Advertisement

ಇಂಗ್ಲೆಂಡಿಗೆ ಎದುರಾಗಿದೆ ತವರಿನ ಪ್ರತಿಷ್ಠೆದ.ಆಫ್ರಿಕಾ ಮೇಲೆ ನಿರೀಕ್ಷೆಯ ಪರಾಕಾಷ್ಠೆ

01:17 AM May 30, 2019 | Team Udayavani |

ಲಂಡನ್‌: ಬಾಂಗ್ಲಾದೇಶದ ಕೈಯಲ್ಲಿ ಆಘಾತಕಾರಿ ಸೋಲುಂಡು ಕಳೆದ ವಿಶ್ವಕಪ್‌ನಿಂದ ನಿರ್ಗಮಿಸಿದ 1,542 ದಿನಗಳ ಬಳಿಕ ಇಂಗ್ಲೆಂಡ್‌ ಭಾರೀ ನಿರೀಕ್ಷೆ ಹಾಗೂ ಫೇವರಿಟ್ ಪಟ್ಟದೊಂದಿಗೆ 2019ರ ವಲ್ಡ್ರ್ಕಪ್‌ ಸಮರಕ್ಕೆ ಅಣಿಯಾಗಿದೆ. ಗುರುವಾರ ‘ಕೆನ್ನಿಂಗ್ಟನ್‌ ಓವಲ್’ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಇಯಾನ್‌ ಮಾರ್ಗನ್‌ ಪಡೆ ಇನ್ನೊಂದು ಬಲಿಷ್ಠ ತಂಡವಾದ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.

Advertisement

ವಿಶ್ವಕಪ್‌ ಮಟ್ಟಿಗೆ ಇವೆರಡೂ ಒಂದೇ ದೋಣಿಯ ಪಯಣಿಗರು. ಸಾಧನೆಯೇನೋ ಅಮೋಘ, ಆದರೆ ಅದೃಷ್ಟ ಪ್ರತೀ ಸಲವೂ ಕೈಕೊಡುತ್ತ ಬಂದಿದೆ. ಹೀಗಾಗಿ ಈ ಎರಡೂ ತಂಡಗಳಿಗೆ ಈವರೆಗೆ ಟ್ರೋಫಿಯೂ ಮರೀಚಿಕೆಯಾಗಿದೆ. ಈ ಸಲವಾದರೂ ಚಾಂಪಿಯನ್‌ ಎನಿಸಿಕೊಂಡು ಮೆರೆದಾಡಲು ಎರಡೂ ತಂಡಗಳು ಟೊಂಕ ಕಟ್ಟಿವೆ. ಗುರುವಾರ ರಾತ್ರಿ ಮೊದಲ ಸುತ್ತಿನ ಫ‌ಲಿತಾಂಶ ಹೊರಬೀಳಲಿದೆ. ಇದು ತಂಡದ ಮುನ್ನಡೆಗೆ ರಹದಾರಿಯಾಗಲಿದೆ.

ಇಂಗ್ಲೆಂಡಿನ ಯಶೋಗಾಥೆ
2015ರ ಶೋಚನೀಯ ಪ್ರದರ್ಶನದ ಬಳಿಕ ಇಂಗ್ಲೆಂಡ್‌ ಏಕದಿನದಲ್ಲಿ ಬೆಳೆದ ಪರಿ ಅಮೋಘ. ಪ್ರಧಾನ ಕೋಚ್ ಟ್ರೆವರ್‌ ಬೇಲಿಸ್‌ ಮತ್ತು ಕ್ರಿಕೆಟ್ ನಿರ್ದೇಶಕ ಆ್ಯಂಡ್ರ್ಯೂ ಸ್ಟ್ರಾಸ್‌ ಅವರ ಪ್ರಯತ್ನದ ಫ‌ಲವಾಗಿ ಇಂದು ಇಂಗ್ಲೆಂಡ್‌ ತಂಡ ಈ ಕೂಟದ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ.

