Advertisement

ಅಜೇಯ ದಾಖಲೆಯ ನಿರೀಕ್ಷೆಯಲ್ಲಿ ಅಜರ್‌ ಬಳಗ

03:49 AM Aug 05, 2020 | Hari Prasad |

ಮ್ಯಾಂಚೆಸ್ಟರ್: ಒಂದೆಡೆ ಮಂಗಳವಾರವಷ್ಟೇ ಐರ್ಲೆಂಡ್‌ ಎದುರು ಅಂತಿಮ ಏಕದಿನ ಪಂದ್ಯವಾಡಿರುವ ಇಂಗ್ಲೆಂಡ್‌, ಮರುದಿನವೇ ಪ್ರವಾಸಿ ಪಾಕಿಸ್ಥಾನ ವಿರುದ್ಧ ಬಹು ನಿರೀಕ್ಷೆಯ ಟೆಸ್ಟ್‌ ಸರಣಿ ಆರಂಭಿಸುತ್ತಿರುವುದೊಂದು ಕೌತುಕವೇ ಸರಿ.

Advertisement

ಪ್ರತಿಯೊಂದು ಮಾದರಿಗೂ ವಿಭಿನ್ನ ತಂಡವಿರುವಾಗ ಇಂಥದ್ದೆಲ್ಲ ವಿಶೇಷ ಕ್ರಿಕೆಟ್‌ನಲ್ಲಿ ನಡೆಯುತ್ತದೆ ಎಂಬುದನ್ನು ಕ್ರಿಕೆಟ್‌ ಜನಕರೇ ತೋರಿಸಿ ಕೊಡುತ್ತಿರುವುದು ಉತ್ತಮ ಬೆಳವಣಿಗೆ.

ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯವನ್ನು ಕಳೆದುಕೊಂಡ ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡದ್ದು ಇಂಗ್ಲೆಂಡಿನ ತವರಿನ ಪರಾಕ್ರಮಕ್ಕೆ ಸಾಕ್ಷಿ. ಆದರೆ ಕೆರಿಬಿಯನ್ನರಿಗಿಂತ ಪಾಕ್‌ ಸವಾಲು ಹೆಚ್ಚು ಕಠಿನ ಎಂಬುದನ್ನು ಮರೆಯುವಂತಿಲ್ಲ. 2010ರ ಬಳಿಕ ಪಾಕ್‌ ತಂಡ ಇಂಗ್ಲೆಂಡ್‌ ವಿರುದ್ಧ ಸರಣಿಯನ್ನೇ ಸೋತಿಲ್ಲ ಎಂಬುದು ಇದಕ್ಕೊಂದು ಉತ್ತಮ ನಿದರ್ಶನ.

ಹತ್ತರಲ್ಲಿ ನಾಲ್ಕು ಗೆಲುವು
2010ರ ಸರಣಿ ಸೋಲಿನ ಬಳಿಕ ಯುಎಇಯಲ್ಲಿ ಎರಡು ಸಲ ಪಾಕ್‌ ಪಡೆ ಆಂಗ್ಲರ ಮೇಲೆ ಸವಾರಿ ಮಾಡಿತು (2011-12 ಮತ್ತು 2015-16). ಬಳಿಕ 2016 ಮತ್ತು 2018ರ ಇಂಗ್ಲೆಂಡ್‌ ಪ್ರವಾಸದ ಎರಡೂ ಸರಣಿಗಳನ್ನು ಡ್ರಾ ಮಾಡಿಕೊಂಡಿತು.

2010ರ ಬಳಿಕ ಇಂಗ್ಲೆಂಡ್‌ ವಿರುದ್ಧ ಆಡಿದ 10 ಟೆಸ್ಟ್‌ಗಳಲ್ಲಿ ನಾಲ್ಕನ್ನು ಜಯಿಸಿದ್ದು ಪಾಕಿಸ್ಥಾನದ ಅಮೋಘ ಸಾಧನೆಯೇ ಸರಿ. ಈ ಅವಧಿಯಲ್ಲಿ ಏಶ್ಯದ ಬೇರೆ ಯಾವುದೇ ತಂಡ ಇಂಗ್ಲೆಂಡ್‌ ಎದುರು ಇಂಥದ್ದೊಂದು ಗೆಲುವಿನ ದಾಖಲೆ ಹೊಂದಿಲ್ಲ. ಇದನ್ನು ಮುಂದುವರಿಸಿಕೊಂಡು ಹೋಗುವುದು ಅಥವಾ ಸರಣಿ ಗೆಲ್ಲುವು ಅಜರ್‌ ಅಲಿ ಬಳಗದ ಗುರಿ ಆಗಿದ್ದರೆ ಅಚ್ಚರಿಯೇನಿಲ್ಲ.

