿ ನಿಂತರು. ಮೊದಲ ದಿನದ ಅಂತ್ಯಕ್ಕೆ ತಂಡದ ಮೊತ್ತ 5ಕ್ಕೆ 357ರ ತನಕ ವಿಸ್ತರಿಸಲ್ಪಟ್ಟಿತು. ಆಗ ರೂಟ್‌ 184 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಶುಕ್ರವಾರ ಮತ್ತೆ 6 ರನ್‌ ಸೇರಿಸುವಷ್ಟರಲ್ಲಿ ಮಾರ್ಕೆಲ್‌ಗೆ ವಿಕೆಟ್‌ ಒಪ್ಪಿಸಿದರು. ಅವರ 190 ರನ್‌ 234 ಎಸೆತಗಳಿಂದ ಬಂತು. ಇದರಲ್ಲಿ 27 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು.

ಇಂಗ್ಲೆಂಡಿನ ನಾಯಕತ್ವ ವಹಿಸಿದ ಮೊದಲ ಟೆಸ್ಟ್‌ ಪಂದ್ಯದಲ್ಲೇ ಬಾರಿಸಿದ ಸರ್ವಾಧಿಕ ಮೊತ್ತದ ದಾಖಲೆ ಜೋ ರೂಟ್‌ ಅವರದ್ದಾಗಿದೆ. ಇದು ಟೆಸ್ಟ್‌ ಇತಿಹಾಸದಲ್ಲಿ ನಾಯಕನೊಬ್ಬ ತನ್ನ ಮೊದಲ ಪಂದ್ಯದಲ್ಲೇ ಹೊಡೆದ 4ನೇ ಸರ್ವಾಧಿಕ ಗಳಿಕೆ. ರೂಟ್‌ಗಿಂತ ಮಿಗಿಲಾದ ಸಾಧನೆಗೈದ ನಾಯಕರೆಂದರೆ ನ್ಯೂಜಿಲ್ಯಾಂಡಿನ ಗ್ರಹಾಂ ಡೌಲಿಂಗ್‌ (239), ವೆಸ್ಟ್‌ ಇಂಡೀಸಿನ ಶಿವನಾರಾಯಣ್‌ ಚಂದರ್‌ಪಾಲ್‌ (ಔಟಾಗದೆ 203) ಮತ್ತು ಆಸ್ಟ್ರೇಲಿಯದ ಕ್ಲೇಮ್‌ ಹಿಲ್‌ (191).
ಇಂಗ್ಲೆಂಡ್‌ ಸರದಿಯಲ್ಲಿ ಮಿಂಚಿದ ಇತರರೆಂದರೆ ಮೊಯಿನ್‌ ಅಲಿ (87), ಸ್ಟುವರ್ಟ್‌ ಬ್ರಾಡ್‌ (ಔಟಾಗದೆ 57) ಮತ್ತು ಬೆನ್‌ ಸ್ಟೋಕ್ಸ್‌ (56).

ಆತಿಥೇಯರ ಹತ್ತೂ ವಿಕೆಟ್‌ಗಳನ್ನು ಆಫ್ರಿಕಾದ ವೇಗಿಗಳೇ ಉಡಾಯಿಸಿದರು. ಮಾರ್ನೆ ಮಾರ್ಕೆಲ್‌ 115ಕ್ಕೆ 4, ಫಿಲಾಂಡರ್‌ 67ಕ್ಕೆ 3ಹಾಗೂ ರಬಾಡ 123ಕ್ಕೆ 3 ವಿಕೆಟ್‌ ಉರುಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next