ಏಕದಿನ ಪಂದ್ಯಗಳಿಗೆಂದೇ ರೂಪುಗೊಂಡಂ ತಿರುವ ಬ್ಯಾಟಿಂಗ್‌ ಲೈನ್‌ಅಪ್‌, ಸಶಕ್ತ ಆಲ್ರೌಂಡರ್‌ಗಳ ಪಡೆ, ಘಾತಕ ಬೌಲಿಂಗ್‌ ದಾಳಿ ಇಂಗ್ಲೆಂಡ್‌ ತಂಡದ ಯಶಸ್ಸಿನ ಕತೆಯನ್ನು ಸಾರುತ್ತಲೇ ಬಂದಿದೆ. ಕಳೆದ ಕೆಲವು ಪಂದ್ಯಗಳಿಂದ ನಿರಂತರವಾಗಿ 350 ರನ್‌ ಬಾರಿಸುತ್ತ ಬಂದಿರುವುದು ಆಂಗ್ಲರ ಬ್ಯಾಟಿಂಗ್‌ ಸ್ಥಿರತೆಗೆ ಸಾಕ್ಷಿ. ಆಕ್ರಮಣಕಾರಿ ಆಟವೇ ಇವರ ಮೂಲಮಂತ್ರ. 8ನೇ ಸರದಿ ವರೆಗೂ ರನ್‌ ಪ್ರವಾಹ ಹರಿಯುತ್ತಲೇ ಇರುತ್ತದೆ.

ರಾಯ್‌, ಬೇರ್‌ಸ್ಟೊ, ರೂಟ್, ಮಾರ್ಗನ್‌, ಸ್ಟೋಕ್ಸ್‌, ಬಟ್ಲರ್‌, ಅಲಿ, ವೋಕ್ಸ್‌… ಎಲ್ಲರೂ ಬ್ಯಾಟಿಂಗ್‌ ಘಟಾನುಘಟಿಗಳೇ. ಇವರಲ್ಲಿ ಯಾರನ್ನೆಲ್ಲ ತಡೆಯುವುದು ಎಂಬುದೇ ಎದುರಾಳಿಗಳ ಪಾಲಿನ ದೊಡ್ಡ ಸಮಸ್ಯೆ! ತವರಿನ ಲಾಭ ಕೂಡ ಇಂಗ್ಲೆಂಡಿಗಿದೆ.

Advertisement

ಓವರಿಗೆ 6.29 ರನ್‌ ಸರಾಸರಿ
ಕಳೆದ ವಿಶ್ವಕಪ್‌ ಅನಂತರ ಓವರಿಗೆ ಅತ್ಯಧಿಕ 6.29ರ ಸರಾಸರಿಯಲ್ಲಿ ರನ್‌ ಪೇರಿಸುತ್ತ ಬಂದಿರುವ ಇಂಗ್ಲೆಂಡ್‌ ಈ ಲೆಕ್ಕಾಚಾರದಲ್ಲಿ ಎಲ್ಲರಿಗಿಂತ ಮೇಲಿದೆ. ದ್ವಿತೀಯ ಸ್ಥಾನದಲ್ಲಿರುವ ಆಸ್ಟ್ರೇಲಿಯದ ಸರಾಸರಿ 5.72. ಏಕದಿನದ ಸರ್ವಾಧಿಕ ರನ್‌ ವಿಶ್ವದಾಖಲೆಯನ್ನೂ ಇಂಗ್ಲೆಂಡ್‌ ಇದೇ ಅವಧಿಯಲ್ಲಿ ಸ್ಥಾಪಿಸಿದೆ (6ಕ್ಕೆ 481 ರನ್‌). 2015ರ ಬಳಿಕ ಒಟ್ಟು 5 ಸಲ ತಂಡಗಳಿಂದ 400 ಪ್ಲಸ್‌ ರನ್‌ ದಾಖಲಾಗಿದೆ. ಇದರಲ್ಲಿ ಇಂಗ್ಲೆಂಡಿನದೇ ಸಿಂಹಪಾಲು (4).

ಇಂಗ್ಲೆಂಡ್‌ ಬೌಲಿಂಗ್‌ ವಿಭಾಗದ ಬಗ್ಗೆ ಇದೇ ಹೊಗಳಿಕೆ ಅರ್ಹವಾಗದು ನಿಜ. ಆದರೆ ಜೋಫ‌್ರ ಆರ್ಚರ್‌ ಸೇರ್ಪಡೆಯಿಂದ ಇಂಗ್ಲೆಂಡಿಗೆ ಭೀಮಬಲ ಬಂದಿದೆ!