Advertisement

2016ರ ಇಂಗ್ಲೆಂಡ್‌ ಪ್ರವಾಸದ ವೇಳೆ ನಾಯಕನಾಗಿದ್ದ ಮಿಸ್ಬಾ ಉಲ್‌ ಹಕ್‌ ಈ ಬಾರಿ ಕೋಚ್‌ ಆಗಿದ್ದಾರೆ. ಅಂದಿನ ಸರಣಿ 2-2ರಿಂದ ಸಮನಾದುದೊಂದು ರೋಚಕ ಕಹಾನಿ! ಆದರೆ ಕೇವಲ ಅಂಕಿಅಂಶಗಳನ್ನು ನಂಬಿ ಹೋರಾಟವನ್ನು ಸಂಘಟಿಸುವ ಸಮಯ ಇದಲ್ಲ ಎಂದು ಮಿಸ್ಬಾ ಈಗಾಗಲೇ ತನ್ನ ತಂಡವನ್ನು ಎಚ್ಚರಿಸಿದ್ದಾರೆ.

ಇಂಗ್ಲೆಂಡ್‌ನ‌ಲ್ಲಿ ಮೇಲುಗೈ ಸಾಧಿಸಬೇಕಾದರೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡೂ ಕ್ಲಿಕ್‌ ಆಗುವುದು ಅಗತ್ಯ. ಅದರಲ್ಲೂ ವೇಗಿಗಳು ಮೆರೆದಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ನೋಡುವುದಾದರೆ ಪಾಕಿಸ್ಥಾನದ ಪೇಸ್‌ ವಿಭಾಗ ಬಲಿಷ್ಠವಾಗಿಯೇ ಇದೆ. ಇವರಿಗೆ ಆರಂಭಿಕರಾದ ಸಿಬ್ಲಿ-ಬರ್ನ್ಸ್ ದಿಟ್ಟ ಉತ್ತರ ನೀಡುವ ಅಗತ್ಯವಿದೆ. ಉಳಿದಂತೆ ಅನುಭವಿಗಳ ಬ್ಯಾಟಿಂಗ್‌ ಪಡೆ ಆತಿಥೇಯರ ಬಳಿ ಇದೆ.

600ರ ಗಡಿಯತ್ತ ಆ್ಯಂಡರ್ಸನ್‌
ಇಂಗ್ಲೆಂಡಿನ ವೇಗಿಗಳೂ ಅಮೋಘ ಫಾರ್ಮ್ನಲ್ಲಿದ್ದಾರೆ. 500 ವಿಕೆಟ್‌ಗಳ ಸಾಧಕ ಬ್ರಾಡ್‌ ಎಷ್ಟು ಅಪಾಯಕಾರಿ ಎಂಬುದನ್ನು ಕಳೆದೆರಡು ಟೆಸ್ಟ್‌ಗಳಲ್ಲಿ ತೋರಿಸಿ ಕೊಟ್ಟಿದ್ದಾರೆ. ಹಾಗೆಯೇ 600 ವಿಕೆಟ್‌ಗಳ ಅಂಚಿನಲ್ಲಿರುವ ಆ್ಯಂಡರ್ಸನ್‌ ಹೆಚ್ಚು ಶಕ್ತಿಶಾಲಿಯಾಗಿ ಎರಗುವ ಯೋಜನೆಯಲ್ಲಿದ್ದಾರೆ. ಇನ್ನು 11 ವಿಕೆಟ್‌ ಉರುಳಿಸಿದರೆ ಅವರು ಮುರಳೀಧರನ್‌, ಶೇನ್‌ ವಾರ್ನ್, ಅನಿಲ್‌ ಕುಂಬ್ಳೆ ಸಾಲಿನಲ್ಲಿ ವಿರಾಜಮಾನರಾಗಲಿದ್ದಾರೆ. 600 ವಿಕೆಟ್‌ ಉಡಾಯಿಸಿದ ಟೆಸ್ಟ್‌ ಇತಿಹಾಸದ ಮೊದಲ ವೇಗಿ ಎಂಬ ಹಿರಿಮೆ ;ಆ್ಯಂಡಿ’ಯದ್ದಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next