ಪಾಸ್‌ ಆದೀತೇ ಡು ಪ್ಲೆಸಿಸ್‌ ಬಳಗ?
1992ರಿಂದ ವಿಶ್ವಕಪ್‌ ಆಡುತ್ತ ಬಂದಿರುವ ದಕ್ಷಿಣ ಆಫ್ರಿಕಾ ಈವರೆಗೆ ಜಬರ್ದಸ್ತ್ ಪ್ರದರ್ಶನ ನೀಡುತ್ತಲೇ ಬಂದಿದೆ. ಮಿನಿಮಮ್‌ ಸೆಮಿಫೈನಲ್ ಗ್ಯಾರಂಟಿ ಎಂಬಷ್ಟರ ಮಟ್ಟಿಗೆ ತಂಡ ಬಲಿಷ್ಠವಾಗಿದೆ. ಆದರೆ ಇಲ್ಲಿ ನಾಟಕೀಯ ರೀತಿಯಲ್ಲಿ ಎಡವಿ ಚೋಕರ್ ಪಟ್ಟ ಅಂಟಿಸಿಕೊಂಡಿರುವುದು ತಂಡದ ಹಣೆಬರಹವನ್ನು ಸಾರುತ್ತದೆ. ಈ ಕಳಂಕವನ್ನು ಹೊಡೆದೋಡಿಸುವ ಗುರಿ ಡು ಪ್ಲೆಸಿಸ್‌ ಬಳಗದ್ದಾಗಿದೆ.

2015ರ ವಿಶ್ವಕಪ್‌ ಸೆಮಿಫೈನಲ್ನಲ್ಲಿ ಹರಿಣಗಳ ಪಡೆ ಆತಿಥೇಯ ನ್ಯೂಜಿಲ್ಯಾಂಡಿಗೆ ಶರಣಾಗಿತ್ತು. ಅಂದು ಆಡಿದ್ದ ಡಿ ವಿಲಿಯರ್, ಮಾರ್ನೆ ಮಾರ್ಕೆಲ್ ಸೇವೆ ಈ ಬಾರಿ ಲಭಿಸುತ್ತಿಲ್ಲ. ಹೀಗಾಗಿ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ಸಾಧ್ಯವಾಗುತ್ತಿಲ್ಲ. ಡಿ ಕಾಕ್‌, ಡು ಪ್ಲೆಸಿಸ್‌ ಅವರನ್ನು ಹೆಚ್ಚು ನಂಬಿಕೊಂಡಿದೆ.

ಬ್ಯಾಟಿಂಗಿಗಿಂತ ಬೌಲಿಂಗ್‌ ವಿಭಾಗ ಹೆಚ್ಚು ಅಪಾಯಕಾರಿ. ವೇಗದ ಬೌಲಿಂಗ್‌ನಲ್ಲಿ ರಬಾಡ, ಎನ್‌ಗಿಡಿ, ಪ್ರಿಟೋರಿಯಸ್‌, ಸ್ಪಿನ್ನಿಗೆ ತಾಹಿರ್‌ ಇದ್ದಾರೆ. ಆದರೆ ಸ್ಟೇನ್‌ ಮೊದಲ ಪಂದ್ಯಕ್ಕೆ ಲಭ್ಯವಾಗದಿರುವುದೊಂದು ಹಿನ್ನಡೆ.

ಇಂಗ್ಲೆಂಡ್‌-ದಕ್ಷಿಣ ಆಫ್ರಿಕಾ

ಸ್ಥಳ:ಓವಲ್ ಆರಂಭ:3.00 ಪ್ರಸಾರ:ಸ್ಟಾರ್‌ ನ್ಪೋರ್ಟ್ಸ್
ವಿಶ್ವಕಪ್‌ ಮುಖಾಮುಖೀ

ಪಂದ್ಯ:06 ಇಂಗ್ಲೆಂಡ್‌ ಜಯ:03 ದಕ್ಷಿಣ ಆಫ್ರಿಕಾ ಜಯ:03

Advertisement

Udayavani is now on Telegram. Click here to join our channel and stay updated with the latest news.

Next